ಕೃಷಿ ಉದ್ಯೋಗವಾಗದೆ ಉದ್ಯಮವಾಗಲಿ: ರಾಯರಡ್ಡಿ

| Published : Sep 11 2024, 01:02 AM IST

ಸಾರಾಂಶ

ಕೃಷಿ ಉದ್ಯೋಗವಾಗದೆ ಉದ್ಯಮವಾಗಬೇಕು. ಈ ಭಾಗದ ರೈತರ ಶ್ರೆಯೋಭಿವೃದ್ಧಿಗಾಗಿ ರೈತ ಭವನ ನಿರ್ಮಾಣ ಮಾಡಲಾಗುವುದು.

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ । ಸೌರಶಕ್ತಿ ಚಾಲಿತ ಈರುಳ್ಳಿ ಸಂಗ್ರಹಣೆ, ಸಿರಿಧಾನ್ಯ ಘಟಕಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಕುಕನೂರು

ಕೃಷಿ ಉದ್ಯೋಗವಾಗದೆ ಉದ್ಯಮವಾಗಬೇಕು. ಈ ಭಾಗದ ರೈತರ ಶ್ರೆಯೋಭಿವೃದ್ಧಿಗಾಗಿ ರೈತ ಭವನ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕೃಷಿ ವಿವಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಕೃ.ತಾ.ವಿ.ವಿ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಭಾರತೀಯ ಸಿರಿಧಾನ್ಯ ಸಂಶೊಧನಾ ಸಂಸ್ಥೆ ಹಾಗೂ ಕುಕನೂರು ಧರಣಿ ಸಿರಿಧಾನ್ಯ ಉತ್ಪಾದಕರ ಕಂಪನಿ ನೇತೃತ್ವದಲ್ಲಿ ಸೌರಶಕ್ತಿ ಚಾಲಿತ ಈರುಳ್ಳಿ ಸಂಗ್ರಹಣೆ ಮತ್ತು ಒಣಗಿಸುವ ಘಟಕ ಮತ್ತು ಸಿರಿಧಾನ್ಯಗಳ ಮೌಲ್ಯವರ್ಧನೆಗೊಳಿಸುವ ಘಟಕ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ಈ ಭಾಗದಲ್ಲಿ ರೈತರನ್ನು ಸರ್ವಾಂಗೀಣ ಅಭಿವೃದ್ಧಿಗೊಳಿಸಲು ಪ್ರಾಮಾಣಿಕವಾಗಿ ಕಾರ್ಯ ಮಾಡಲಾಗುತ್ತದೆ. ಆದರೆ ಕೃಷಿ ಕಡೆ ಹೆಚ್ಚಿನ ಆದ್ಯತೆ ನೀಡಬೇಕು. ಉತ್ತಮ ಕೃಷಿ ಪ್ರಗತಿ ಕಾಣಲು ವಿನೂತನ ಪದ್ಧತಿ ಅಳವಡಿಸಿಕೊಳ್ಳಲು ಮುಂದಾಗಬೇಕು. ರೈತರು ಹೊಸ ಬೆಳೆಗಳನ್ನು ಬೆಳೆಯಲು ವಿಜ್ಞಾನಿಗಳ, ತಜ್ಞರ ಸಲಹೆ ಪಡೆಯಬೇಕು. ಕ್ಷೇತ್ರದಲ್ಲಿ ಅಭಿವೃದ್ಧಿಗಳಿಗೆ ಜನರು ಸಹಕಾರ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಗ್ರಾಮಕ್ಕೆ ₹೫೦ ಲಕ್ಷ ವೆಚ್ಚದಲ್ಲಿ ಪಶು ಆಸ್ಪತ್ರೆ ಈಗಾಗಲೇ ಮಂಜೂರಾತಿಯಾಗಿದ್ದು, ರೈತ ಭವನಕ್ಕೆ ಬೇಕಾಗುವ ಜಮೀನನ್ನು ನೀಡಿದ್ದಲ್ಲಿ ಆದಷ್ಟು ಬೇಗ ನಿರ್ಮಿಸಲು ಸಾಧ್ಯವಾಗುತ್ತದೆ. ನೀರಾವರಿಗೆ ಬೇಕಾಗುವ ಕೆರೆಗಳು ಯಲಬುರ್ಗಾ ಮತ್ತು ಕುಕನೂರು ತಾಲೂಕುಗಳಿಗೆ ಮಂಜೂರಾತಿಯಾಗಿದ್ದು, ಮುಂದಿನ ದಿವಸಗಳಲ್ಲಿ ೧೧೦೦ ಎಕರೆಗಳಿಗೆ ಅನುಕೂಲವಾಗುವುದೆಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಗ್ರಾಮದ ಮೈಸೂರುಮಠದ ಶ್ರೀವಿಜಯಮಹಾಂತ ಮಹಾಂತ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬಹುತೇಕ ರೈತರು ಸಿರಿಧಾನ್ಯ ಬೆಳೆಗಳತ್ತ ವಾಲಬೇಕಿದೆ. ಅನ್ನದಾತರು ಎಲ್ಲ ಬೆಳೆಗಳನ್ನು ಬೆಳೆಸಲು ಮುಂದಾಗಬೇಕು. ಕ್ಷೇತ್ರದಲ್ಲಿ ಸಾಕಷ್ಟು ಜನಪರ ಕಾಳಜಿ ವಹಿಸಿ ಆಡಳಿತ ನಡೆಸುವ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಂತ್ರಿಯಾಗಿರದೇ ಇರುವುದು ಮತ ಕ್ಷೇತ್ರದಲ್ಲಿ ನೋವಿನ ಸಂಗತಿ. ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನ ದೊರೆಯಬೇಕು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫರೀದಾಬೇಗಂ ಅಧ್ಯಕ್ಷತೆ ವಹಿಸಿದ್ದರು. ರಾಯಚೂರು ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ತಿಪ್ಪಣ್ಣ ಚವಡಿ, ಜಿಲ್ಲಾ ಕೃಷಿ ವಿಸ್ತಾರಣಾ ಶಿಕ್ಷಣ ಕೇಂದ್ರದ ಪ್ರಾಧ್ಯಾಪಕ ಡಾ. ಎಂ.ವಿ. ರವಿ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ. ರುದ್ರೇಶಪ್ಪ ಟಿ.ಎಸ್., ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ್, ವಿಜ್ಞಾನಿ ಡಾ. ವಾಮನಮೂರ್ತಿ, ದಳಪತಿ ಹಮನಗೌಡ ಗೌಡ್ರ, ಹಾಪಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ, ಜಿಪಂ ಮಾಜಿ ಸದಸ್ಯರಾದ ಮಹೇಶ ಹಳ್ಳಿ, ಅಶೋಕ ತೋಟದ್, ಶ್ರೇಷ್ಠ ಕೃಷಿಕ ಪಂಡಿತ ಪ್ರಶಸ್ತಿ ಪುರಸ್ಕೃತ ಹಾಗೂ ಪ್ರಗತಿಪರ ರೈತ ಸುರೇಶ ಚೌಡ್ಕಿ, ಮುಖಂಡರಾದ ರಾಮಪ್ಪ, ಫಕೀರಪ್ಪ, ತ್ರೀನಾಥರಡ್ಡಿ ಸೇರಿದಂತೆ ರೈತ ಮುಖಂಡರು ಹಾಗೂ ಇತರರು ಇದ್ದರು.

10ಕೆಕೆಆರ್1

ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ನಡೆದ ಸೌರಶಕ್ತಿ ಚಾಲಿತ ಈರುಳ್ಳಿ ಸಂಗ್ರಹಣೆ ಮತ್ತು ಸಿರಿಧಾನ್ಯಗಳ ಮೌಲ್ಯವರ್ಧನೆಗೊಳಿಸುವ ಘಟಕ ಉದ್ಘಾಟನಾ ಸಮಾರಂಭಕ್ಕೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಚಾಲನೆ ನೀಡಿದರು.