ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಚಿರತೆ ದಾಳಿಯಿಂದ ಯುವಕ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ. ಗ್ರಾಮದ ರೈತ ಸತೀಶ್ ಪುತ್ರ ಕಿರಣ್ ಚಿರತೆ ದಾಳಿಯಿಂದ ಗಾಯಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾನೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಚಿರತೆ ದಾಳಿಯಿಂದ ಯುವಕ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಕತ್ತರಘಟ್ಟ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ.ಗ್ರಾಮದ ರೈತ ಸತೀಶ್ ಪುತ್ರ ಕಿರಣ್ ಚಿರತೆ ದಾಳಿಯಿಂದ ಗಾಯಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಕಿರಣ್ ಅವರ ಮುಖ, ಕೈ ಕಾಲುಗಳಿಗೆ ಚಿರತೆ ಪರಚಿ ಗಾಯಗೊಳಿಸಿದೆ.
ಕಿರಣ್ ಸೋಮುವಾರ ರಾತ್ರಿ 8.30ರ ಸಮಯದಲ್ಲಿ ತನ್ನ ಸ್ವಗ್ರಾಮ ಕತ್ತರಘಟ್ಟದಿಂದ ಸಮೀಪದ ಬಂಡೀಹೊಳೆ ಗ್ರಾಮದ ತನ್ನ ಅಜ್ಜಿ ಮನೆಗೆ ಹೋಗಲು ಬೈಕ್‌ನಲ್ಲಿ ಹೋಗುತ್ತಿದ್ದಾಗ ಕತ್ತರಘಟ್ಟ ಹೊರವಲಯದಲ್ಲಿ ಕಿರಣ್ ಮೇಲೆ ಚಿರತೆ ನೆಗೆದಿದೆ. ಇದರಿಂದ ಕಿರಣ್ ಬೈಕ್‌ನಿಂದ ಕೆಳಗೆ ಬಿದ್ದಿದ್ದಾನೆ. ಬೈಕ್ ಮೇಲೆ ಚಿರತೆ ನೆಗೆದು ದಾಳಿ ಮಾಡಿದಾಗ ಮುಖ ಮತ್ತು ಕೈ ಕಾಲುಗಳ ಮಾಂಸ ಖಂಡ ಕಿತ್ತು ಬಂದು ಕಿರಣ್ ಪ್ರಜ್ಞೆ ತಪ್ಪಿದ್ದಾನೆ. ಅದೃಷ್ಟವಶಾತ್ ಬೈಕ್ ಮೇಲೆ ಹಾರಿದ ಚಿರತೆ ಕೂಡ ಗಾಭರಿಗೊಂಡು ಈತನ ಮೇಲೆ ಮರುದಾಳಿ ನಡೆಸದೆ ಪರಾರಿಯಾಗಿದೆ. ಪ್ರಜ್ಞೆ ಬಂದ ನಂತರ ಕಿರಣ್ ತನ್ನ ಸ್ನೇಹಿತ ಸಾಗರ್ ಅವರಿಗೆ ಕರೆ ಮಾಡಿ ಸಹಾಯಕ್ಕೆ ಯಾಚಿಸಿದ್ದಾನೆ. ತಕ್ಷಣವೇ ಗಾಯಾಳು ಕಿರಣ್ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಗ್ರಾಮಸ್ಥರ ಆಕ್ರೋಶ:
ಕತ್ತರಘಟ್ಟ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಹಾವಳಿ ಮಿತಿ ಮೀರಿದ್ದರೂ ಅರಣ್ಯ ಇಲಾಖೆ ಗಮನ ಹರಿಸಿಲ್ಲ. ಅಧಿಕಾರಿಗಳು ನೆಪ ಮಾತ್ರಕ್ಕೆ ತಮ್ಮ ಸಿಬ್ಬಂದಿಯನ್ನು ಕಳುಹಿಸಿ ಕೈತೊಳೆದುಕೊಂಡಿದೆ. ರೈತರು ಹೊಲಗದ್ದೆಗಳಿಗೆ ಹೋಗುವುದಿರಲಿ ರಾತ್ರಿ ವೇಳೆ ಗ್ರಾಮದಿಂದ ಹೊರ ಹೋಗಲು ಭಯಪಡುವ ಸನ್ನಿವೇಶ ಇದೆ.ಚಿರತೆ ದಾಳಿಗೆ ಒಳಗಾಗಿ ಗಾಯಗೊಂಡಿರುವ ಕಿರಣ್ ಅತ್ಯಂತ ಬಡ ಕುಟುಂಬದ ಯುವಕನಾಗಿದ್ದು, ಗಾಯಾಳುವಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಗ್ರಾಮ ವ್ಯಾಪ್ತಿಯಲ್ಲಿ ಅಗತ್ಯ ಬೋನುಗಳನ್ನಿಟ್ಟು ಚಿರತೆಗಳನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.