ಸಾರಾಂಶ
ತುರುವೇಕೆರೆ: ತಾಲೂಕಿನ ದಂಡಿನಶಿವರ ಹೋಬಳಿಯ ಅಮ್ಮಸಂದ್ರ ಗ್ರಾಮದ ತೋಟವೊಂದರಲ್ಲಿ ಮೇಯುತ್ತಿದ್ದ ಮೇಕೆಯ ಮೇಲೆ ಹಾಡುಹಗಲೇ ಚಿರತೆ ದಾಳಿ ಮಾಡಿರುವ ಘಟನೆ ಶನಿವಾರ ನಡೆದಿದೆ.
ತುರುವೇಕೆರೆ: ತಾಲೂಕಿನ ದಂಡಿನಶಿವರ ಹೋಬಳಿಯ ಅಮ್ಮಸಂದ್ರ ಗ್ರಾಮದ ತೋಟವೊಂದರಲ್ಲಿ ಮೇಯುತ್ತಿದ್ದ ಮೇಕೆಯ ಮೇಲೆ ಹಾಡುಹಗಲೇ ಚಿರತೆ ದಾಳಿ ಮಾಡಿರುವ ಘಟನೆ ಶನಿವಾರ ನಡೆದಿದೆ.
ಗ್ರಾಮದ ರೈತ ಮುರಳಿ ಎಂಬುವವರು ಎಂದಿನಂತೆ ತಮ್ಮ ಗ್ರಾಮದ ದಾನಿಗೌಡ ಎಂಬುವವರ ತೋಟದಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದರು. ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ದಿಢೀರನೆ ಪೊದೆಯೊಳಗಿನಿಂದ ಜಿಗಿದು ಬಂದ ಚಿರತೆ ಮೇಕೆಯ ಮೇಲೆ ದಾಳಿ ಮಾಡಿ ಕುತ್ತಿಗೆ ಹಿಡಿದು ರಕ್ತ ಹೀರಲು ಪ್ರಾರಂಭಿಸಿದೆ. ಆಗ ಮೇಕೆ ಚೀರತೊಡಗಿದೆ. ಉಳಿದ ಮೇಕೆಗಳೂ ಸಹ ಬೆದರಿ ಚೆಲ್ಲಾಪಿಲ್ಲಿಯಾದವು. ಆಗ ರೈತ ಮುರುಳಿ ಗಾಬರಿಯಿಂದ ಚಿರತೆ ಮೇಕೆ ಹಿಡಿದಿರುವುದನ್ನು ಕಂಡು ಕೂಗಿ ಗದ್ದಲ ಮಾಡಿದ್ದಾರೆ. ತಕ್ಷಣವೇ ಅಕ್ಕಪಕ್ಕದ ಜಮೀನಿನಲ್ಲಿದ್ದ ಜನರು ಬರುತ್ತಿದ್ದಂತೆ ಚಿರತೆ ಮೇಕೆಯನ್ನು ಬಿಟ್ಟು ಪರಾರಿಯಾಗಿದೆ.ಕಳೆದ ಆರೇಳು ತಿಂಗಳುಗಳಿಂದ ಅಮ್ಮಸಂದ್ರ ಕೆರೆ ಏರಿ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದೆ. ಸಾರ್ವಜನಿಕರು ಹೊಲ,ತೋಟಗಳಿಗೆ ಹೋಗಲು ಮತ್ತು ಜಾನುವಾರುಗಳನ್ನು ಕಾಯಲು ರೈತರು ಅಂಜುತ್ತಿದ್ದಾರೆ. ಈಗಾಗಲೇ ಗ್ರಾಮದಲ್ಲಿರುವ ಸಾಕಷ್ಟು ನಾಯಿಗಳನ್ನು ಚಿರತೆ ತಿಂದಿದೆ. ಚಿರತೆಯ ಉಪಟಳ ತಪ್ಪಿಸಲು ಅಮ್ಮಸಂದ್ರ ಕೆರೆ ಏರಿಯ ಮೇಲೆ ಬೋನು ಇಡಬೇಕೆಂದು ಹಲವು ಬಾರಿ ಅರಣ್ಯಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲವೆಂದು ಗ್ರಾಮಸ್ದರು ದೂರಿದ್ದಾರೆ.