ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು ತುಮಕೂರು ತಾಲೂಕು ನಾಮದಚಿಲುಮೆಯಲ್ಲಿರುವ ಅರಣ್ಯ ಇಲಾಖೆಯ ಜಿಂಕೆ ವನದಲ್ಲಿ 2016 ನೇ ಸಾಲಿನಿಂದ ಈವರೆಗಿನ 8 ವರ್ಷಗಳ ಅವಧಿಯಲ್ಲಿ ಒಟ್ಟು 43 ಜಿಂಕೆಗಳು ಮೃತಪಟ್ಟಿವೆ. ಇದರಲ್ಲಿ 13 ಗಂಡು ಜಿಂಕೆಗಳು, 29 ಹೆಣ್ಣು ಜಿಂಕೆಗಳು ಮತ್ತು 1 ಮರಿ ಜಿಂಕೆ ಸೇರಿವೆ. 2017 ರಲ್ಲಿ ಒಂದು ಹೆಣ್ಣು ಜಿಂಕೆ, ಒಂದು ಗಂಡು ಜಿಂಕೆ ಮತ್ತು ಒಂದು ಮರಿ ಸೇರಿ ಒಟ್ಟು ಮೂರು ಜಿಂಕೆಗಳು ಚಿರತೆಗೆ ಬಲಿಯಾಗಿವೆ ಎಂಬ ಮಾಹಿತಿ ಲಭಿಸಿದೆ. ತುಮಕೂರಿನ ಸಾಮಾಜಿಕ ಕಾರ್ಯಿಕರ್ತ ಆರ್.ವಿಶ್ವನಾಥನ್ ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ತುಮಕೂರಿನ ವಲಯ ಅರಣ್ಯಾಧಿಕಾರಿಗಳು ನೀಡಿರುವ ಮಾಹಿತಿಯನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ರವಾನಿಸಿದ್ದು, ಇದರಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.
2016-17ನೇ ಸಾಲಿನಲ್ಲಿ 2017 ರ ಫೆಬ್ರವರಿ ತಿಂಗಳಿನಲ್ಲಿ ಒಂದು ಹೆಣ್ಣು ಹಾಗೂ ಮಾರ್ಚನಲ್ಲಿ ಒಂದು ಹೆಣ್ಣು ಮತ್ತು ಒಂದು ಮರಿ ಜಿಂಕೆ ಸೇರಿ ಒಟ್ಟು 3 ಜಿಂಕೆಗಳು ಚಿರತೆ ದಾಳಿಗೆ ಬಲಿಯಾಗಿವೆ ಎಂದು ಜಿಂಕೆಗಳ ಸಾವಿನ ಬಗ್ಗೆ ಅಂಕಿಅಂಶಗಳನ್ನು ಅರಣ್ಯ ಇಲಾಖೆಯು ನೀಡಿದೆ.ಈ ಜಿಂಕೆವನದಲ್ಲಿ 2016-17 ರಲ್ಲಿ 89 ಜಿಂಕೆಗಳು, 2017-18 ರಲ್ಲಿ 81 ಜಿಂಕೆಗಳು, 2018-19 ರಲ್ಲಿ 85 ಜಿಂಕೆಗಳು, 2019-20ರಲ್ಲಿ 94 ಜಿಂಕೆಗಳು, 2020-21 ರಲ್ಲಿ 103 ಜಿಂಕೆಗಳು, 2021-22 ರಲ್ಲಿ 103 ಜಿಂಕೆಗಳು, 2022-23 ರಲ್ಲಿ 102 ಜಿಂಕೆಗಳು, 2023-24 ರಲ್ಲಿ ಮಾರ್ಚ್ ಅಂತ್ಯದವರೆಗೆ 95 ಜಿಂಕೆಗಳು ಇದ್ದವು. 2024 ರ ಈ ವರ್ಷ 45 ಗಂಡು, 50 ಹೆಣ್ಣು ಹಾಗೂ 4 ಮರಿಗಳು ಸೇರಿ ಒಟ್ಟು 99 ಜಿಂಕೆಗಳಿವೆ ಎಂದು ಆರ್.ವಿಶ್ವನಾಥನ್ ಅವರಿಗೆ ನೀಡಿರುವ ಮಾಹಿತಿಯಲ್ಲಿ ಅರಣ್ಯ ಇಲಾಖೆ ತಿಳಿಸಿದೆ. ನೀರು, ಹಿಂಡಿ, ಮೇವು ವ್ಯವಸ್ಥೆ ಕೇಂದ್ರ ಮೃಗಾಲಯ ಪ್ರಾಧಿಕಾರದ (ಸಿ.ಜಡ್.ಎ.) ನಿರ್ದೇಶನದ ಅನುಸಾರವಾಗಿ ಕಾಂಕ್ರೀಟ್ ವಾಟರ್ ಟ್ಯಾಂಕ್ ಮೂಲಕ ಸ್ವಚ್ಛ ಕುಡಿಯುವ ನೀರನ್ನು ಜಿಂಕೆಗಳಿಗೆ ಒದಗಿಸಲಾಗುತ್ತಿದೆ. ದೈನಂದಿನ ಆಹಾರವಾಗಿ ಹಿಂಡಿಬೂಸಾ ಮತ್ತು ಹಸಿರು ಮೇವನ್ನು ನೀಡಲಾಗುತ್ತಿದೆ. ಆಹಾರ ಮತ್ತು ನೀರು ಒದಗಿಸುವ ಕಟ್ಟೆಗಳನ್ನು ಹಾಗೂ ಆಹಾರ ಸಂಗ್ರಹಣಾ ಕೊಠಡಿ ಮತ್ತು ಕೆಲಸದ ವೇದಿಕೆಗಳನ್ನು ಸೋಂಕುರಹಿತವಾಗಿ ಸ್ವಚ್ಛಗೊಳಿಸಲಾಗುತ್ತಿದೆ. ಕಾಲಕಾಲಕ್ಕೆ ನಿಯಮಿತವಾಗಿ ಪಶುವೈದ್ಯಾಧಿಕಾರಿಗಳಿಂದ ಜಿಂಕೆಗಳ ಅರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿಗಳು ಹೇಳಿಕೊಂಡಿದ್ದಾರೆ. 10 ಲಕ್ಷ ರೂ. ಸಂಗ್ರಹನಾಮದಚಿಲುಮೆ ಪ್ರವೇಶದರ ವಯಸ್ಕರಿಗೆ 10 ರು, ಮಕ್ಕಳಿಗೆ 5 ರೂ ಹಾಗೂ ಕ್ಯಾಮರಾಕ್ಕೆ 100 ರೂ. ನಿಗದಿಪಡಿಸಲಾಗಿದೆ. 2023-24 ರ ಒಂದೇ ವರ್ಷದಲ್ಲಿ ಪ್ರವೇಶದರವಾಗಿ ಒಟ್ಟು 10,06,500 ರೂ. ಸಂಗ್ರಹವಾಗಿದೆ. 2024 ರ ಏಪ್ರಿಲ್‌ನಲ್ಲಿ 47,250 ರೂ., ಮೇ ತಿಂಗಳಲ್ಲಿ 84,860 ರೂ. ಸಂಗ್ರಹವಾಗಿದೆ ಎಂದು ಅರ್ಜಿದಾರರಿಗೆ ಮಾಹಿತಿ ನೀಡಲಾಗಿದೆ. “ಕೇವಲ ಒಂದು ವರ್ಷದಲ್ಲಿ 10 ಲಕ್ಷ ರೂ. ಸಂಗ್ರಹವಾಗಿದ್ದರೂ, ನಾಮದಚಿಲುಮೆ ಹಾಗೂ ಔಷಧಿವನದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿಲ್ಲ. ಕೇವಲ ನಿರ್ವಹಣೆ ನಡೆದಿದೆ” ಎಂದು ವಲಯ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.