ಕ್ರಿಯಾಶೀಲ ಗೆಳೆಯರ ಸಂಘ ನಡೆಸುತ್ತಿರುವ ಭಟ್ಕಳ ಉತ್ಸವ ಎಲ್ಲರ ಕಾರ್ಯಕ್ರಮವಾಗಿದ್ದು, ಭಟ್ಕಳದಂತಹ ನಗರಕ್ಕೆ ಇದರ ಅವಶ್ಯಕತೆ ಇದೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ಭಟ್ಕಳ: ಕ್ರಿಯಾಶೀಲ ಗೆಳೆಯರ ಸಂಘ ನಡೆಸುತ್ತಿರುವ ಭಟ್ಕಳ ಉತ್ಸವ ಎಲ್ಲರ ಕಾರ್ಯಕ್ರಮವಾಗಿದ್ದು, ಭಟ್ಕಳದಂತಹ ನಗರಕ್ಕೆ ಇದರ ಅವಶ್ಯಕತೆ ಇದೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ಭಟ್ಕಳ ಕ್ರೀಯಾಶೀಲ ಗೆಳೆಯರ ಸಂಘದ ನೇತೃತ್ವದಲ್ಲಿ ವೆಂಕಟಾಪುರದ ಜಾಗಟೆ ಬೈಲಿನಲ್ಲಿ ಆಯೋಜಿಸಲಾದ ಭಟ್ಕಳ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು."ಉತ್ಸವ ಎಂದರೆ ಲಾಭ-ನಷ್ಟದ ಲೆಕ್ಕಾಚಾರವಲ್ಲ, ಜನತೆಗೆ ಮನರಂಜನೆ ನೀಡುವುದರ ಜೊತೆಗೆ ವ್ಯಾಪಾರಿಗಳಿಗೆ ಸಹ ಲಾಭವಾಗುವ ಉದ್ದೇಶ ಇದರ ಹಿಂದಿದೆ. ಬೇರೆ ಬೇರೆ ಕಡೆಯಿಂದ ಹಾಗೂ ಅನೇಕ ಹಳ್ಳಿಗಳಿಂದ ಕರಕುಶಲ ವಸ್ತುಗಳನ್ನು ತಂದು ಇಲ್ಲಿ ಮಾರಾಟ ಮಾಡಲು ಒಂದು ಅವಕಾಶ ದೊರೆತಂತಾಗಿದೆ. ಇದರಿಂದ ಹಳ್ಳಿಗಳಲ್ಲಿನ ಬಡವರಿಗೂ ವೇದಿಕೆ ದೊರೆಯುವುದು ಎಂದೂ ಅವರು ಹೇಳದರು.
ರೈತರು, ಮೀನುಗಾರರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಒಂದೇ ವೇದಿಕೆಯಲ್ಲಿ ಮನೋರಂಜನೆ ಸಿಗುವಂತ ಕಾರ್ಯಕ್ರಮಗಳು ಅಗತ್ಯ. ಕಲೆ-ಸಂಸ್ಕೃತಿಯನ್ನು ಬೆಳೆಸಿ ಮುಂದಿನ ತಲೆಮಾರಿಗೆ ಉಳಿಸುವ ಕೆಲಸವಾಗಬೇಕು. ಎಲ್ಲರೂ ಸಂತೋಷವಾಗಿರಬೇಕು, ಎಲ್ಲರಿಗೂ ವೇದಿಕೆ ಸಿಗಬೇಕು. ನಾಲ್ಕು ದಿನಗಳ ಈ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು. ಪ್ರತಿವರ್ಷ ಇಂತಹ ಉತ್ಸವ ಆಚರಿಸುವಲ್ಲಿ ತಮ್ಮ ಸಹಕಾರ ಸದಾ ಇದೆ ಎಂದೂ ಅವರು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ರಮೇಶ ಖಾರ್ವಿ ವಹಿಸಿದ್ದರು.
ಮಾಜಿ ಸಚಿವ ಶಿವಾನಂದ ನಾಯ್ಕ ಮಾತನಾಡಿ, ಭಟ್ಕಳದ ಮುಂದಿನ ಭವಿಷ್ಯದಲ್ಲಿ ಸೌಹಾರ್ದ ಹಾಗೂ ಜನರ ಏಕತೆಯ ಬುನಾದಿಯಾಗಿ ಈ ಉತ್ಸವ ರೂಪುಗೊಳ್ಳಲಿದೆ ಎಂದರು.ಸಂಘಟನೆ ಅತ್ಯಂತ ಅಚ್ಚುಕಟ್ಟಾಗಿ ನಡೆದಿದೆ. ಸುಮಾರು ೧೫ ವರ್ಷಗಳ ಹಿಂದೆ ನಡೆದ ಭಟ್ಕಳ ಉತ್ಸವಕ್ಕಿಂತಲೂ ಈ ಬಾರಿ ವಿಶಾಲವಾದ ಸ್ಥಳದಲ್ಲಿ ಅತ್ಯಂತ ಶಿಸ್ತು ಬದ್ಧವಾಗಿ ಆಯೋಜನೆ ಮಾಡಲಾಗಿದೆ. ಕ್ರೀಯಾಶೀಲ ಗೆಳೆಯರ ಸಂಘ ಉತ್ಸವಗಳಿಗೆ ಮಾತ್ರ ಸೀಮಿತವಾಗದೆ ಸಮಾಜಮುಖಿ ಕಾರ್ಯಗಳಲ್ಲಿಯೂ ಸಕ್ರಿಯರಾಗಲಿ ಎಂದು ಅವರು ಆಶಿಸಿದರು.
ಈ ಸಂದರ್ಭದಲ್ಲಿ ಕರಾಟೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಹಾಗೂ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆ ಮಾಡಿದವನ್ನು ವೇದಿಕೆಯಲ್ಲಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಭಟ್ಕಳ ತಹಸೀಲ್ದಾರ್ ನಾಗೇಂದ್ರ ಕೊಳಶೆಟ್ಟಿ, ಗುರುಮಠದ ಅಧ್ಯಕ್ಷ ಅರುಣ ನಾಯ್ಕ, ಅಳ್ವೆಕೋಡಿ ಮಾರಿಜಾತ್ರಾ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ, ಗೊಂಡ ಸಮಾಜದ ಪ್ರಮುಖ ಸೋಮಯ್ಯ ಗೊಂಡ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಭಟ್, ಭಟ್ಕಳ ಉತ್ಸವದ ಗೌರವ ಅಧ್ಯಕ್ಷ ವೆಂಕಟೇಶ ನಾಯ್ಕ ಶಿರಾಲಿ, ಉತ್ಸವದ ಸಂಚಾಲಕ ಶ್ರೀಕಾಂತ ನಾಯ್ಕ ಆಸರಕೇರಿ, ದೇವಾಡಿಗ ಸಮಾಜದ ಅಧ್ಯಕ್ಷ ಲಕ್ಷ್ಮಣ ಕೋಟದಮಕ್ಕಿ, ಬಿಜೆಪಿ ಪ್ರಮುಖ ಸುಬ್ರಾಯ ದೇವಾಡಿಗ ಸೇರಿದಂತೆ ಹಲವರು ಮಾತನಾಡಿದರು. ಸಂಘದ ಸ್ಥಾಪಕ ಅಧ್ಯಕ್ಷ ಭಾಸ್ಕರ ನಾಯ್ಕ ವಂದಿಸಿದರು.