ಚಿರತೆ ದಾಳಿ: 10ಕ್ಕೂ ಹೆಚ್ಚು ಕುರಿ ಸಾವು

| Published : Nov 05 2025, 12:15 AM IST

ಸಾರಾಂಶ

ತಾಲೂಕಿನ ಗುರುಗದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಕುರಿ ದೊಡ್ಡಿಗೆ ಚಿರತೆಯೊಂದು ದಾಳಿ ಮಾಡಿ ಹತ್ತಕ್ಕೂ ಹೆಚ್ಚು ಕುರಿಗಳನ್ನು ಬಲಿ ಪಡೆದಿದೆ. ಘಟನೆಯಲ್ಲಿ ನಾಲ್ಕು ಕುರಿಗಳಿಗೆ ತೀವ್ರ ಗಾಯಗೊಂಡಿವೆ.

ಕನ್ನಡಪ್ರಭ ವಾರ್ತೆ ತಿಪಟೂರು

ತಾಲೂಕಿನ ಗುರುಗದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಕುರಿ ದೊಡ್ಡಿಗೆ ಚಿರತೆಯೊಂದು ದಾಳಿ ಮಾಡಿ ಹತ್ತಕ್ಕೂ ಹೆಚ್ಚು ಕುರಿಗಳನ್ನು ಬಲಿ ಪಡೆದಿದೆ. ಘಟನೆಯಲ್ಲಿ ನಾಲ್ಕು ಕುರಿಗಳಿಗೆ ತೀವ್ರ ಗಾಯಗೊಂಡಿವೆ. ಶಿವರ ಗ್ರಾಮದ ರೈತ ಎಸ್.ಆರ್ ರಾಜಶೇಖರ್‌ಗೆ ಸೇರಿದ ಕುರಿಗಳಾಗಿದ್ದು ಎಂದಿನಂತೆ ಕುರಿ ಮೇಯಿಸಿಕೊಂಡು ಕುರಿ ಗೂಡಿಗೆ ಕುರಿಗಳನ್ನು ದೊಡ್ಡಿಯಲ್ಲಿ ಹಾಕಿ ಬಂದಿದ್ದಾರೆ. ಬೆಳಗ್ಗೆ ಕುರಿಗಳನ್ನು ಬಿಡಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ವಲಯ ಅರಣ್ಯಾಧಿಕಾರಿ ಮಧು ನೇತೃತ್ವ ತಂಡ ಸ್ಥಳಕ್ಕೆ ಭೇಟಿ ನೀಡಿ ಸತ್ತ ಕುರಿಗಳನ್ನು ಪರಿಶೀಲಿಸಿ ಕುರಿಗಳ ಕತ್ತಿನ ಭಾಗದಲ್ಲಿ ಕೋರೆಹಲ್ಲುಗಳಿಂದ ಕಚ್ಚಿದ ಆಳವಾದ ಗಾಯಗಳಾಗಿದ್ದು ಚಿರತೆಯ ದಾಳಿಯಿಂದಾಗಿಯೇ ಕುರಿಗಳು ಸಾವನ್ನಪ್ಪಿವೆ ಎಂದು ಮಾಹಿತಿ ನೀಡಿದ್ದಾರೆ. ರೈತ ರಾಜಶೇಖರ್ ಕುಟುಂಬಕ್ಕೆ ಕುರಿಗಳೇ ಆಧಾರವಾಗಿದ್ದವು. ಕುರಿಗಳಿಂದ ಜೀವನ ನಿರ್ವಹಣೆ ಮಾಡುತ್ತಿದ್ದರು. ಈಗ ಕುರಿಗಳು ಸಾವನ್ನಪ್ಪಿರುವುದರಿಂದ ಲಕ್ಷಾಂತರ ರು ನಷ್ಟ ಸಂಭವಿಸಿದ್ದು, ಸಂಕಷ್ಟಕ್ಕೆ ಸಿಲುಕಿರುವ ರೈತ ರಾಜಶೇಖರ್‌ಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವುದಾಗಿ ವಲಯ ಅರಣ್ಯಾಧಿಕಾರಿ ಮಧು ಭರವಸೆ ನೀಡಿದ್ದಾರೆ. ಈ ಘಟನೆಯಿಂದ ಗುರುಗದಹಳ್ಳಿ, ಶಿವರ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರಲ್ಲಿ ಭಯ ಉಂಟಾಗಿದ್ದು ತಮ್ಮ ಹೊಲ, ತೋಟಗಳಿಗೆ ದನ ಕರುಗಳನ್ನು ಮೇಯಿಸುವವರು ಮತ್ತು ಜಮೀನುಗಳಿಗೆ ತೆರಳುವವರು ಜೀವ ಭಯದಲ್ಲಿ ಓಡಾಡುವಂತಾಗಿದೆ. ಕೂಡಲೇ ಅರಣ್ಯ ಇಲಾಖೆ ಚಿರತೆ ಸೆರೆಹಿಡಿಯಲು ಬೋನು ಇಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.