ಕನ್ನಡಪ್ರಭ ವಾರ್ತೆ ಅರಸೀಕೆರೆ
ಗ್ರಾಮೀಣ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಸಂಚಾರ ಹೆಚ್ಚುತ್ತಿರುವ ಬೆನ್ನಲ್ಲೇ ತಾಲೂಕಿನ ಮುದ್ದರಂಗನಹಳ್ಳಿ ಗ್ರಾಮದಲ್ಲಿ ತೋಟದ ಮನೆಯ ಮುಂಭಾಗಕ್ಕೆ ಚಿರತೆ ಬಂದಿರುವ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ರಾತ್ರಿ ವೇಳೆ ಮನೆಯ ಸುತ್ತಮುತ್ತ ಹೊಂಚು ಹಾಕುತ್ತಿದ್ದ ಚಿರತೆ, ಮನೆಯ ಶ್ವಾನ ಬೊಗಳಿದ ಬಳಿಕ ಅಲ್ಲಿದ್ದವರ ಕಣ್ಣಿಗೆ ಬಿದ್ದು, ಕೆಲ ಕ್ಷಣಗಳ ಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು.ತಾಲೂಕಿನ ಮುರುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ದರಂಗನಹಳ್ಳಿ ಗ್ರಾಮದ ಅಶೋಕ್ ಎಂಬುವರ ತೋಟದ ಮನೆಯಲ್ಲಿ ಈ ಘಟನೆ ನಡೆದಿದ್ದು, ಕಳೆದ ಕೆಲ ದಿನಗಳಲ್ಲಿ ಇದೇ ಪ್ರದೇಶದಲ್ಲಿ ಚಿರತೆ ಎರಡು ಬಾರಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಮನೆಯ ಮುಂಭಾಗ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆಯ ಓಡಾಟದ ದೃಶ್ಯಗಳು ದಾಖಲಾಗಿವೆ. ಮಧ್ಯರಾತ್ರಿ ಮನೆಯ ಮುಂದೆ ಶ್ವಾನ ಜೋರಾಗಿ ಬೊಗಳತೊಡಗಿದಾಗ ಅನುಮಾನಗೊಂಡ ಮನೆಯವರು ಹೊರಗೆ ನೋಡಿದ ವೇಳೆ ಚಿರತೆ ಕಾಣಿಸಿಕೊಂಡಿದೆ. ಮನೆಯವರ ಕಿರುಚಾಟ ಕೇಳುತ್ತಿದ್ದಂತೆ ಚಿರತೆ ತೋಟದೊಳಗೆ ಓಡಿ ಕಣ್ಮರೆಯಾಗಿದೆ ಎನ್ನಲಾಗಿದೆ.ಈ ಕುರಿತು ಮಾತನಾಡಿದ ಗ್ರಾಮಸ್ಥರಾದ ಅಶೋಕ್, “ಕಾಡಿನೊಳಗೆ ಪ್ರಾಣಿಗಳಿಗೆ ಬೇಕಾದಷ್ಟು ಆಹಾರ ಹಾಗೂ ನೀರಿನ ಸೌಲಭ್ಯ ಸಿಗದ ಕಾರಣ ಅವು ಜನವಸತಿ ಪ್ರದೇಶಗಳತ್ತ ಮುಖ ಮಾಡುತ್ತಿವೆ. ಹಳ್ಳಿಗಳಲ್ಲಿ ಕೋಳಿ, ನಾಯಿ, ಕುರಿ ಸೇರಿದಂತೆ ಸಾಕುಪ್ರಾಣಿಗಳು ಸುಲಭವಾಗಿ ದೊರೆಯುವುದರಿಂದ ಚಿರತೆಗಳ ಓಡಾಟ ಹೆಚ್ಚಾಗಿದೆ. ಅರಣ್ಯ ಇಲಾಖೆ ಕಾಡಿನಲ್ಲೇ ಪ್ರಾಣಿಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಿದರೆ ಗ್ರಾಮಗಳಿಗೆ ನುಗ್ಗುವ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ,” ಎಂದು ತಿಳಿಸಿದರು.ಚಿರತೆ ಸಂಚಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಗೊಂಡಿದ್ದು, ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಮಕ್ಕಳನ್ನು ಹಾಗೂ ಸಾಕುಪ್ರಾಣಿಗಳನ್ನು ಹೊರಗೆ ಬಿಡದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಗ್ರಾಮಸ್ಥರಿಂದ ಕೇಳಿಬಂದಿದೆ.