ತುಮಕೂರು ಜಿಲ್ಲೆಯಲ್ಲಿ ಮತ್ತೆ ಚಿರತೆ ಘರ್ಜನೆ

| Published : Aug 10 2024, 01:35 AM IST

ಸಾರಾಂಶ

ಮೊನ್ನೆ ಮೊನ್ನೆ ತುಮಕೂರು, ಆಚೆ ಮೊನ್ನೆ ಹೆಬ್ಬೂರು, ವಾರದ ಹಿಂದೆ ತಿಪಟೂರು ಹೀಗೆ ಕಳೆದ 15 ದಿವಸಗಳಿಂದ ಮತ್ತೆ ಅಲ್ಲಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದು ಕಲ್ಪತರು ಜಿಲ್ಲೆಯ ಜನರನ್ನು ಕಂಗೆಡೆಸಿದೆ.

ಕನ್ನಡಪ್ರಭ ವಾರ್ತೆ, ತುಮಕೂರುಮೊನ್ನೆ ಮೊನ್ನೆ ತುಮಕೂರು, ಆಚೆ ಮೊನ್ನೆ ಹೆಬ್ಬೂರು, ವಾರದ ಹಿಂದೆ ತಿಪಟೂರು ಹೀಗೆ ಕಳೆದ 15 ದಿವಸಗಳಿಂದ ಮತ್ತೆ ಅಲ್ಲಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದು ಕಲ್ಪತರು ಜಿಲ್ಲೆಯ ಜನರನ್ನು ಕಂಗೆಡೆಸಿದೆ.ಕೋವಿಡ್ ಸಮಯದಲ್ಲಿ ತುಮಕೂರು ಗ್ರಾಮಾಂತರ, ಗುಬ್ಬಿ ಹಾಗೂ ಕುಣಿಗಲ್ ತಾಲೂಕಿನಲ್ಲಿ ಸಂಚರಿಸುತ್ತಿದ್ದ ನರಹಂತಕ ಚಿರತೆ ಪುಟಾಣಿ ಮಗು ಸೇರಿದಂತೆ ಐದು ಮಂದಿಯನ್ನು ಬಲಿ ತೆಗೆದುಕೊಂಡಿತ್ತು. 4 ಮಂದಿಯನ್ನು ಬಲಿ ತೆಗೆದುಕೊಂಡಾಗ ಸರ್ಕಾರವಾಗಲಿ, ಅರಣ್ಯ ಇಲಾಖೆಯಾಗಲಿ ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಮನೆ ಮುಂದೆ ಆಟವಾಡುತ್ತಿದ್ದ ಮಗುವೊಂದನ್ನು ಅವರ ಪೋಷಕರ ಎದುರೇ ಚಿರತೆಯೊಂದು ಹೊತ್ತೊಯ್ದು ಸಾಯಿಸಿದ್ದು ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿತ್ತು.ನರಹಂತಕ ಚಿರತೆ ಸೆರೆಗೆ ಬಿದ್ದಿತ್ತು ; ಕೂಡಲೇ ಅರಣ್ಯ ಇಲಾಖೆ ಕಾರ್ಯಪ್ರವೃತ್ತವಾಗಿ ಚಿರತೆ ಸೆರೆಗೆ ಬೋನುಗಳನ್ನು ಇಟ್ಟಿತ್ತು. ಈ ವೇಳೆ 8 ಚಿರತೆಗಳು ಬೋನಿಗೆ ಬಿದ್ದರೂ ನರಹಂತಕ ಚಿರತೆ ಮಾತ್ರ ಸೆರೆ ಸಿಕ್ಕಲಿಲ್ಲ. ಕಡೆಗೆ ನಾಗರಹೊಳೆಯಿಂದ ಆನೆಗಳನ್ನು ಕರೆಸಿ ಅದರ ಮೇಲೆ ಕುಳಿತು ಚಿರತೆ ಹೆಜ್ಜೆ ಗುರುತನ್ನು ಪತ್ತೆ ಹಚ್ಚಲಾಯಿತು. ಕಡೆಗೂ ನರಹಂತಕ ಚಿರತೆಯ ಚಲನವಲನ ಗಮನಿಸಿ ಅದನ್ನು ಸೆರೆ ಹಿಡಿಯಲಾಗಿತ್ತು. ಆಗ ಜಿಲ್ಲೆಯಲ್ಲಿ ಎಲ್ಲಂದರಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದವು. ಮೊದಲೆಲ್ಲಾ ಅರಣ್ಯದಲ್ಲಿ ಮಾತ್ರ ಆಗಾಗ ಕಾಣಿಸಿಕೊಳ್ಳುತ್ತಿದ್ದ ಚಿರತೆ ಕಾಡಿನಲ್ಲಿ ಆಹಾರ ಸಿಗದೆ ಕಾಡಂಚಿನ ಹಳ್ಳಿಗಳಿಗೆ ಬಂದು ಕುರಿ, ಮೇಕೆ, ಹಸುವಿನ ಕುರು, ನಾಯಿಗಳನ್ನು ಶಿಕಾರಿ ಮಾಡಿ ಹೋಗುತ್ತಿತ್ತು. ಬಳಿಕ ಗುಬ್ಬಿ, ಗ್ರಾಮಾಂತರ ಮತ್ತು ಕುಣಿಗಲ್ ತಾಲೂಕುಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳತೊಡಗಿತು.

ಕಾರಣ ಏನು ?: ಕುಣಿಗಲ್, ತುಮಕೂರು ಗ್ರಾಮಾಂತರ ಹಾಗೂ ಗುಬ್ಬಿ ತಾಲೂಕುಗಳಲ್ಲಿ ಹೇಮಾವತಿ ನೀರಿನ ಮೂಲ ಇದೆ. ಅಲ್ಲದೇ ಬೆಂಗಳೂರಿನವರು ಸಾಕಷ್ಟು ಜಮೀನುಗಳನ್ನು ಖರೀದಿಸಿ ಖಾಲಿ ಬಿಟ್ಟಿದ್ದಾರೆ. ಆ ಖಾಲಿ ಜಮೀನುಗಳಲ್ಲಿ ಆಳೆತ್ತರದ ಪೊದೆಗಳು ಬೆಳೆದು ನಿಂತಿವೆ. ಇಲ್ಲಿ ಅಡಗಿ ಕೂರುವ ಚಿರತೆಗಳು ಸುಲಭವಾಗಿ ನಾಯಿ, ಕುರಿ, ಮೇಕೆ, ಕೋಳಿಗಳನ್ನು ಶಿಕಾರಿ ಮಾಡುತ್ತದೆ.ಕೋಳಿ ತ್ಯಾಜ್ಯವೂ ಪ್ರಮುಖ ಕಾರಣ: ಜಿಲ್ಲೆಯಲ್ಲಿ ಕೋಳಿ, ಕುರಿ ಅಂಗಡಿಗಳು ಹೆಚ್ಚಾಗಿ ಆರಂಭವಾಗಿದೆ. ಹೀಗಾಗಿ ಬೇಕಾ ಬಿಟ್ಟಿಯಾಗಿ ಕೋಳಿ ತ್ಯಾಜ್ಯಗಳನ್ನು ಬಿಸಾಡಿರುವುದರಿಂದ ಅಲ್ಲಿಗೆ ನಾಯಿಗಳು, ಹಂದಿ ಮುಂತಾದ ಪ್ರಾಣಿಗಳು ಬರುವುದರಿಂದ ಅವುಗಳನ್ನು ಶಿಕಾರಿಯಾಡಲು ಚಿರತೆಗಳು ನಗರದತ್ತ ಮುಖ ಮಾಡುತ್ತಿವೆ.ಅರಣ್ಯ ಇಲಾಖೆ ಮೂಲಗಳ ಪ್ರಕಾರ ಚಿರತೆಯ ಗಣತಿ ಮಾಡದೇ ಇದ್ದರೂ ಚಿರತೆಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ. ಅಲ್ಲದೇ ಸುಲಭವಾಗಿ ಚಿರತೆಗಳಿಗೆ ಸಾಕು ಪ್ರಾಣಿಗಳು ಆಹಾರವಾಗಿ ಸಿಗುವುದರಿಂದ ಪ್ರತಿ ನಿತ್ಯ ನಗರಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದೆ. ಅರಣ್ಯ ಇಲಾಖೆಯವರೇ ಹೇಳುವ ಪ್ರಕಾರ ವಾರದಲ್ಲಿ 5 ದಿವಸಗಳ ಕಾಲ ಚಿರತೆ ಕಾಣಿಸಿಕೊಳ್ಳುವ ದೂರುಗಳು ಇಲಾಖೆ ಬರುತ್ತಿವೆ. ಚಿರತೆಗಳು ಹೆಚ್ಚಾಗಿರುವ ಕಾರಣ ರಾತ್ರಿ ಹಾಗೂ ಬೆಳಗಿನ ಮುಂಚೆ ಯಾರೂ ಒಂಟಿಯಾಗಿ ಓಡಾಡದಂತೆ ತಾಕೀತು ಮಾಡಿದ್ದಾರೆ. ತ್ಯಾಜ್ಯಗಳ ವಿಲೇವಾರಿ ಅಚ್ಚುಕಟ್ಟಾಗಿ ಮಾಡಿದರೆ ಚಿರತೆಗಳು ಅರಣ್ಯದಲ್ಲೇ ಇರುತ್ತದೆ ಎನ್ನುವುದು ಅರಣ್ಯ ಇಲಾಖೆಯ ವಾದವಾಗಿದೆ.ಬೋನಿಗೆ ಬಿದ್ದ ಚಿರತೆ:

ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಮೇಲನಹಳ್ಳಿ ಸಮೀಪದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆಯೊಂದು ಶುಕ್ರವಾರ ಬಿದ್ದಿದೆ. ವಸತಿ ಶಾಲೆಯ ಸಮೀಪ ಚಿರತೆ ಓಡಾಡುತ್ತಿರುವ ಕುರಿತು ಶಾಲೆಯ ಭದ್ರತಾ ಸಿಬ್ಬಂದಿ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧಾರಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇರಿಸಿದ್ದರು. ಸೆರೆ ಹಿಡಿದ ಚಿರತೆಯನ್ನು ಸ್ಥಳಾಂತರಿಸಲಾಗಿದ್ದು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಚಿರತೆಗಳ ಗಣತಿಯಾಗದಿದ್ದರೂ ಅವುಗಳ ಸಂಖ್ಯೆ ಗಣನೀಯವಾಗಿ ಏರಿದೆ. ಕೋಳಿ ತ್ಯಾಜ್ಯಗಳನ್ನು ಎಗ್ಗಿಲ್ಲದೆ ಬಿಸಾಡುತ್ತಿರುವುದರಿಂದ ಅಲ್ಲಿ ಓಡಾಡುವ ಪ್ರಾಣಿಗಳನ್ನು ಚಿರತೆ ಹಿಡಿದು ತಿನ್ನುತ್ತಿವೆ. ದೂರುಗಳು ಬಂದ ಕಡೆ ಬೋನುಗಳನ್ನು ಇಟ್ಟು ಚಿರತೆ ಹಿಡಿಯಬಹುದು ಆದರೆ ಕೋಳಿ ತ್ಯಾಜ್ಯಗಳ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡುವುದು ಅತ್ಯವಶ್ಯ.

ಅನುಪಮ, ಡಿಎಫ್‌ಓ