ಸಾರಾಂಶ
ಶಿರಸಿ: ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕಾರ ಮಾಡಿದ್ದು, ವರದಿ ವಿರೋಧಿಸಿ ರಾಜ್ಯದ ಸಂಸದರು ಸಂಸತ್‌ನಲ್ಲಿ ಧ್ವನಿ ಎತ್ತಬೇಕು. ಕೇಂದ್ರವು ಈ ಯೋಜನೆಯಿಂದ ಸಂಕಷ್ಟಕ್ಕೀಡಾಗುವ ೧೦ ಜಿಲ್ಲೆಗಳಿಗೆ ವಿನಾಯಿತಿ ನೀಡಬೇಕು. ಈ ಕುರಿತು ಆಯಾ ಸಂಸದರು ಕೇಂದ್ರದ ಮೇಲೆ ಒತ್ತಡ ತರಲು ಪತ್ರ ಬರೆದು ಹಕ್ಕೊತ್ತಾಯ ಮಾಡುತ್ತೇನೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೈಗಾ ಅಣುಸ್ಥಾವರ, ನೌಕಾನೆಲೆ, ಜಲ ವಿದ್ಯುತ್ ಯೋಜನೆ ಸೇರಿದಂತೆ ರಾಷ್ಟ್ರೀಯ ಯೋಜನೆಗಳಿಗಾಗಿ ಜಿಲ್ಲೆಯ ಜನರು ನೂರಾರು ಎಕರೆ ಜಾಗವನ್ನು ತ್ಯಾಗ ಮಾಡಿದ್ದಾರೆ. ಹೀಗಾಗಿ ಕಸ್ತೂರಿರಂಗನ್ ವರದಿ ಜಾರಿಗೆ ಜಿಲ್ಲೆಗೆ ವಿನಾಯಿತಿ ನೀಡಬೇಕು. ರಾಜ್ಯದ ೧೦ ಜಿಲ್ಲೆಯ ವ್ಯಾಪ್ತಿಯಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಶಿಫಾರಸು ಮಾಡಿದೆ. ಇದರಲ್ಲಿ ನಮ್ಮ ಜಿಲ್ಲೆಯ ಹೆಚ್ಚು ಹಳ್ಳಿಗಳು ಒಳಗೊಂಡಿವೆ. ಶಿರಸಿ ತಾಲೂಕಿನಲ್ಲಿ ೨೯ ಪಂಚಾಯಿತಿ ಮತ್ತು ಸಿದ್ದಾಪುರ ತಾಲೂಕಿನ ೨೩ ಪಂಚಾಯಿತಿ ವ್ಯಾಪ್ತಿಯು ಕಸ್ತೂರಿ ರಂಗನ್ ವ್ಯಾಪ್ತಿಯಲ್ಲಿ ಬಂದಿದೆ ಎಂದರು.ಅಭಿವೃದ್ಧಿಗೆ ಮಾರಕ: ಕಸ್ತೂರಿರಂಗನ್ ಪ್ರದೇಶದಲ್ಲಿ ಗುರುತಿಸಲಾದ ಸೂಕ್ಷ್ಮ ಪ್ರದೇಶದಲ್ಲಿ ಶಾಶ್ವತ ಕಟ್ಟಡ, ರಸ್ತೆ, ಟೌನ್‌ಶಿಪ್, ಬಹುಮಹಡಿ ಕಟ್ಟಡಗಳ ನಿರ್ಮಾಣ ಸಾಧ್ಯವಿಲ್ಲ. ಆಧುನಿಕ ಪ್ರವಾಸೋದ್ಯಮಕ್ಕೆ ಮಾರಕವಾಗಿದ್ದು, ವಿದ್ಯುತ್ ಸಂಪರ್ಕ, ಬೋರ್‌ವೆಲ್, ಮರಳುಗಾರಿಕೆ, ಕೈಗಾರಿಕೆ, ಗಣಿಗಾರಿಕೆ, ವಾಣಿಜ್ಯೀಕರಣ, ಹೊಸ ವೈದ್ಯಕೀಯ ಕಟ್ಟಡ ಕಾಮಗಾರಿಗಳಿಗೆ ನಿಯಂತ್ರಣ ಹೇರಲಾಗುತ್ತದೆ. ಈ ಕಾರಣದಿಂದ ವಿರೋಧಿಸುವುದು ಅನಿವಾರ್ಯವಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಪ್ರಮುಖರಾದ ಎಸ್.ಕೆ. ಭಾಗ್ವತ್ ಸಿರ್ಸಿಮಕ್ಕಿ, ಅಬ್ಬಾಸ ತೋನ್ಸೆ ಮತ್ತಿತರರು ಇದ್ದರು.
ಮಾರಿಗುಡಿ ರಸ್ತೆ ಶೀಘ್ರ ಅಗಲೀಕರಣ!ನಗರದ ಮಾರಿಗುಡಿ ರಥಬೀದಿ ಅಗಲೀಕರಣ ಮಾಡುವ ಮುನ್ನ ಅಲ್ಲಿನ ನಿವಾಸಿಗಳನ್ನು ವಿಶ್ವಾಸಕ್ಕೆ ಪಡೆಯಲಾಗುತ್ತದೆ. ರಸ್ತೆ ಇಕ್ಕಟ್ಟಾಗಿರುವುದರಿಂದ ಜಾತ್ರೆಯ ಸಂದರ್ಭದಲ್ಲಿ ರಥ ಎಳೆಯಲು ತೀವ್ರ ಸಮಸ್ಯೆಯಾಗುತ್ತಿದೆ ಎಂಬ ದೂರು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಅಲ್ಲಿನ ಜನರ ಜತೆ ಮತ್ತು ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿ ಜತೆ ಚರ್ಚಿಸಿ ಮುಂದಿನ ಕ್ರಮ ವಹಿಸಲಾಗುತ್ತದೆ. ಶೀಘ್ರವಾಗಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಭರವಸೆ ನೀಡಿದರು.