ತಾಲೂಕಿನ ಅರೇಮಲ್ಲೇನಹಳ್ಳಿಯಲ್ಲಿ ಚಿರತೆ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡ ಸುಜಾತಾರ ಕುಟುಂಬಕ್ಕೆ ಸರ್ಕಾರದಿಂದ 20 ಲಕ್ಷ ರುಗಳ ಪರಿಹಾರವನ್ನು ಘೋಷಣೆ ಮಾಡಲಾಗಿದೆ. ಮೊದಲ ಕಂತಾಗಿ 5 ಲಕ್ಷ ರುಗಳ ಚೆಕ್ ನ್ನು ಸೋಮವಾರ ಮೃತರ ಕುಟುಂಬದ ಸದಸ್ಯರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಮತ್ತು ಜಿಲ್ಲಾಧಿಕಾರಿ ಶುಭಕಲ್ಯಾಣ್ ವಿತರಿಸಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಅರೇಮಲ್ಲೇನಹಳ್ಳಿಯಲ್ಲಿ ಚಿರತೆ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡ ಸುಜಾತಾರ ಕುಟುಂಬಕ್ಕೆ ಸರ್ಕಾರದಿಂದ 20 ಲಕ್ಷ ರುಗಳ ಪರಿಹಾರವನ್ನು ಘೋಷಣೆ ಮಾಡಲಾಗಿದೆ. ಮೊದಲ ಕಂತಾಗಿ 5 ಲಕ್ಷ ರುಗಳ ಚೆಕ್ ನ್ನು ಸೋಮವಾರ ಮೃತರ ಕುಟುಂಬದ ಸದಸ್ಯರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಮತ್ತು ಜಿಲ್ಲಾಧಿಕಾರಿ ಶುಭಕಲ್ಯಾಣ್ ವಿತರಿಸಿದರು.

ಸುಜಾತ ಬಲಿಯಾದ ಸುದ್ದಿ ತಿಳಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೋಮವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಸುಜಾತಾ (40) ಮೃತದೇಹವನ್ನು ವೀಕ್ಷಿಸಿ ಕುಟುಂಬದವರಿಗೆ ಸಾಂತ್ವನ ತಿಳಿಸಿದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಸರ್ಕಾರ ಭದ್ರಂ ಯೋಜನೆಯಿಂದ 20 ಲಕ್ಷ ಪರಿಹಾರ ಸಿಗಲಿದೆ. ಸದ್ಯಕ್ಕೆ 5 ಲಕ್ಷದ ಪರಿಹಾರ ಚೆಕ್ ನ್ನು ನೀಡಲಾಗಿದೆ. ಇನ್ನು 15 ದಿನಗಳ ಒಳಗಾಗಿ ಉಳಿದ 15 ಲಕ್ಷ ರು. ಪರಿಹಾರವನ್ನು ನೀಡಲಾಗುವುದು. ಆಕೆಯ ಮಗ ಧನಷ್ ಗೌಡನ ವಿದ್ಯಾಭ್ಯಾಸಕ್ಕಾಗಿ 5 ವರ್ಷಗಳ ಕಾಲ ಪ್ರತಿ ತಿಂಗಳು 4 ಸಾವಿರ ರು.ಗಳಂತೆ ವಿದ್ಯಾಭ್ಯಾಸಕ್ಕೆ ಸಹಾಯ ಧನ ನೀಡಲಾಗುವುದು. ಮಗಳು ತೇಜಶ್ವಿನಿಗೆ ಅರೆಕಾಲಿಕವಾಗಿ ಕಂಪ್ಯೂಟರ್ ಆಪರೇಟರ್ ಕೆಲಸ ನೀಡಲಾಗುವುದು ಎಂದು ಭರವಸೆ ನೀಡಿದರು. ತಾಲೂಕು ಕಛೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ ತಾಲೂಕಿನಲ್ಲಿ ಸುಮಾರು 30 ಕ್ಕೂ ಹೆಚ್ಚು ಚಿರತೆಗಳು ಇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಿರತೆಗಳ ಹಾವಳಿ ತಡೆಯಲು ಚಿರತೆಗಳನ್ನು ಹಿಡಿಯಲು ಅರಣ್ಯ ಇಲಾಖೆ, ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ, ಶಿಕ್ಷಣ ಇಲಾಖೆಗಳ ವತಿಯಿಂದ ಟಾಸ್ಕ್ ಪೋರ್ಸ್ ತಂಡವನ್ನು ಮಾಡಲಾಗಿದೆ. ಜನರಿಗೆ ಸಂಜೆ ಹಾಗೂ ರಾತ್ರಿ ಸಮಯದಲ್ಲಿ ಒಬ್ಬರೇ ತೆರಳದಂತೆ ಅರಿವು ನೀಡುವುದು, ಚಿರತೆಗಳು ಹೆಚ್ಚಾಗಿ ಇರುವಂತಹ ಸ್ಥಳಗಳಲ್ಲಿ ಡ್ರೋನ್ ಕ್ಯಾಮರಾ ಬಳಕೆ ಮತ್ತು ಸಿಸಿ ಟಿ.ವಿಗಳನ್ನು ಅಳವಡಿಸಲು ಚಿಂತಿಸಲಾಗಿದೆ. ಚಿರತೆ ಹಿಡಿಯಲು ಅರವಳಿಕೆ ತಜ್ಞರು, ಶೂಟರ್ ಗಳು, ವೈದ್ಯರು ಆಗಮಿಸಲಿದ್ದು ನರ ಭಕ್ಷಕ ಚಿರತೆ ಹಿಡಿಯಲು ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದರು.ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ತಾಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಚಿರತೆಗಳು ಸಾಕಷ್ಟು ಕಡೆ ಪ್ರಾಣಿಗಳ ಮೇಲೆ ದಾಳಿ ಮಾಡಿತ್ತು. ಇತ್ತೀಚೆಗೆ ಮೂರ್ನಾಲ್ಕು ಮಂದಿಯ ಮೇಲೆ ಎರಗಿ ಗಾಯಗೊಳಿಸಿತ್ತು. ಈಗ ಜನರ ಮೇಲೆ ಎರಗಿ ಕೊಂದಿರುವುದು ಆತಂಕದ ಸಂಗತಿಯಾಗಿದೆ. ನರಭಕ್ಷಕ ಚಿರತೆಯನ್ನು ಶೂಟ್ ಮಾಡಬೇಕು. ಈ ರೀತಿಯ ಅಹಿತಕರ ಘಟನೆ ಮರುಕಳಿಸದಂತೆ ಅರಣ್ಯ ಇಲಾಖೆ ಎಚ್ಚರವಹಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್, ಉಪ ವಿಭಾಗಾಧಿಕಾರಿ ಸಪ್ತಶ್ರೀ, ಸಿಪಿಐ ಲೋಹಿತ್, ತಹಶೀಲ್ದಾರ್ ಕುಂ.ಇ.ಅಹಮದ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಗೋಣಿರುಮಕೂರು ಲಕ್ಷ್ಮೀಕಾಂತ್ ಇದ್ದರು. ಸಹಾಯವಾಣಿ ಚಿರತೆ ದಾಳಿಯಿಂದ ಮಹಿಳೆ ಸಾವನ್ನಪ್ಪಿದ ಹಿನ್ನಲೆಯಲ್ಲಿ ಜಾಗೃತಗೊಂಡಿರುವ ತಾಲೂಕು ಆಡಳಿತ ಸಹಾಯವಾಣಿಯನ್ನು ತೆರೆದಿದೆ. ಚಿರತೆ ಕಂಡುಬಂದರೆ ಸಾರ್ವಜನಿಕರು ಈ ನಂಬರಿನ 7304975519, 8162213400 ಪೋನ್ ಮಾಡಿ ಅಥವಾ ವಾಟ್ಸಾಪ್ ಮಾಡಿ ಮಾಹಿತಿ ನೀಡಬಹುದು ಎಂದರು.