ಮಾಡ್ಲಾ ಗ್ರಾಮದಲ್ಲಿ ಬೋನಿಗೆ ಬಿದ್ದ ಚಿರತೆ

| Published : Mar 12 2025, 12:53 AM IST

ಸಾರಾಂಶ

ಮಂಡ್ಯ: ತಾಲೂಕಿನ ಮಾಡ್ಲಾ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಉಂಟಾಗಿದ್ದ ಭಯದ ವಾತಾವರಣ ದೂರವಾಗಿದೆ.

ಮಂಡ್ಯ: ತಾಲೂಕಿನ ಮಾಡ್ಲಾ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಉಂಟಾಗಿದ್ದ ಭಯದ ವಾತಾವರಣ ದೂರವಾಗಿದೆ. ಕಳೆದ ಹಲವಾರು ದಿನಗಳಿಂದ ಗ್ರಾಮದ ಸಮೀಪದ ಗದ್ದೆ ಬಯಲಿನಲ್ಲಿ ಚಿರತೆಯೊಂದು ತನ್ನ ಮೂರ್ನಾಲ್ಕು ಮರಿಗಳೊಂದಿಗೆ ಸಂಚಾರ ನಡೆಸುತ್ತಿತ್ತು. ಗ್ರಾಮದ ಹಲವಾರು ಮಂದಿ ಈ ದೃಶ್ಯವನ್ನು ಕಂಡು ಭಯಭೀತರಾಗಿದ್ದರು. ಗ್ರಾಮದ ಸುತ್ತಲೂ ನಿತ್ಯವೂ ಸಂಚಾರ ನಡೆಸುತ್ತಿತ್ತೆನ್ನಲಾಗಿದ್ದು, ಈ ದೃಶ್ಯ ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಚಿರತೆಯ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಿದ್ದರು. ಕಳೆದ ಎರಡು ದಿನಗಳ ಹಿಂದೆ ಗ್ರಾಮದ ಸಮೀಪವಿರುವ ಹಳ್ಳದ ಬದಿಯಲ್ಲಿ ಬೋನು ಇಟ್ಟಿದ್ದರು. ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಮಂಗಳವಾರ ಮುಂಜಾನೆ ಚಿರತೆ ಸೆರೆಯಾಗಿದೆ. ಬೆಳಗ್ಗೆ ಜಮೀನಿನ ಕಡೆಗೆ ಹೋಗಿದ್ದ ಗ್ರಾಮಸ್ಥರು ಬೋನಿಗೆ ಬಿದ್ದಿದ್ದ ಚಿರತೆಯನ್ನು ಕಂಡು ಅರಣ್ಯಾಧಿಕಾರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಬೋನಿನೊಂದಿಗೆ ಕೊಂಡೊಯ್ದರು.