ಚನ್ನಗಿರಿ: ತಾಲೂಕಿನ ಹೊಸೂರು ಭದ್ರಾ ನಾಲೆಯ ಕಣಿವೆ ಪ್ರದೇಶದ ಬಳಿಯಲ್ಲಿ ಹಾದುಹೋಗಿರುವ ಭದ್ರಾ ನಾಲೆಯ ಹತ್ತಿರ ಚಿರತೆಯೊಂದು ಇಬ್ಬರು ರೈತರ ಮೇಲೆ ದಾಳಿ ನಡೆಸಿ, ಗಾಯಗೊಳಿಸಿದ ಘಟನೆ ಶನಿವಾರ ಬೆಳಗ್ಗೆ 6 ಗಂಟೆಯ ಸಮಯದಲ್ಲಿ ನಡೆದಿದೆ. ಕೆರೆಬಿಳಚಿ ಗ್ರಾಮದ ರೈತರಾದ ಮುಸಾಯಿದ್, ಮಕ್ಸೂದ್ ಬೆಳಗ್ಗೆ ಮಸೀದಿಯಲ್ಲಿ ನಮಾಜ್ ಮುಗಿಸಿ ತೋಟಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಭದ್ರಾನಾಲೆ ಬಳಿ ಬರುತ್ತಿದ್ದಂತೆಯೇ ಎರಡು ಚಿರತೆ ಮರಿಗಳು ನಾಲೆಯಲ್ಲಿ ನೀರು ಕುಡಿದು ದಡದ ಮೇಲೆ ಹೋಗುತ್ತಿದ್ದವು. ಆಗ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ರೈತರ ಮೇಲೆ ತಾಯಿ ಚಿರತೆ ದಾಳಿ ಮಾಡಿ ಬೆನ್ನಿನ ಭಾಗಕ್ಕೆ ಪರಚಿದೆ ಎಂದು ಗಾಯಾಳು ರೈತರು ಹೇಳಿದ್ದಾರೆ.
ಚಿರತೆ ದ್ವಿಚಕ್ರ ವಾಹದಲ್ಲಿ ಹೋಗುತ್ತಿದ್ದ ನಮ್ಮಗಳ ಮೇಲೆ ಎಗರಿ ದಾಳಿ ಮಾಡಿದಾಗ ಕೆಳಗೆ ಬಿದ್ದ ನಾವು ದ್ವಿಚಕ್ರ ವಾಹನದ ಅಕ್ಸಿಲೇಟರ್ ಜೋರು ಮಾಡಿದೆವು. ಆಗ ಅದರ ಸದ್ದಿಗೆ ಚಿರತೆ ಹೆದರಿ ಓಡಿಹೋಗಿತು ಎಂದು ತಿಳಿಸಿದ್ದಾರೆ.ಚಿರತೆ ದಾಳಿ ಮಾಡಿದ ವಿಚಾರವನ್ನು ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಲಾಗಿದ್ದು ಸ್ಥಳಕ್ಕೆ ಫಾರೆಸ್ಟರ್ ತಿಪ್ಪೇಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆ ಪ್ರದೇಶದಲ್ಲಿ ತಿರುಗಾಡುತ್ತಿರುವ ಚಿರತೆಯನ್ನು ಬೇರೆ ಕಡೆ ಓಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
- - --25ಕೆಸಿಎನ್ಜಿ2: ಚಿರತೆ ದಾಳಿಯಿಂದ ಗಾಯಕ್ಕೆ ಒಳಗಾಗಿರುವ ರೈತ.