ಧಾರವಾಡ: ಕರ್ನಾಟಕ ವಿವಿಯ ಮುಖ್ಯ ಆವರಣದಲ್ಲಿ ಚಿರತೆ ಪ್ರತ್ಯಕ್ಷ : ವಿದ್ಯಾರ್ಥಿಗಳಲ್ಲಿ ಆತಂಕ

| Published : Sep 07 2024, 01:42 AM IST / Updated: Sep 07 2024, 12:50 PM IST

ಧಾರವಾಡ: ಕರ್ನಾಟಕ ವಿವಿಯ ಮುಖ್ಯ ಆವರಣದಲ್ಲಿ ಚಿರತೆ ಪ್ರತ್ಯಕ್ಷ : ವಿದ್ಯಾರ್ಥಿಗಳಲ್ಲಿ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ವಿವಿಯ ಮುಖ್ಯ ರಸ್ತೆಯಿಂದ ಪತ್ರಿಕೋದ್ಯಮ ವಿಭಾಗಕ್ಕೆ ಹೋಗುವ ದಾರಿ ಮಧ್ಯೆ ಚಿರತೆಯೊಂದು ಗಾಂಧಿ ಭವನದ ಹಿಂಭಾಗದಿಂದ ಬೋಟೋನಿಕಲ್‌ ಗಾರ್ಡ್‌ನ್‌ ಒಳಗೆ ಓಡಿ ಹೋಗುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಧಾರವಾಡ: ಒಂದೆರೆಡು ಬಾರಿ ಧಾರವಾಡ ಹೊರ ವಲಯದಲ್ಲಿ ಕಾಣಿಸಿಕೊಂಡಿರುವ ಚಿರತೆಯಂತಹ ಪ್ರಾಣಿಗಳು ಇದೀಗ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಕಂಡು ಬಂದಿದ್ದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಕರ್ನಾಟಕ ವಿವಿಯ ಮುಖ್ಯ ರಸ್ತೆಯಿಂದ ಪತ್ರಿಕೋದ್ಯಮ ವಿಭಾಗಕ್ಕೆ ಹೋಗುವ ದಾರಿ ಮಧ್ಯೆ ಚಿರತೆಯೊಂದು ಗಾಂಧಿ ಭವನದ ಹಿಂಭಾಗದಿಂದ ಬೋಟೋನಿಕಲ್‌ ಗಾರ್ಡ್‌ನ್‌ ಒಳಗೆ ಓಡಿ ಹೋಗುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೈಕ್‌ ಮೇಲೆ ಒಬ್ಬರು ಈ ರಸ್ತೆಯಲ್ಲಿ ಸಂಚರಿಸುವ ವೇಳೆಯೇ ಮುಂದೆ ಚಿರತೆ ಓಡಿ ಹೋಗಿದ್ದು, ಬೈಕ್‌ ಸವಾರ ಭಯದಿಂದ ಅಲ್ಲಿಯೇ ನಿಂತಿದ್ದಾನೆ. ಕ್ಯಾಂಪಸ್‌ನಲ್ಲಿನ ಸಿಸಿ ಕ್ಯಾಮೆರಾದಲ್ಲಿ ಚಿರತೆ ದೃಶ್ಯ ಸೆರೆಯಾಗಿದ್ದು, ವೈರಲ್‌ ಆಗಿರುವ ಈ ದೃಶ್ಯ ನೋಡಿ ಕ್ಯಾಂಪಸ್‌ ನಲ್ಲಿರುವ ವಿದ್ಯಾರ್ಥಿಗಳು, ಅಧ್ಯಾಪಕರು ಆತಂಕಕ್ಕೆ ಒಳಗಾಗಿದ್ದಾರೆ.

ಈ ರಸ್ತೆ ಮೂಲಕವೇ ನ್ಯೂ ಬಾಯ್ಸ್‌ ಹಾಸ್ಟೇಲ್‌ ವಿದ್ಯಾರ್ಥಿಗಳು, ಪತ್ರಿಕೋದ್ಯಮ, ಎಂಸಿಎ ವಿದ್ಯಾರ್ಥಿಗಳು ಕನಕ ಭವನ ಹಾಗೂ ಗ್ರಂಥಾಲಯಕ್ಕೆ ಹೋಗುತ್ತಾರೆ. ಇದೇ ರಸ್ತೆ ಮೂಲಕವೇ ಚಿರತೆ ಹೋಗಿದ್ದು ಭಯ ಹುಟ್ಟಿಸಿದೆ.

ಭಯ ಬೇಡ:

ಈ ಕುರಿತು ಮಾಹಿತಿ ನೀಡಿದ ಕವಿವಿ ಕುಲಪತಿ ಡಾ. ಕೆ.ಬಿ. ಗುಡಸಿ, ಶುಕ್ರವಾರ ಸಂಜೆ 6.30ರ ಸುಮಾರಿಗೆ ಚಿರತೆಯೊಂದು ರಸ್ತೆಯಿಂದ ದಾಟಿ ಹೋಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಕಂಡಿದೆ. ಕೂಡಲೇ ಸಿಬ್ಬಂದಿ ಈ ಬಗ್ಗೆ ತಮಗೆ ತಿಳಿಸಿದರು. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಒಂದೇ ಗಂಟೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವಿವಿಗೆ ತೆರಳಿ ಚಿರತೆಯ ಹುಡುಕಾಟ ನಡೆಸುತ್ತಿದ್ದಾರೆ. ಬಹುಶಃ ಬೋಟೋನಿಕಲ್‌ ಗಾರ್ಡನ್‌ ದಾಟಿ ಅದು ಮುಂದೆ ಗುಡ್ಡಕ್ಕೆ ತೆರಳಿರಬಹುದಾದ ಸಾಧ್ಯತೆ ಇದೆ. ಆದರೂ ವಿವಿ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಹೊರ ಬರದಂತೆ ಸೂಚನೆ ನೀಡಲಾಗಿದೆ ಎಂದರು.