ಚನ್ನಗಿರಿ: ಪಟ್ಟಣದ ಸಮೀಪವಿರುವ ದಿಗ್ಗೇನಹಳ್ಳಿ ಗ್ರಾಮದಲ್ಲಿ ವಾಸು ಎಂಬವರ ನಾಟಿ ಕೋಳಿ ಫಾರಂಗೆ ಚಿರತೆಯೊಂದು ನುಗ್ಗಿ ದಾಳಿ ನಡೆಸಿ ಫಾರಂನಲ್ಲಿದ್ದ ಎಲ್ಲ ಕೋಳಿಗಳನ್ನು ಕೊಂದಿದ್ದು, ಕೆಲವನ್ನು ತಿಂದಿರುವ ಘಟನೆ ನಡೆದಿದೆ. ಪಟ್ಟಣದ ಕೂಗಳತೆ ದೂರದಲ್ಲಿರುವ ಜೆ.ಎಚ್.ಪಟೇಲ್ ನಗರದಿಂದ ದಿಗ್ಗೇನಹಳ್ಳಿಗೆ ಹೋಗುವ ಮಾರ್ಗಮಧ್ಯದಲ್ಲಿ ರೈತ ವಾಸು ಅವರ ಜಮೀನಿದೆ. ಈ ಜಮೀನಿನಲ್ಲಿ ಹಸು ಮತ್ತು ಕೋಳಿ ಫಾರಂ ಮಾಡಿದ್ದು, ರಾತ್ರಿ ದಾಳಿ ನಡೆಸಿದ ಚಿರತೆ ಕೋಳಿಗಳಿದ್ದ ಶೆಡ್‌ಗೆ ನುಗ್ಗಿದೆ. ಸುಮಾರು 150ಕ್ಕೂ ಅಧಿಕ ಕೋಳಿಗಳಿದ್ದು, ಎಲ್ಲವನ್ನೂ ಕೊಂದು, ಕೆಲವನ್ನು ತಿಂದುಹೋಗಿದೆ.
ಎಂದಿನಂತೆ ರೈತ ವಾಸು ಬೆಳಗ್ಗೆ ಫಾರಂಗೆ ಹೋದಾಗ ಚಿರತೆಯ ಹೆಜ್ಜೆ ಗುರುತುಗಳು ಕಾಣಿಸಿವೆ. ಇದರಿಂದ ಗಾಬರಿಗೊಂಡು ಫಾರಂನೊಳಗೆ ಹೋಗಿ ನೋಡಿದಾಗ ಕೋಳಿಗಳ ಅವಶೇಷಗಳು ಮಾತ್ರ ಉಳಿದಿದ್ದು ಕಂಡಿದ್ದಾರೆ. ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.ಜನವಸತಿ ಪ್ರದೇಶಗಳತ್ತ ಚಿರತೆ ಬಂದಿರುವ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆಯೇ ಚನ್ನಗಿರಿ ಪಟ್ಟಣ ಸೇರಿದಂತೆ ದಿಗ್ಗೇನಹಳ್ಳಿ ಗ್ರಾಮದ ಸುತ್ತಮುತ್ತಲ ಗ್ರಾಮಗಳ ಜನರು ಭಯಗೊಂಡಿದ್ದಾರೆ. ಚನ್ನಗಿರಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಉಪವಲಯ ಅರಣ್ಯಾಧಿಕಾರಿ ಸುಧಾಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಲಯ ಅರಣ್ಯಾಧಿಕಾರಿ ರಾಘವೇಂದ್ರ ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿ, ಚನ್ನಗಿರಿ ಪಟ್ಟಣದ ಸಮೀಪದಲ್ಲಿಯೇ ಚಿರತೆ ಬಂದಿದೆ. ಆದರೆ, ಈ ಚಿರತೆ ಇಲ್ಲಿಯೇ ಇರಲು ಸಾಧ್ಯವಿಲ್ಲ. ಫಾರಂನ ಅಕ್ಕಪಕ್ಕದ ಮನೆಗಳ ಸಿ.ಸಿ. ಟಿವಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದ್ದು ಚಿರತೆ ಬಂದಿರುವ ದೃಶ್ಯಗಳು ಸೆರೆಯಾಗಿಲ್ಲ. ಪ್ರತಿದಿನ ಇಲಾಖೆ ಗಾರ್ಡ್‌ಗಳು ಬೀಟ್ ಹಾಕುತ್ತಿದ್ದು, ಚಿರತೆ ಚಲನವಲನಗಳು ಕಂಡುಬಂದರೆ ಕೂಂಬಿಂಗ್ ಅಥವಾ ಸೆರೆಹಿಡಿಯಲು ಬೋನ್ ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.- - -
-16ಕೆಸಿಎನ್‌ಜಿ2:
ದಿಗ್ಗೇನಹಳ್ಳಿಯಲ್ಲಿ ಚಿರತೆ ದಾಳಿಯಿಂದ ಸಾವನ್ನಪ್ಪಿರುವ ಕೋಳಿಗಳು.