ಆಕಾಶವಾಣಿ ಗಾಯನ, ವಾದನ ಕಲಾವಿದರ ನೇಮಕಾತಿಗೆ ಮುಂದಾಗಲಿ

| Published : Jan 10 2025, 12:47 AM IST

ಸಾರಾಂಶ

ಎಲ್ಲ ಕ್ಷೇತ್ರಗಳ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಲಾವಿದರು ಧಾರವಾಡ ಆಕಾಶವಾಣಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ವರ್ಷಗಳು ಉರುಳಿದಂತೆ, ಆಕಾಶವಾಣಿ ಸದೃಢವಾಗುತ್ತ ಸಾಗಿದೆ.

ಧಾರವಾಡ:

ಕೇಳುವ, ಕೇಳಿಸಿಕೊಳ್ಳುವ ವಿವೇಕ ಸಂಸ್ಕೃತಿಯನ್ನು ಸ್ವಭಾವವಾಗಿಸಿದ್ದು ಧಾರವಾಡ ಆಕಾಶವಾಣಿ. ಹಿರಿಯರ ಅನುಭಾವದಿಂದ, ಯುವ ಕಲಾವಿದರು ಕೇಳಿ ಪಡೆದ ಅನುಭವ ಬೆಳೆಯಲು, ಆಧಾರ ಮತ್ತು ವೇದಿಕೆ ಒದಗಿಸಿದೆ ಎಂದು ಪದ್ಮಶ್ರೀ ಪಂ. ಎಂ. ವೆಂಕಟೇಶಕುಮಾರ ಶ್ಲಾಘಿಸಿದರು.

ಆಕಾಶವಾಣಿ ಧಾರವಾಡ ಕೇಂದ್ರದ ಆವರಣದಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ಅಮೃತ ಮಹೋತ್ಸವದಲ್ಲಿ ಅವರು ಮಾತನಾಡಿ, ಗದುಗಿನ ವೀರೇಶ್ವರ ಪುಣ್ಯಾಶ್ರಮದಂತೆ, ಉಸ್ತಾದ್ ಕರೀಂಖಾನ್ ಸಾಹೇಬರ ಧಾರವಾಡ ಸಿತಾರ ಘರಾಣೆಯಂತೆ, ಧಾರವಾಡಕ್ಕೊಂದು ವಿಶಿಷ್ಟ ಮೆರಗು ತಂದಿತ್ತ ಆಕಾಶವಾಣಿ, ಶ್ರೀಸಾಮಾನ್ಯರ ಮಾಧ್ಯಮ. ಬಹುಜನರ ಹಿತ, ಬಹುಜನರ ಸುಖ ಸಾಧಿಸುವ ಧ್ಯೇಯದ ಆಕಾಶವಾಣಿ, ಗಾಯನ ಮತ್ತು ವಾದನ ಕ್ಷೇತ್ರದ ಕಲಾವಿದರ ನೇಮಕಾತಿಗೆ ಮುಂದಾಗಲಿ ಎಂದರು.

ಚಿಕ್ಕಮಕ್ಕಳ ತಜ್ಞ ಡಾ. ರಾಜನ್ ದೇಶಪಾಂಡೆ ಮಾತನಾಡಿ, ಎಲ್ಲ ಕ್ಷೇತ್ರಗಳ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಲಾವಿದರು ಧಾರವಾಡ ಆಕಾಶವಾಣಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ವರ್ಷಗಳು ಉರುಳಿದಂತೆ, ಆಕಾಶವಾಣಿ ಸದೃಢವಾಗುತ್ತ ಸಾಗಿದೆ. ಆದರೆ, ಇತ್ತೀಚೆಗೆ ಆಕಾಶವಾಣಿ ಸಹ ವಾಣಿಜ್ಯೀಕರಣಗೊಳ್ಳುತ್ತಿದೆಸೆಂದು ಬೇಸರ ವ್ಯಕ್ತಪಡಿಸಿದರು.ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಆಕಾಶವಾಣಿ ಧ್ಯಾನ ಕೇಂದ್ರ. ಸಮ್ಯಕ್ ದರ್ಶನದ ಗಣಿ. ಮೌನ ಸಂಧಾನಕ್ಕೆ ಮಾರ್ಗದರ್ಶಿ. ಕವಿವಿ, ಕರ್ನಾಟಕ ವಿದ್ಯಾವರ್ಧಕ ಸಂಘ, ಮೃತ್ಯುಂಜಯ ಅಪ್ಪಗಳ ಮುರುಘಾಮಠ ಹಾಗೂ ಆಕಾಶವಾಣಿ ಕೇಂದ್ರ ಈ ನಾಲ್ಕೂ, ಧಾರವಾಡಕ್ಕೆ ಸಾಂಸ್ಕೃತಿಕ ಹಿರಿಮೆ-ಗರಿಮೆಯನ್ನು ತಂದುಕೊಟ್ಟಿವೆ ಎಂದರು.

ಕಾರ್ಯಕ್ರಮ ಮುಖ್ಯಸ್ಥ ಶರಣಬಸವ ಚೋಳಿನ ಪ್ರಾಸ್ತಾವಿಕ ನುಡಿಗಳನ್ನಾಡಿ, ಆಕಾಶವಾಣಿ ಕೇಂದ್ರ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಂಪೂರ್ಣ ಡಿಜಿಟಲಿಕರಣಗೊಂಡಿದೆ. ಯು ಟ್ಯೂಬ್ ಚಂದಾದಾರರ ಸಂಖ್ಯೆ ಮೂರೂವರೆ ಲಕ್ಷ ದಾಟಿರುವುದು, ಜನಪ್ರಿಯತೆಗೆ ಸಾಕ್ಷಿ. ಸಾಂಸ್ಕೃತಿಕ ಸಿರಿಯಾದ ಆಕಾಶವಾಣಿ, ಎಲ್ಲ ಕ್ಷೇತ್ರಗಳ, ಕಲೆಗಳ ಸಮ್ಮಿಳಿತ ಸಿರಿ ಎಂದು ಬಣ್ಣಿಸಿದರು.

ಮಂಜುಳಾ ಪುರಾಣಿಕ ಸ್ವಾಗತಿಸಿದರು. ಹಿರಿಯ ಉದ್ಘೋಷಕಿ ಮಾಯಾ ರಾಮನ್ ನಿರೂಪಿಸಿದರು. ಕೇಂದ್ರದ ಉಪ ಮಹಾನಿರ್ದೇಶಕ ಕೆ. ಅರುಣ್ ಪ್ರಭಾಕರ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಸದಾಶಿವ ಪಾಟೀಲ ಗಾಯನ ಪ್ರಸ್ತುತಪಡಿಸಿದರು. ಗಾಯಕ ಸದಾಶಿವ ಐಹೊಳಿ ಹಾಗೂ ಪಿಟೀಲು ವಾದಕ ಶಂಕರ ಕಬಾಡಿ ಅವರ ಜುಗಲ್‌ಬಂದಿ ನಡೆಯಿತು. ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರ ತಬಲಾ ಸಾಥ್ ನೀಡಿದರು.

ಬಸವರಾಜ ನೀಲಪ್ಪ ಹಡಗಲಿ ಹಾಗೂ ತಂಡದವರಿಂದ ಗೀಗೀ ಪದ, ಬಿ.ಆರ್. ಪೊಲೀಸ್‌ಪಾಟೀಲ ಅವರ ಲಾವಣಿ ಹಾಗೂ ಕೊನೆಗೆ ಡಾ. ಗೋವಿಂದ ಮಣ್ಣೂರ ರಚಿಸಿದ ನಗೆ ನಾಟಕ ‘ಮೊಬೈಲ್ ಮಾವ’ ಪ್ರದರ್ಶನಗೊಂಡಿತು. ಸಮಾರಂಭದಲ್ಲಿ ರಾಮಚಂದ್ರ ಧೋಂಗಡೆ, ಪಂ. ಬಿ.ಎಸ್. ಮಠ ಹಾಗೂ ವಿದುಷಿ ಅಕ್ಕಮಹಾದೇವಿ ಮಠ, ಜನಾಬ್ ಅಲೀಸಾಬ್ ಒಲ್ಲೆಪ್ಪನವರ, ಪಂ. ಶ್ರೀಕಾಂತ ಕುಲಕರ್ಣಿ, ಪಂ. ರಘುನಾಥ ನಾಕೋಡ ಹಾಗೂ ವಿದುಷಿ ರೇಣುಕಾ ನಾಕೋಡ, ಪ್ರೊ. ವೀಣಾ ಶಾಂತೇಶ್ವರ ಹಾಗೂ ಪ್ರೊ. ಐ.ಜಿ. ಸನದಿ ಮತ್ತಿತರರು ಇದ್ದರು.