ಕ್ರೀಡಾಪಟುಗಳು ಸೌಲಭ್ಯ ಬಳಸಿ ಸಾಧನೆ ಮಾಡಲಿ

| Published : Sep 11 2024, 01:01 AM IST

ಸಾರಾಂಶ

ಮಕ್ಕಳಲ್ಲಿ ದೈಹಿಕ ಶಕ್ತಿ ಬಹಳ ಮುಖ್ಯ ಇಲ್ಲವಾದಲ್ಲಿ ಅನಾರೋಗ್ಯ ಕಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸರ್ಕಾರವು ಕ್ರೀಡೆಗಳನ್ನು ಉತ್ತೇಜಿಸಲು ಪ್ರತ್ಯೇಕ ಇಲಾಖೆ ಸ್ಥಾಪನೆ ಮಾಡಿದೆ. ಕಾಂಗ್ರೆಸ್ ಸರ್ಕಾರ ಕ್ರೀಡೆಗಳಿಗೋಸ್ಕರ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿದೆ ಅದನ್ನು ಕ್ರೀಡಾಪಟುಗಳು ಬಳಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಮಕ್ಕಳ ದೈಹಿಕ ಹಾಗೂ ಆರೋಗ್ಯ ವೃದ್ಧಿಗೆ ಕ್ರೀಡೆಗಳು ಹೆಚ್ಚು ಪರಿಣಾಮಕಾರಿಯಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯೂ ನಿತ್ಯ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರದ ಸೌಲಭ್ಯ ಬಳಸಿಕೊಳ್ಳಿ

ಮಕ್ಕಳಲ್ಲಿ ದೈಹಿಕ ಶಕ್ತಿ ಬಹಳ ಮುಖ್ಯ ಇಲ್ಲವಾದಲ್ಲಿ ಅನಾರೋಗ್ಯ ಕಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸರ್ಕಾರವು ಕ್ರೀಡೆಗಳನ್ನು ಉತ್ತೇಜಿಸಲು ಪ್ರತ್ಯೇಕ ಇಲಾಖೆ ಸ್ಥಾಪನೆ ಮಾಡಿದೆ. ಕಾಂಗ್ರೆಸ್ ಸರ್ಕಾರ ಕ್ರೀಡೆಗಳಿಗೋಸ್ಕರ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿದೆ ಅದನ್ನು ಬಳಿಸಿಕೊಂಡು ಕ್ರೀಡಾಪಟುಗಳು ಹೆಚ್ಚಿನ ಸಾಧನೆ ಮಾಡಬೇಕೆಂದು ಹೇಳಿದರು.

ರಾಜ್ಯದಲ್ಲಿ ಶಿಕ್ಷಕರ ಕೊರತೆ ಇದೆ. ಅದಕ್ಕಾಗಿ ಈ ಬಾರಿ ಸರ್ಕಾರ 12500 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಈಗಾಗಲೇ ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಪ್ರಕ್ರಿಯೆ ಪ್ರಗತಿಯಲ್ಲಿ ಇದೆ. ಇದರಿಂದ ಪಾಠ ಮಾಡುವ ಶಿಕ್ಷಕರ ಜೊತೆಗೆ ದೈಹಿಕ ಶಿಕ್ಷಕರನ್ನು ಸಹ ನೇಮಕ ಮಾಡಿಕೊಳ್ಳುತ್ತೇವೆ, ಇನ್ನು ಕೇವಲ ಆರು ತಿಂಗಳ ಒಳಗೆ 12500 ಶಿಕ್ಷಕರ ನೇಮಕ ಆಗುತ್ತದೆ ಎಂದು ಹೇಳಿದರು.

ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಬೇಕು

ತಾಲೂಕಿನ ಮಕ್ಕಳು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ತಾಲೂಕು ಮಟ್ಟದಿಂದ ಜಿಲ್ಲೆ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಹೋಗಬೇಕು ಎಂಬ ನನಗೆ ಆಸೆ ಇದೆ, ಇಲ್ಲಿ ಬಂದಿರುವಂತಹ ಎಲ್ಲಾ ಮಕ್ಕಳು ಸಹ ಉನ್ನತ ಮಟ್ಟಕ್ಕೆ ಹೋಗಬೇಕೆಂದು ಹಾರೈಸುತ್ತೇನೆ. ಕ್ರೀಡೆಯನ್ನು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಬೇಕು. ಯಾರೇ ಗೆಲ್ಲಲಿ ಯಾರೇ ಸೋಲಲಿ ಇದು ಕ್ರೀಡೆ ಎಂದು ಭಾವಿಸಬೇಕು. ಎಲ್ಲರೂ ಕ್ರೀಡೆಗಳಲ್ಲಿ ಭಾಗವಹಿಸಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.

ಅಥ್ಲೆಟ್‌ ಅನ್ನಪ್ಪಗೆ ಸನ್ಮಾನ

ಈ ವೇಳೆ ತಾಲೂಕಿನ ಕಳವಂಚಿ ಸರ್ಕಾರಿ ಶಾಲೆಯ ಅನ್ನಪ್ಪ ಅಥ್ಲೆಂಟಿಕ್ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದ ಹಿನ್ನೆಲೆ ಶಾಸಕರು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಗೋವಿಂದ, ಉಪಾಧ್ಯಕ್ಷ ಚಂದ್ರವೇಣೆ ಮಂಜುನಾಥ್, ತಹಶೀಲ್ದಾರ್ ವೆಂಕಟೇಶ್,ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ,ಸಮನ್ವಯ ಅಧಿಕಾರಿ ಶಶಿಕಲಾ, ಇನ್ಸ್ಪೆಕ್ಟರ್ ನಂಜಪ್ಪ, ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಪ್ಪಯ್ಯ ಗೌಡ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಆಂಜನೇಯ ಗೌಡ, ಕಸಾಪ ಅಧ್ಯಕ್ಷ ಸಂಜೀವಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಪ್ಪ, ಖಾಸಗಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣಪ್ಪ, ಎಸ್ಸಿ ಎಸ್ಟಿ ನೌಕರ ಸಂಘದ ಅಧ್ಯಕ್ಷ ನಾಗರಾಜ್, ಇತರರು ಇದ್ದರು.