ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರುಇದೇ ಜು.29ರಿಂದ 14 ದಿನಗಳ ಕಾಲ ಕುಷ್ಠರೋಗ ಪತ್ತೆ ಹೆಚ್ಚುವ ಆಂದೋಲನ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಆಶಾ ಕಾರ್ಯಕರ್ತೆಯರು ಎಲ್ಲಾ ಗ್ರಾಮಗಳಲ್ಲಿ ಪ್ರತಿ ದಿನ 20 ಮನೆಗಳ ಸರ್ವೆ ನಡೆಸಲು ಅಗತ್ಯ ಕ್ರಮವನ್ನು ಕೈಗೊಂಡು, ಆಂದೋಲನ ಯಶಸ್ವಿಗೆ ಶ್ರಮಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾಂಡ್ವೆ ರಾಹುಲ್ ತುಕರಾಮ್ ಸಂಬಂಧಿಂಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸ್ಥಳೀಯ ಜಿಪಂ ಜಲ ನಿರ್ಮಲ ಸಭಾಂಗಣದಲ್ಲಿ ಎಲ್‌ಸಿಡಿಸಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷತೆ ವಹಿಸಿ, ಶುಕ್ರವಾರ ಮಾತನಾಡಿದ ಅವರು. ರಾಯಚೂರು ಜಿಲ್ಲೆಯಾದ್ಯಂತ (ಎಲ್‌ಸಿಡಿಸಿ) ಕುಷ್ಠರೋಗ ಪತ್ತೆ ಹಚ್ಚುವ ಅಂದೋಲನವು ಇದೇ ಜು.29ರಿಂದ ಆ.14 ರವರೆಗೆ 14 ದಿನಗಳ ವರೆಗೆ ಆಯೋಜಿಸಲಾಗಿದ್ದು, ಆಶಾ ಕಾರ್ಯಕರ್ತೆಯರು ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಪ್ರತಿನಿತ್ಯ 20 ಮನೆಗಳ ಕುಷ್ಠರೋಗ ಪತ್ತೆ ಹಚ್ಚುವ ಕುರಿತು ಸರ್ವೆ ಕೈಗೊಳ್ಳಬೇಕು. ಹೊಸ ಶಂಕಿತ ಪ್ರಕರಣಗಳನ್ನು ದಾಖಲಿಸಿ. ಕುಷ್ಠ ರೋಗ ಪ್ರಕರಣಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಮಟ್ಟದಲ್ಲಿ ಪರೀಕ್ಷಿಸಿ ಚಿಕಿತ್ಸೆನೀಡಬೇಕು ಎಂದರು. ಡಿಎಚ್ಒ ಡಾ.ಸುರೇಂದ್ರ ಬಾಬು ಮಾತನಾಡಿ, ಕುಷ್ಠ ರೋಗವು ಸಾಂಕ್ರಾಮಿಕ ರೋಗವಾಗಿದ್ದು, ಇದರ ರೋಗದ ಲಕ್ಷಣಗಳು ಮಾನವನ ಶರೀರದಲ್ಲಿ ಕಂಡುಬರಲು 05 ರಿಂದ 06 ವರ್ಷಗಳು ಬೇಕಾಗುತ್ತವೆ. 2024ರ ಎಪ್ರಿಲ್‌ನಿಂದ ಇಲ್ಲಿಯವರೆಗೆ ಒಟ್ಟು 28 ಕುಷ್ಠ ರೋಗ ಪ್ರಕರಣಗಳಿದ್ದು, ಇದರಲ್ಲಿ 11 ಪಿಬಿ. 17 ಎಮ್.ಬಿ ಪ್ರಕರಣಗಳಿದ್ದು, ಎಲ್ಲಾ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜೂನ್ ತಿಂಗಳಲ್ಲಿ ಪಿ.ಆರ್ ರೇಟ್ 0.3 ಇರುತ್ತದೆ. ಕುಷ್ಠ ರೋಗವನ್ನು 2030ರ ವೇಳೆಗೆ 0 ಪ್ರಕರಣಗಳನ್ನು ತರಲು ಆರೋಗ್ಯ ಇಲಾಖೆ ಶ್ರಮಿಸುತ್ತದೆ ಎಂದು ಹೇಳಿದರು. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು