ಸಾರಾಂಶ
ವಿಶ್ವ ಜೀವನ ಇಂದು ಭಯ ಮತ್ತು ಸಂಶಯದ ವಾತಾವರಣದಲ್ಲಿ ಬಳಲುತ್ತಿದೆ. ಅಲ್ಲಿ ವಿಶ್ವಾಸ, ಪ್ರೀತಿ, ಸೋದರತೆ, ಸಮಾನತೆಯ ಸಂಜೀವಿನಿಯನ್ನು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಗುಣಪಡಿಸುವ ಶಕ್ತಿ ಮಕ್ಕಳಲ್ಲಿ ಅಡಗಿದೆ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.
ಹಾವೇರಿ: ವಿಶ್ವ ಜೀವನ ಇಂದು ಭಯ ಮತ್ತು ಸಂಶಯದ ವಾತಾವರಣದಲ್ಲಿ ಬಳಲುತ್ತಿದೆ. ಅಲ್ಲಿ ವಿಶ್ವಾಸ, ಪ್ರೀತಿ, ಸೋದರತೆ, ಸಮಾನತೆಯ ಸಂಜೀವಿನಿಯನ್ನು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಗುಣಪಡಿಸುವ ಶಕ್ತಿ ಮಕ್ಕಳಲ್ಲಿ ಅಡಗಿದೆ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.
ತಾಲೂಕಿನ ಜಂಗಮನಕೊಪ್ಪ ಗ್ರಾಮದ ನವ ಚೈತನ್ಯ ವಿದ್ಯಾಲಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮಕ್ಕಳ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಸಕಾಲದಲ್ಲಿ ನೀತಿ ಕಥೆಗಳು, ಪಾಠಗಳು ಅಗತ್ಯವಾಗಿವೆ. ಚಾರಿತ್ರಿಕ ಕಥೆಗಳು ಮಕ್ಕಳ ಮನಸ್ಸಿನ ಮೇಲೆ ಹೆಚ್ಚಿನ ಪರಿಣಾಮ ಬೀರಬಲ್ಲವು. ಇದರಿಂದ ಅವರಿಗೆ ಇತಿಹಾಸ ಪಾಠಗಳು ಸುಲಭವಾಗುವ ಜತೆಗೆ ಮಕ್ಕಳ ಸದ್ಗುಣಗಳು, ಸದ್ಭಾವನೆಗಳು ಸಹ ಜಾಗೃತಗೊಳ್ಳಲು ಅನುಕೂಲವಾಗುವವು ಎಂದರು.ಮಕ್ಕಳ ಮನಸ್ಸು ಹಸಿಯಾದ ಮಣ್ಣಿನ ಪಾತ್ರೆಯಂತೆ, ಅದರ ಮೇಲೆ ಎಂತಹ ಮಾತುಗಳು ಮತ್ತು ವಿಚಾರಗಳ ಗೆರೆಗಳನ್ನು ನಾವು ಮೂಡಿಸುತ್ತವೆಯೋ ಆ ರೀತಿಯಲ್ಲಿ ಮಕ್ಕಳ ಮನಸ್ಸು ರೂಪಗೊಳ್ಳುತ್ತದೆ ಎಂದು ಅವರು ನೀತಿ, ಹಾಸ್ಯ ಕಥೆಗಳ ಮೂಲಕ ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವ ಜಗತ್ತಿನ ವಿಷಮ ವಾತಾವರಣ ಪ್ರತಿಕೂಲ ಪರಿಸರದಿಂದ ಮಕ್ಕಳನ್ನು ಸಂರಕ್ಷಿಸುವ ಅವಶ್ಯಕತೆ ಇದೆ ಎಂದರು.ಉಪಪ್ರಾಚಾರ್ಯೆ ಹಿಮ ಬಿಂದು, ಮುಖ್ಯಶಿಕ್ಷಕ ಸಂತೋಷ ಬೆನಕವಾಡಿ, ಮಾಲತೇಶ ಹಾವೇರಿ, ದಾನಮ್ಮ ಮುದಿಹಳ್ಳಿ, ಕವಿತಾ ಹಾವೇರಿ, ರೂಪಾ ಕಡ್ಡಿಪುಡಿ, ವಿಜಯಲಕ್ಷ್ಮೀ, ಬಾನಪ್ಪನವರ, ಅಜಿಜಾ ಇದ್ದರು. ಛಾಯಾ ಮುಳುಗುಂದ ಸ್ವಾಗತಿಸಿದರು. ಸಂತೋಷ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಾಹ್ನವಿ ಯಾವಗಲ್ಲಮಠ ವಂದಿಸಿದರು.