ಕಲಾ ನೈಪುಣ್ಯತೆ ನಿಮ್ಮ ಬೆ‍ಳವಣಿಗೆಗೆ ಸಾಧನವಾಗಲಿ: ಚಿತ್ರನಟ ಗುರುರಾಜ ಹೊಸಕೋಟೆ

| Published : Nov 07 2024, 11:46 PM IST

ಕಲಾ ನೈಪುಣ್ಯತೆ ನಿಮ್ಮ ಬೆ‍ಳವಣಿಗೆಗೆ ಸಾಧನವಾಗಲಿ: ಚಿತ್ರನಟ ಗುರುರಾಜ ಹೊಸಕೋಟೆ
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಮೂರು ದಿನದ ತೋಟಗಾರಿಕೆ ಅಂತರ ಮಹಾವಿದ್ಯಾಲಯಗಳ 15ನೇ ಯುವಜನೋತ್ಸವಕ್ಕೆ ಚಿತ್ರನಟರಾದ ಗುರುರಾಜ ಹೊಸಕೋಟೆ ಚಾಲನೆ ನೀಡಿದರು,

ಕನ್ನಡಪ್ರಭ ವಾರ್ತೆ, ಬೀದರ್‌

ಹೊಸತನವನ್ನು ಪ್ರದರ್ಶಿಸುವ ಮೂಲಕ ನಿಮ್ಮಲ್ಲಿರುವ ಕಲೆಯ ನೈಪುಣ್ಯತೆಯನ್ನು ಜನರ ಮುಂದಿಟ್ಟಲ್ಲಿ ಉತ್ತಮ ಕಲಾವಿದ ಎಂದು ಕರೆಯಿಸಿಕೊಂಡು ಬೆಳೆಯ ಬಹುದು ಎಂದು ನಾಡಿನ ಖ್ಯಾತ ಜಾನಪದ ಕಲಾವಿದರು ಹಾಗೂ ಚಿತ್ರನಟರಾದ ಗುರುರಾಜ ಹೊಸಕೋಟೆ ಸಲಹೆಯಿತ್ತರು.

ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಮೂರು ದಿನದ ತೋಟಗಾರಿಕೆ ಅಂತರ ಮಹಾವಿದ್ಯಾಲಯಗಳ 15ನೇ ಯುವಜನೋತ್ಸವ ಉದ್ಘಾಟಿಸಿ ಮಾತನಾಡಿ, ಸೋಲು ಗೆಲುವು ಮುಖ್ಯವಲ್ಲ. ಅದು ಆ ಸಂದರ್ಭಕ್ಕಷ್ಟೇ ಸೀಮಿತ. ಪಾಲ್ಗೋಳ್ಳುವಿಕೆಯೇ ಮುಖ್ಯ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಅನೇಕ ಕಲಾವಿದರು ಸಹಾಯಕ ಕಲಾವಿದರೆಂದು ನಟನೆ ಮಾಡುತ್ತಾರೆ ಇದರಿಂದ ಅವರ ಕಲೆ ಬೆಳೆಯಲ್ಲ ವಿನಹ ಹಿರಿಯ ಕಲಾವಿದರನ್ನೇ ಬೆಳೆಸಿದಂತಾಗುತ್ತದೆ. ಇದರಲ್ಲಿ ನಿಮ್ಮ ಪ್ರತಿಭೆ ಏನು ಎಂಬುವದನ್ನು ತೋರಿಸಲು ಅಸಾಧ್ಯ. ಹೀಗಾಗಿ ಏನಾದರೂ ಹೊಸತನ ಮಾಡಿ ತೋರಿಸಿ ಎಂದರು.

ಇಂದಿನ ಸಮಾಜದಲ್ಲಿ ನಡೆಯುತ್ತಿರುವ ರಿಯಾಲಿಟಿ ಶೋ ಎಂಬ ಕಾರ್ಯಕ್ರಮದಲ್ಲಿ ಹೊಸದೇನಿಲ್ಲ. ಎಲ್ಲವೂ ಹಳೆಯದ್ದಾಗಿದ್ದು, ಅದನ್ನೇ ತಿರುವು ಮುರುವು ಮಾಡಿ ಆಯೋಜಿಸಲಾಗುತ್ತಿದ್ದರೂ ನಮ್ಮ ಯುವಕರಿಗೆ ಅದರದ್ದೇ ಹುಚ್ಚು ಹಿಡಿದಿದೆ, ಅದರಿಂದ ಹೊರ ಬನ್ನಿ. ನಿಜ ಕಲೆಯನ್ನು ಬೆಂಬಲಿಸಿ, ಬಲಪಡಿಸಿ ಮತ್ತು ಪ್ರದರ್ಶಿಸಿ ಎಂದು ಕರೆಯಿತ್ತರು.

ಜನ್ಮ ನೀಡಿದ ತಂದೆ ತಾಯಿಯನ್ನು ಮರೆಯುವ ಇಂದಿನ ಕಾಲದಲ್ಲಿ ಇಂತಹ ಯುವಜನೋತ್ಸವಗಳು ಯುವಕರಿಗೆ ಸರಿ ದಾರಿಯಲ್ಲಿ ನಡೆಯಲು ಪ್ರೇರಣೆ ನೀಡುತ್ತವೆ ಅಲ್ಲದೇ ಅರಿವು ಮೂಡಿಸುತ್ತವೆ ಆದ್ದರಿಂದ ಯುವಕರು ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬುವುದನ್ನು ಯೋಚಿಸಬೇಕೇ ವಿನಾ ಬೆಂಕಿ ಹಚ್ಚುವ ಕೆಲಸ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಸ್ಮರಣ ಸಂಚಿಕೆಯ ಬಿಡುಗಡೆ :

‘ಕಲಾ ಬಿದರಿ ಸಂಗಮ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಲಲಿತ ಕಲೆಗಳು ವಿದ್ಯಾರ್ಥಿಗಳ ಅವಿಭಾಜ್ಯ ಅಂಗವಾಗಿವೆ. ಸೃಜನಶೀಲ ಚಟುವಟಿಕೆ ಹೊಂದುವುದು ಹಾಗೂ ಅದರಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ಬೆಳವಣೆಗೆಗೆ ಸಹಾಯವಾಗುತ್ತದೆ ಎಂದರು.

ತೋಟಗಾರಿಕೆ ವಿಶ್ವ ವಿದ್ಯಾಲಯದ ಕುಲಪತಿ ವಿಷ್ಣುವರ್ಧನ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯಗಳನ್ನು ಕಲಿಸುವದು ಕರ್ತವ್ಯವಾಗಿದೆ. ಇಂದು ಆಯಾ ವಿಭಾಗದಲ್ಲಿ ಸಾಮಾಜಿಕ ಜ್ಞಾನ ಇಲ್ಲದೆ ಜೀವನ ನಡೆಸುವುದು ಅಸಾಧ್ಯವಿದೆ ಎಂದರು.

ಇಂದು ಎಲ್ಲರ ಜೀವನದಲ್ಲಿ ಮೊಬೈಲ್ ಎಲ್ಲವು ಆಗಿ ಬಿಟ್ಟಿದೆ. 24 ಗಂಟೆ ಮೊಬೈಲ್‌ ಬೇಕೇ ಬೇಕು. 10 ನಿಮಿಷವಾದರೂ ಕುಟುಂಬದ ಸದಸ್ಯರು ಪರಸ್ಪರ ಒಟ್ಟಿಗೆ ಕುಳಿತುಕೊಳ್ಳಲು ಸಮಯವಿಲ್ಲದಂತಿದೆ ಮೊಬೈಲ್‌ ನಮ್ಮ ಜೀವನವನ್ನು ಹೊಕ್ಕು ಬಿಟ್ಟಿದೆ. ಯುವ ಜನೋತ್ಸವ ಸಂಸ್ಕಾರ ಕಲಿಸುತ್ತದೆ. ದಾಸ ಸಾಹಿತ್ಯ, ವಚನ ಸಾಹಿತ್ಯ ಶ್ರೀಮಂತ ಸಾಹಿತ್ಯಗಳಾಗಿವೆ ಇವುಗಳನ್ನು ಅಳವಡಿಸುವದಲ್ಲದೇ ಅದರ ಬಗ್ಗೆ ತಿಳಿದುಕೊಳ್ಳಲು ಕೂಡ ಮುಂದೆ ಬರುತ್ತಿಲ್ಲ. ಯುವಜನೋತ್ಸವದಲ್ಲಿ ಪ್ರತಿಭೆ ಪ್ರದರ್ಶನ ಮುಖ್ಯ. ಪ್ರತಿಭೆ ಗುರುತಿಸಲು ವೇದಿಕೆಗಳು ಅತೀ ಮುಖ್ಯವಾಗಿವೆ ಸೋತಕೂ ನಿರಾಶರಾಗದಿರಿ ಎಂದು ಕಿವಿ ಮಾತು ಹೇಳಿದರು.

ವಿಶ್ವ ವಿದ್ಯಾಲಯದ ಅಡಿಯಲ್ಲಿ ಬರುವ 9 ಕಾಲೇಜುಗಳ ಡೀನ್‌ರಾದ ಡಾ.ರಾಮಚಂದ್ರ ನಾಯ್ಕ, ಡಾ.ಎಸ್‌ವಿ ಪಾಟೀಲ್‌, ಡಾ.ತಿಮ್ಮಯ್ಯ ಎನ್‌., ಡಾ.ಬಾಲಾಜಿ ಕುಲಕರ್ಣಿ, ಡಾ.ವೆಂಕಟೇಶಲು, ಡಾ.ಎಂ.ಜಿ. ಕೆರುಟಗಿ, ಡಾ.ಸಿಎನ್‌ ಹಂಚಿನಮನೆ, ಡಾ.ಜಿಎಸ್‌ಕೆ ಸ್ವಾಮಿ, ಜಂಟಿ ಕೃಷಿ ನಿರ್ದೇಶಕರಾದ ಜಿಯಾವುಲ್ಲ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಶ್ವನಾಥ ಜಿಳ್ಳೆ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಯುವಜನೋತ್ಸವದ ಸಂಘಟನಾ ಅಧ್ಯಕ್ಷರಾದ ಡಾ.ರಾಮಚಂದ್ರ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಸಂಘಟನಾ ಕಾರ್ಯದರ್ಶಿಗಳಾದ ಬೀದರ್‌ ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಡಾ.ಎಸ್‌.ವಿ.ಪಾಟೀಲ್‌ ಇವರು ಅತಿಥಿಗಳ ಪರಿಚಯಿಸಿದರು. ಡಾ.ಎಸ್‌.ಎಂ.ಪ್ರಸನ್ನ ಹಾಗೂ ಡಾ.ಶಶಿಕಲಾ ಎಸ್‌.ರುಳಿ ನಿರೂಪಿಸಿದರೆ ಡಾ.ವಿಜಯಮಹಾಂತೇಶ ವಂದಿಸಿದರು.