ಸಾರಾಂಶ
ಕಾರವಾರ: ತಮ್ಮ ಸಹೋದರ ದೇವಪುತ್ರ ಯಶೋಬಾ ಗುರುನಾಳ ಆತ್ಮಹತ್ಯೆ ಮಾಡಿಕೊಳ್ಳಲು ಮುಂಡಗೋಡ ಪಪಂನ ಕೆಲವು ಅಧಿಕಾರಿಗಳೆ ಕಾರಣರಾಗಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮವಾಗುತ್ತಿಲ್ಲ ಎಂದು ದೇವಪ್ರಸಾದ ಆರೋಪಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಹೋದರ ದೇವಪುತ್ರ ಮುಂಡಗೋಡ ಪಪಂನಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಕೆಲವು ಅಧಿಕಾರಿಗಳು ಅವಾಚ್ಯ ಶಬ್ದದಿಂದ ನಿಂದಿಸುವುದು, ತಮ್ಮ ಮನೆ ಕೆಲಸ ಮಾಡಿಸಿಕೊಳ್ಳುವುದು ಒಳಗೊಂಡು ವಿವಿಧ ರೀತಿಯಲ್ಲಿ ಕಿರುಕುಳ ನೀಡಿದ್ದಾರೆ. ಕೂಲಿಯಾಳಿನಂತೆ ಅವರನ್ನು ನಡೆಸಿಕೊಂಡಿದ್ದಾರೆ. 2022ರ ಆಗಸ್ಟ್‌ನಲ್ಲಿ ಮನೆಯಿಂದ ಪಪಂಗೆ ಹೋಗಿದ್ದು, ಮಧ್ಯಾಹ್ನದ ವೇಳೆಗೆ ವಾಪಸ್ ಆಗಿದ್ದಾನೆ. ಬಳಿಕ ಮನೆಯ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದರೆ ಮುಂಡಗೋಡಿನ ಅಂದಿನ ಸಿಪಿಐ, ಪಿಎಸ್‌ಐ ದೂರು ದಾಖಲಿಸಿಕೊಂಡಿಲ್ಲ. ಈಗಾಗಲೆ ಜಿಲ್ಲಾಧಿಕಾರಿಗೆ, ಜಿಲ್ಲಾ ಪೊಲೀಸ್ ವರಿಷ್ಠರಿಗೆ ಪತ್ರ ಬರೆಯಲಾಗಿದೆ. ಆದರೆ ಯಾರಿಂದಲೂ ಸ್ಪಂದನೆ ಸಿಕ್ಕಿಲ್ಲ ಎಂದು ದೂರಿದರು.ದಲಿತ ಸಮುದಾಯದ ವ್ಯಕ್ತಿಗೆ ಅನ್ಯಾಯವಾಗಿದ್ದರೂ ಯಾರೂ ಸ್ಪಂದಿಸುತ್ತಿಲ್ಲ. ಸಹೋದರ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು ಎಂದು ಆಗ್ರಹಿಸಿದರು.ಚಿನ್ನಾಭರಣ ಕಳ್ಳತನ: ದೂರು ದಾಖಲು
ಶಿರಸಿ: ತಾಲೂಕಿನ ದಾಸನಕೊಪ್ಪದಲ್ಲಿ ಮನೆಯ ಹಿಂದಿನ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಸುಮಾರು ₹೬೦,೫೦೦ ಮೌಲ್ಯದ ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ಕಳ್ಳತನ ನಡೆಸಿದ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮನೆಯ ಹಿಂಬದಿಯ ಬಾಗಿಲಿಗೆ ಕಟ್ಟಿದ ಹಗ್ಗವನ್ನು ತುಂಡು ಮಾಡಿ ನಂತರ ಬಾಗಿಲಿಗೆ ಇರುವ ಚಿಲಕವನ್ನು ಹೇಗೋ ತೆಗೆದು ಮನೆಯೊಳಗೆ ಪ್ರವೇಶಿಸಿ, ಕಬ್ಬಿಣದ ಗೋದ್ರೇಜ್ ಕಪಾಟಿನ ಬಾಗಿಲನ್ನು ತೆಗೆದು ಅದರಲ್ಲಿಯ ಸ್ಟೀಲ್ ಡಬ್ಬದಲ್ಲಿದ್ದ ₹೧೫ ಸಾವಿರ ಮೌಲ್ಯದ ೩ ಗ್ರಾಂ ತೂಕದ ಬಂಗಾರದ ಉಂಗುರ, ₹೨೦ ಸಾವಿರ ಮೌಲ್ಯದ ೪ ಗ್ರಾಂ ತೂಕದ ೧ ಜೊತೆ ಬೆಂಡೋಲೆ, ₹೧೦ ಸಾವಿರ ಮೌಲ್ಯದ ೨ ಗ್ರಾಂ ತೂಕದ ಬಂಗಾರದ ೧ ಜೊತೆ ಕಿವಿ ಬಟನ್ಸ್, ಕಿವಿಗೆ ಹಾಕುವ ೨ ಗ್ರಾಂ ತೂಕದ ₹೧೦ ಸಾವಿರ ಮೌಲ್ಯದ ಮೆಗಾ ಶ್ರೀದೇವಿ ೧ ಜೊತೆ, ₹೨ ಸಾವಿರ ಮೌಲ್ಯದ ಬೆಳ್ಳಿಯ ಬ್ರಾಸ್ ಲೈಟ್, ₹೧ ಸಾವಿರ ಮೌಲ್ಯದ ಬೆಳ್ಳಿಯ ಕೈ ಕಡಗ, ₹೨೫ ಸಾವಿರ ಮೌಲ್ಯದ ಬೆಳ್ಳಿಯ ಕಾಲು ಚೈನು ೧ ಜೊತೆ ಸೇರಿದಂತೆ ಒಟ್ಟೂ ₹೬೦,೫೦೦ ಮೌಲ್ಯದ ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ಕಳ್ಳತನ ನಡೆಸಿದ್ದಾರೆ ಎಂದು ಶೇಖಪ್ಪ ಲಕ್ಷ್ಮಣ ಸಾಕಣ್ಣನವರ ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ. ವ್ಯಕ್ತಿ ನಾಪತ್ತೆ: ದೂರು ದಾಖಲುಶಿರಸಿ: ವ್ಯಕ್ತಿಯೊಬ್ಬ ನಾಪತ್ತೆಯಾದ ಕುರಿತು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತಾಲೂಕಿನ ಕಳವೆಯ ಗಣೇಶ ಬೈರವೇಶ್ವರ ಭಟ್(೬೩) ನಾಪತ್ತೆಯಾದ ವ್ಯಕ್ತಿ. ಇವರು ನ. ೧೧ರಂದು ಬೆಳಗ್ಗೆ ೧೦ ಗಂಟೆಗೆ ಶಿರಸಿ ರಾಘವೇಂದ್ರ ಮಠದಲ್ಲಿ ಕೆಲಸ ಮಾಡುವ ತನ್ನ ಸಹದ್ಯೋಗಿಯಲ್ಲಿ ಮೈಸೂರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಈವರೆಗೂ ಮರಳಿ ಮನೆಗೆ ಬಂದಿಲ್ಲ ಎಂದು ಸಹೋದರ ರಮೇಶ ಬೈರವೇಶ್ವರ ಭಟ್ ದೂರು ನೀಡಿದ್ದಾರೆ.