ಚಿರತೆ ದಾಳಿ: ಭಯಭೀತರಾದ ಗಂಗನದೊಡ್ಡಿ ಗ್ರಾಮಸ್ಧರು

| Published : Dec 22 2024, 01:33 AM IST

ಸಾರಾಂಶ

ಹನೂರು ತಾಲೂಕಿನ ಗಂಗನದೊಡ್ಡಿ ಗ್ರಾಮದ ಬಳಿ ಮೇಯುತ್ತಿದ್ದ ಮಂದೇ ಕುರಿ ಮೇಲೆ ಚಿರತೆ ದಾಳಿ ನಡೆಸಿ ಕುರಿಯನ್ನು ಕೊಂದು ಹಾಕಿದೆ.

ಕನ್ನಡಪ್ರಭ ವಾರ್ತೆ ಹನೂರು

ಚಿರತೆ ದಾಳಿಗೆ ಕುರಿ ಬಲಿಯಾಗಿರುವ ಘಟನೆ ಗಂಗನ ದೊಡ್ಡಿ ಗ್ರಾಮದಲ್ಲಿ ನಡೆದಿದ್ದು, ಈ ಘಟನೆಯಿಂದ ಗ್ರಾಮಸ್ಧರು ಭಯಭೀತರಾಗಿದ್ದಾರೆ.

ಹನೂರು ತಾಲೂಕಿನ ಗಂಗನದೊಡ್ಡಿ ಗ್ರಾಮದ ದತ್ತೇಶ್ ಕುಮಾರ್ ಜಮೀನಿನ ಬಳಿ ಮಧ್ಯಾಹ್ನ ಮಂದೇ ಕುರಿಗಳನ್ನು ಮೇಯಿಸುತ್ತಿದ್ದಾಗ ಹಠಾತ್ತನೇ ದಾಳಿ ನಡೆಸಿದ ಚಿರತೆಯು ಕುರಿಯನ್ನು ಕಚ್ಚಿ ಹೊತ್ತೊಯ್ಯುವ ಸಂದರ್ಭದಲ್ಲಿ ಅಲ್ಲೇ ಇದ್ದಂತ ಕುರಿಗಾಹಿಗಳು ಕಿರುಚಾಡುತ್ತಿದ್ದನ್ನು ನೋಡಿದಾಗ ಚಿರತೆ ಕುರಿಯನ್ನು ಬಿಟ್ಟು ಕಬ್ಬಿನ ತೋಟಕ್ಕೆ ಪರಾರಿಯಾಗಿದೆ ಎನ್ನಲಾಗಿದೆ.

ಕುರಿ ಬಲಿ ಪಡೆದ ಚಿರತೆ:

ಕಳೆದ ಹಲವಾರು ತಿಂಗಳ ಹಿಂದೆ ಚಿರತೆ ಈ ಭಾಗದಲ್ಲಿ ಸಾಕು ಪ್ರಾಣಿಗಳನ್ನು ಕೊಂದು ನಾಪತ್ತೆಯಾಗಿದ್ದ ಚಿರತೆ ಮತ್ತೆ ಶನಿವಾರ ಮಧ್ಯಾಹ್ನ ಕುರಿ ಮೇಯಿಸುತ್ತಿದ್ದಾಗ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದ ಪರಿಣಾಮ ಸ್ಥಳದಲ್ಲೇ ಕುರಿ ಸಾವನ್ನಪ್ಪಿದ್ದು ಈ ಬಗ್ಗೆ ಕುಳ್ಳ ಎಂಬ ರೈತನಿಗೆ ಸೇರಿರುವ ಮಂದೇ ಕುರಿ ಎಂದು ತಿಳಿದು ಬಂದಿದೆ.

ಭಯಭೀತರಾದ ರೈತರು:

ಹಗಲಿನಲ್ಲಿಯೇ ದಾಳಿ ನಡೆಸಿ ಕುರಿಯನ್ನು ಕೊಂದು ಹಾಕಿರುವ ಬಗ್ಗೆ ರೈತರು, ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಚಿರತೆ ಸೆರೆಗೆ ಆಗ್ರಹ:

ಕಳೆದ ಹಲವಾರು ತಿಂಗಳುಗಳಿಂದ ಈ ಭಾಗದಲ್ಲಿಯೇ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಚಿರತೆ ಸಾಕು ಪ್ರಾಣಿಗಳನ್ನು ಕೊಂದು ಓಡಿ ಹೋಗುತ್ತಿರುವ ಚಿರತೆಯನ್ನು ಅರಣ್ಯ ಅಧಿಕಾರಿಗಳು ಸೆರೆಹಿಡಿದು ಬೇರೆಡೆ ಬಿಡಬೇಕು ಎಂದು ರೈತ ಮುಖಂಡ ಅಮ್ಜದ್ ಖಾನ್ ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಪರಿಹಾರಕ್ಕೆ ಒತ್ತಾಯ:

ಚಿರತೆ ದಾಳಿಯಿಂದ ಕುರಿ ಸಾವನ್ನಪ್ಪಿದ್ದು, ಮಾಲಿಕ ಕುಳ್ಳನಿಗೆ ಅರಣ್ಯ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಂಘಟನೆ ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದೆ.