ರೈತರೊಬ್ಬರ ತೋಟದಲ್ಲಿ ಮರಿಗಳು ಪತ್ತೆ
---ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಪಡಗೂರು ಗ್ರಾಮದ ಬಳಿಯ ರೈತರೊಬ್ಬರ ಬಾಳೆ ತೋಟದಲ್ಲಿ ತಾಯಿಯಿಂದ ಬೇರ್ಪಟ್ಟ ಚಿರತೆ ಮರಿಗಳೆರಡು ಬುಧವಾರ ಬೆಳಗ್ಗೆ ಪತ್ತೆಯಾಗಿದ್ದು, ಇದೀಗ ಗುಂಡ್ಲುಪೇಟೆ ಬಫರ್ ಜೋ಼ನ್ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳ ಆರೈಕೆಯಲ್ಲಿವೆ.ಪಡಗೂರು ಗ್ರಾಮದ ರೈತ ಶಿವಕುಮಾರ್‌ಗೆ ಸೇರಿದ ಬಾಳೆ ತೋಟದಲ್ಲಿ ಅಂದಾಜು ಎರಡುವರೆ ತಿಂಗಳ ಚಿರತೆ ಮರಿಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದಾರೆ. ಬಳಿಕ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ವಶಕ್ಕೆ ಪಡೆದಿದ್ದಾರೆ.ಬಳಿಕ ಗುಂಡ್ಲುಪೇಟೆ ಪಶು ಆಸ್ಪತ್ರೆಯಲ್ಲಿ ಚಿರತೆ ಮರಿಗಳನ್ನು ತಪಾಸಣೆ ನಡೆಸಿದ ಬಳಿಕ ಗ್ಲೂಕೋಸ್ ಹಾಕಿದ್ದು, ಮರಿಗಳು ಲವಲವಿಕೆಯಿಂದಿವೆ ಎಂದು ಗುಂಡ್ಲುಪೇಟೆ ಬಫರ್ ಜೋ಼ನ್ ವಲಯ ಅರಣ್ಯಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.
ಚಿರತೆ ಮರಿಗಳನ್ನು ಬುಧವಾರ ರಾತ್ರಿ ಮತ್ತೆ ರೈತ ಶಿವಕುಮಾರ್ ಅವರ ತೋಟದಲ್ಲಿಯೇ ಬೋನಿನಲ್ಲಿ ಇಡಲಾಗಿದ್ದು, ತಾಯಿಯು ಎತ್ತಿಕೊಂಡು ಹೋಗುವ ನಿರೀಕ್ಷೆಯಿದೆ. ಒಂದು ವೇಳೆ ತಾಯಿ ಬಾರದಿದ್ದರೆ, ಮರಿಗಳನ್ನು ಪುನರ್ವಸತಿ ಕೇಂದ್ರಗಳಿಗೆ ಬಿಡಲಾಗುವುದು ಎಂದು ಮಾಹಿತಿ ನೀಡಿದರು.
---
ತೋಟದಲ್ಲಿ ಪತ್ತೆಯಾಗಿರುವ ಚಿರತೆ ಮರಿಗಳು.