ಕನ್ನಡಪ್ರಭ ವಾರ್ತೆ ಹನೂರು
ಮಲೆ ಮಾದೇಶ್ವರ ಬೆಟ್ಟ ವ್ಯಾಪ್ತಿಯ ಇಂಡಿಗನತ್ತ ಬಳಿ ಬಾಲಕನ ಬಲಿ ಪಡೆದಿದ್ದ ಚಿರತೆಯನ್ನು ಕೊನೆಗೂ ಅದೇ ಜಾಗದಲ್ಲಿ ಸೆರೆ ಹಿಡಿಯಲಾಗಿದೆ.ಕಳೆದ ಮೇ 10ರಂದು ನಾಗಮಲೆಗೆ ಕಾಲ್ನಡಿಗೆಯಲ್ಲಿ ತೆರಳುವಾಗ ಬೆಂಗಳೂರಿನ ಹರ್ಷಿತ್ ಎಂಬ ಬಾಲಕ ಚಿರತೆ ದಾಳಿಯಿಂದ ಮೃತಪಟ್ಟಿದ್ದನು. ಈ ಹಿನ್ನೆಲೆ ಕಾವೇರಿ ವನ್ಯಜೀವಿಧಾಮದ ಸುಮಾರು 50 ಸಿಬ್ಬಂದಿ ಕಳೆದ 14 ದಿನಗಳಿಂದ ವಿವಿಧ ಮಾದರಿಯ ಮೂರು ಬೋನ್ ಗಳನ್ನು ಇಟ್ಟು ಕಾರ್ಯಾಚರಣೆ ನಡೆಸುತ್ತಿದ್ದರು.
ಇದೀಗ ಹೆಣ್ಣು ಚಿರತೆಯೊಂದು ತುಮಕೂರು ಮಾದರಿ ಬೋನಿಗೆ ಬಿದ್ದಿದ್ದು, ಚಿರತೆಯ ರಕ್ತದ ಮಾದರಿ, ಕ್ಯಾಮೆರಾ ಟ್ರ್ಯಾಪ್ ನಲ್ಲಿ ಸೆರೆಸಿಕ್ಕ ಚಿರತೆಯ ದೃಶ್ಯಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ತಜ್ಞರಿಗೆ ರವಾನೆ ಮಾಡಲಿದ್ದು, ಬಾಲಕನ ಸಾವಿಗೆ ಕಾರಣವಾದ ಚಿರತೆ ಬಗ್ಗೆ ದೃಢಪಡಿಸಿಕೊಂಡು, ಸೆರೆ ಸಿಕ್ಕ ಚಿರತೆಯನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ರವಾನೆ ಮಾಡಲಾಗುವುದು ಎಂದು ಕಾವೇರಿ ವನ್ಯಜೀವಿಧಾಮದ ಡಿಸಿಎಫ್ ಸುರೇಂದ್ರ ಮಾಹಿತಿ ನೀಡಿದ್ದಾರೆ.ಇನ್ನೊಂದೆಡೆ ನಾಗಮಲೆಯಲ್ಲಿ ಮತ್ತೊಂದು ಚಿರತೆ ಭಾನುವಾರ ಬೆಳಗ್ಗೆ ಕಾಣಿಸಿಕೊಂಡಿದ್ದು ಚಿರತೆ ಸೆರೆಗಾಗಿ ಎರಡು ಬೋನ್ ಗಳನ್ನು ಇಡಲಾಗಿದೆ.
ನಾಗಮಲೆಗೆ ತೆರಳುವಾಗ ನಡೆದಿದ್ದ ದಾಳಿ:
ಮೇ 10ರಂದು ಬೆಂಗಳೂರಿನ ಕಾಮಾಕ್ಷಿಪಾಳ್ಯದ ಎಂಟು ಮಂದಿ ಮಹಿಳೆಯರು ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ತೆರಳುವಾಗ ಮಾರ್ಗ ಮಧ್ಯದ ಇಂಡಿಗನತ್ತ ಗ್ರಾಮದ ಸಮೀಪ ಮಹಿಳೆಯರು ಹಾಗೂ ಬಾಲಕ ನಡೆದುಕೊಂಡು ಹೋಗುತ್ತಿದ್ದ ವೇಳೆ ಚಿರತೆಯು ಏಕಾಏಕಿ ಹರ್ಷಿತ್ (10) ನ ಮೇಲೆ ದಾಳಿ ನಡೆಸಿ ಅರಣ್ಯಕ್ಕೆ ಎಳೆದೊಯ್ದು ಕೊಂದಿತ್ತು. ಈ ವೇಳೆ ತಾಯಿ ಪವಿತ್ರ ಹಾಗೂ ಜೊತೆಗಿದ್ದ ಮಹಿಳೆಯರು ಕಿರುಚಾಡಿ ಬಾಲಕನ ಹುಡುಕಾಟ ನಡೆಸಿದಾಗ ಸ್ವಲ್ಪ ದೂರದಲ್ಲಿ ಬಾಲಕನ ಶವಪತ್ತೆಯಾಗಿತ್ತು.