ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶಾಭಿಮಾನವನ್ನು ರೂಢಿಸಿಕೊಂಡು ನಡೆಯುವುದರೊಂದಿಗೆ ದೇಶ ವಿದೇಶಗಳಲ್ಲಿಯೂ ತನ್ನ ಘನತೆ, ಗೌರವದಿಂದ ಮುನ್ನಡೆದಿದೆ. ಈ ಸಂಘಟನೆ ಸೂರ್ಯ ಚಂದ್ರ ಇರೋವರೆಗೂ ಬೆಳೆಯಲಿದೆ. ಅಲ್ಲಿಯವರೆಗೂ ಭಾರತ ಮಾತೆಯ ಭಕ್ತಿ ಶ್ರದ್ದೆ ಇದ್ದೇ ಇರುತ್ತದೆ ಎಂದು ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀಸಿದ್ದಲಿಂಗ ದೇವರು ಹೇಳಿದರು.ವಿಜಯ ದಶಮಿಯ ನಿಮಿತ್ತವಾಗಿ ಗುರುವಾರ ಪಟ್ಟಣದ ಕನ್ನಡ ಶಾಲಾ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ಘಟಕದಿಂದ ಸಂಘದ ಶತಾಭ್ದಿ ಅಂಗವಾಗಿ ಬೌದ್ಧಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಮಯ ಪ್ರಜ್ಞೆ, ಶಿಸ್ತು ಹಾಗೂ ದೇಶಾಭಿಮಾನವನ್ನು ದಿನನಿತ್ಯ ಕಲಿಸುತ್ತಿದೆ. ಜನರು ಸ್ವಯಂ ಸೇವಕರಂತೆ ಮುಂದುವರೆಯುತ್ತಾ ದಿನನಿತ್ಯ ಅಲ್ಲಿ ನಡೆಯುತ್ತಿರುವ ಶಾಖೆಗಳಲ್ಲಿ ಪಾಲ್ಗೊಂಡು ಹಿತ ನುಡಿಗಳನ್ನು ಕೇಳುವುದರೊಂದಿಗೆ ದೇಶಾಭಿಮಾನವನ್ನು ರೂಢಿಸಿಕೊಳ್ಳಬೇಕಿದೆ. ಹಿಂದೂ ಒಂದು ಪದ ಅರ್ಥ ಗರ್ಭಿತವಾಗಿದೆ. ಆದರೆ ಜಾತಿ ಜಾತಿ ಎನ್ನುವಂತಹದ್ದು ಮುನ್ನಡೆದಿದೆ. ಇದರಿಂದ ಒಗ್ಗಟ್ಟೆಂಬ ಬಲ ಎದ್ದು ಕಾಣುತ್ತಿಲ್ಲ. ಒಗ್ಗಟ್ಟು ಇದ್ದರೆ ಬೇಕಾದುದ್ದನ್ನು ಸಾಧಿಸಬಹುದಾಗಿದೆ ಎಂದ ಶ್ರೀಗಳು, ಸಂಘ ಒಗ್ಗಟ್ಟನ್ನು ಸೃಷ್ಟಿಸಿ ದೇಶದ ಇತಿಹಾಸ ಕಾಪಾಡಲು ಮುಂದಾಗಿದೆ ಎಂದು ತಿಳಿಸಿದರು.ಕರ್ನಾಟಕ ಉತ್ತರ ಪ್ರಾಂತ ಪ್ರಚಾರಕ ಶ್ರೀನಿವಾಸಜಿ ಮಾತನಾಡಿ, ವಿಜಯದಶಮಿ ದೇಶ ವಿದೇಶಗಳಲ್ಲಿಯೂ ಆಚರಿಸಲಾಗುತ್ತದೆ. ಹಬ್ಬದ ಆಚರಣೆ ಮನಸ್ಸಿಗೆ ಮುದ ನೀಡುವ ಹಬ್ಬವಾಗಿದೆ. ರಾಮಾಯಣ, ಮಹಾಭಾರತ ಕಾಲದಲ್ಲಿಯ ದುಷ್ಟಶಕ್ತಿಗಳ ಉಪಟಳವನ್ನು ಹಾಗೂ ಶ್ರೀದೇವಿಯ ಮುಂದೆ ಶುಂಭ, ನಿಶುಂಭರು ನಡೆಸಿರುವ ಉಪಟಳವನ್ನು ನಿರ್ನಾಮ ಮಾಡಲು ಮುಂದಾದ ಶ್ರೀ ಮಹಿಷಾಸುರ ಮರ್ಧಿನಿಯಾದ ಶ್ರೀದೇವಿಯನ್ನು ಪ್ರತಿವರ್ಷ ಆರಾಧಿಸುವುದೇ ವಿಯದಶಮಿ ಹಬ್ಬ. ದೇಶದಲ್ಲಿ ಒಗ್ಗಟ್ಟನ್ನು ಹೆಚ್ಚಿಸಿ ಬ್ರೀಟಿಷರ ಆಳ್ವಿಕೆಯನ್ನು ನಿರ್ನಾಮ ಮಾಡಬೇಕೆಂಬ ಉದ್ದೇಶ ಹೊತ್ತಿದ್ದ ಡಾ.ಹೆಡಗೇವಾರ ೮ ವರ್ಷದವರಿರುವಾಗಲೇ ದೇಶ ಪ್ರೇಮವನ್ನು ತುಂಬಿಕೊಂಡು ೧೯೨೫ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸ್ಥಾಪಿಸಿದರು. ಎಲ್ಲರಲ್ಲಿ ಒಗ್ಗಟ್ಟನ್ನು ಮೂಡಿಸುವಲ್ಲಿ ಯಶಸ್ವಿಯಾದರು. ಎಲ್ಲರಲ್ಲಿಯೂ ದೇಶಪ್ರೇಮ ತುಂಬುವ ಕಾರ್ಯ ಮಾಡಿದ ಅವರು, ಈ ದೇಶದ ಅವನತಿಗೆ ಹಾಗೂ ಉನ್ನತಿಗೆ ನಾವೇ ಕಾರಣಿಭೂತರಾಗಬಾರದು. ಈ ಉದ್ದೇಶದಿಂದಲೇ ಒಗ್ಗಟ್ಟಿನಿಂದ ಹಿಂದುತ್ವವೆಂಬುದನ್ನು ಬೆಳೆಸಲು ಮುಂದಾಗಿದ್ದರಿಂದ ಈಗ ದೇಶ ವಿದೇಶಗಳಲ್ಲಿಯೂ ಸಂಘದ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಇಲ್ಲಸಲ್ಲದ ಮಾತುಗಳನ್ನು ಆಲಿಸುತ್ತಾ ನಾವು ಹಿಂದೂಗಳೇ ಎಂಬುದನ್ನು ಮರೆತುಬಿಟ್ಟಿದ್ದೇವೆ ಎಂದೆನಿಸುತ್ತಿದೆ. ಅಲ್ಲದೇ, ಸಂಘ ಮುಸ್ಲಿಂ ವಿರೋಧಿ ಎಂದು ಬಿಂಬಿಸಲಾಗುತ್ತದೆ. ನಾವು ಮುಸ್ಲಿಂ ವಿರೋಧಿಯಲ್ಲ. ಭಾರತದ ೪೮ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಲಾಗುತ್ತದೆ. ಸಂಘ ಸಮಾಜದ ಕೇಂದ್ರಬಿಂದುವಾಗಿದೆ ಎಂದು ತಿಳಿಸಿದರು.ಈ ಸಮಯದಲ್ಲಿ ಸಂಘದ ನಗರ ಘಟಕದಿಂದ ಸಿದ್ದಲಿಂಗಶ್ರೀಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ಭಗವಾಧ್ವಜಾರೋಹಣ ಹಾಗೂ ಪ್ರಾರ್ಥನೆ ಜರುಗಿತು. ಈ ಸಮಯದಲ್ಲಿ ವಿಜಯಪುರ ವಿಭಾಗದ ಸಂಘ ಚಾಲಕರಾದ ಚಿದಂಬರ ಕರಮರಕರ ಹಾಗೂ ಗಣವೇಶದಾರಿ ಸ್ವಯಂ ಸೇವಕರು ಪಾಲ್ಗೊಂಡಿದ್ದರು.