ಹಗರಿಬೊಮ್ಮನಹಳ್ಳಿ: ಅಖಂಡ ವೀರಶೈವ ಲಿಂಗಾಯತ ಸಮಾಜವು ಜಾತಿ, ಜಾತಿಗಳಾಗಿ ಛಿದ್ರಗೊಂಡ ಕಾರಣಕ್ಕೆ ರಾಜ್ಯದ ಬಹುದೊಡ್ಡ ವೀರಶೈವ ಲಿಂಗಾಯತ ಸಮಾಜಕ್ಕೆ ಸಿಗಬಹುದಾಗಿದ್ದ ರಾಜಕೀಯ ಅವಕಾಶಗಳು ತಪ್ಪಿಹೋಗಿವೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಭಗವತ್ಪಾದರು ಖೇದ ವ್ಯಕ್ತಪಡಿಸಿದರು.
ಪಟ್ಟಣದ ಕನ್ಯಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಜಂಗಮ ಸಮಾಜ ಶನಿವಾರ ಆಯೋಜಿಸಿದ್ದ ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ವೀರಶೈವ ಲಿಂಗಾಯತ ಸಮಾಜ ಇನ್ನಷ್ಟು ತಾಪತ್ರಯ ಅನುಭವಿಸುವುದು ಬೇಡ. ಮಾನಸಿಕ ಹಿಂಸೆಗೂ ಈಡಾಗುವುದು ಬೇಡ. ಅಖಂಡ ಸಮಾಜ ಕಟ್ಟಲು ಸಮುದಾಯದ ಹಿರಿಯರು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ೨೦೨೮ರಲ್ಲಿ ಸಮುದಾಯಕ್ಕೆ ಅಗತ್ಯ ರಾಜಕೀಯ ಪ್ರಾತಿನಿಧ್ಯ ದೊರೆಯುವ ಜೊತೆಗೆ ಸಮುದಾಯದಲ್ಲಿ ಹೊಸ ಬೆಳಕು ಮೂಡುವ ಸಾಧ್ಯತೆಗಳಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಆಗಸ್ಟ್ ೩, ೪, ೫ ಹಾಗೂ ೬, ೭, ೮ ರಂದು ಕ್ರಮವಾಗಿ ಹರಿಹರ ಮತ್ತು ದಾವಣಗೆರೆಯಲ್ಲಿ ರಂಭಾಪುರಿ ಪೀಠ ನಡೆಸಿಕೊಡುವ ಆಷಾಢ ಮಾಸದ ಇಷ್ಟಲಿಂಗ ಪೂಜೆ ಸಂಘಟಿತ ಅಖಂಡ ವೀರಶೈವ ಲಿಂಗಾಯತ ಸಮಾಜದ ನಿರ್ಮಾಣಕ್ಕೆ ದಿಕ್ಸೂಚಿಯಾಗಲಿದೆ ಎಂದು ಘೋಷಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ನೇಮಿರಾಜ್ ನಾಯ್ಕ ಅವರನ್ನು ಸನ್ಮಾನಿಸಿದ ಜಗದ್ಗುರುಗಳು, ವಿಶೇಷ ಅನುದಾನ ಒದಗಿಸಿ ಕ್ಷೇತ್ರದ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಜನರ ಕಲ್ಯಾಣಕ್ಕೆ ಶಾಸಕ ನೇಮಿರಾಜ್ ನಾಯ್ಕ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಹರಿಹರದ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಮಾತನಾಡಿ, ವೀರಶೈವ ಲಿಂಗಾಯತ ಸಮಾಜ ಒಂದುಗೂಡುವ ಜೊತೆಗೆ ಪಂಚಾಚಾರ್ಯ ಜಗದ್ಗುರುಗಳೇ ಆಧ್ಯಾತ್ಮಿಕ ಮಾರ್ಗದರ್ಶಕರಾಗಿರಬೇಕು. ಮೂಲ ಗುರುಪೀಠ ರಂಭಾಪುರಿ ಜಗದ್ಗುರುಗಳ ಅಂತಃಕರಣದ ಆಶೀರ್ವಾದ ಸಮುದಾಯದ ಮೇಲಿರಬೇಕು ಎಂದು ವಿನಂತಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜಿ.ಎಂ. ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಮುನ್ನ ಪಟ್ಟಣದ ಹಾಲಶಂಕರ ಮಠದ ಬಳಿ ₹೫೦ ಲಕ್ಷ ಅನುದಾನದ ಜಗದ್ಗುರು ರೇಣುಕಾಚಾರ್ಯ ಜಗದ್ಗುರುಗಳ ವೃತ್ತಕ್ಕೆ ಶಾಸಕ ನೇಮಿರಾಜ್ ನಾಯ್ಕ ಶಿಲಾನ್ಯಾಸ ನೆರವೇರಿಸಿದರು.
ಹನಸಿ ಉತ್ತಂಗಿಯ ಸೋಮಶಂಕರ ಶ್ರೀ, ಮರಿಯಮ್ಮನಹಳ್ಳಿ ಗುರುಪಾದದೇವರ ಮಠದ ಮಲ್ಲಿಕಾರ್ಜುನ ಶ್ರೀ, ಕೊಟ್ಟೂರಿನ ಚಾನುಕೋಟಿ ಮಠದ ಡಾ.ಸಿದ್ಧಲಿಂಗ ಶ್ರೀ, ನಂದೀಪುರ ಡಾ.ಮಹೇಶ್ವರ ಶ್ರೀ, ಹಾಲಸಿದ್ಧೇಶ್ವರ ಶ್ರೀ, ಗದ್ದಿಕೇರಿ ಹಿರೇಮಠದ ಚರಂತೇಶ್ವರ ಶ್ರೀ, ಕಡಲಬಾಳು ಶಾಖಾ ಗವಿಮಠದ ಮರಿ ಶಾಂತವೀರ ಶ್ರೀ ಸಾನಿಧ್ಯ ವಹಿಸಿದ್ದರು.ಚೇಂಬರ್ ಆಫ್ ಕಾಮರ್ಸನ ಅಧ್ಯಕ್ಷ ಬಾದಾಮಿ ಮೃತ್ಯುಂಜಯ, ಸಂಘದ ಗೌರವಾಧ್ಯಕ್ಷ ಡಾ.ಬಿ.ಎಚ್.ಎಂ. ವಿಶ್ವನಾಥ್, ಉಪಾಧ್ಯಕ್ಷೆ ರೇಣುಕಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಇಂದುಮತಿ ತಿಪ್ಪೇಸ್ವಾಮಿ, ಡಾ.ಎ.ಎಂ.ಎ. ಕರಿಬಸಯ್ಯ, ಎಸ್.ಎಂ.ಗಂಗಾಧರಯ್ಯ, ಪ್ರಧಾನ ಕಾರ್ಯದರ್ಶಿ ಡಾ.ಕೆ.ಎಂ. ಸಿದ್ದೇಶ್ವರಸ್ವಾಮಿ, ಸಲಹಾ ಸಮಿತಿ ಸದಸ್ಯ ಯು.ಎಂ. ಶಿವಶಂಕರಯ್ಯ ಉಪಸ್ಥಿತರಿದ್ದರು.
ಶಾರದಾ ಮಂಜುನಾಥ್ ಪ್ರಾರ್ಥಿಸಿದರು. ನಿವೃತ್ತ ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಎಂ. ಸದ್ಯೋಜಾತಮೂರ್ತಿ, ನವಲಿ ಹಿರೇಮಠದ ಶಿವಲಿಂಗ ರುದ್ರಮುನಿ ಶ್ರೀ ನಿರ್ವಹಿಸಿದರು.