ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಈಗಾಗಲೇ ದೇಶದ ಐಟಿ ರಾಜಧಾನಿ ಎಂದು ಕರೆಸಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಕೃಷಿ ತಂತ್ರಜ್ಞಾನದ ರಾಜಧಾನಿಯಾಗಿಯೂ ರೂಪುಗೊಳ್ಳಬೇಕಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಎಫ್‌ಕೆಸಿಸಿಐನಿಂದ ಶುಕ್ರವಾರ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಗ್ಲೋಬಲ್ ಅಗ್ರಿಟೆಕ್ ಸಮ್ಮಿಟ್-2026ಕ್ಕೆ ಚಾಲನೆ ನೀಡಿ ಸಿದ್ದರಾಮಯ್ಯ ಮಾತನಾಡಿದರು.
ಭಾರತ ಕೃಷಿ ಪ್ರಧಾನ ದೇಶ. ಆದರೆ, ಇತ್ತೀಚಿನ ದಿನಗಳಲ್ಲಿ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಲಾಭದಾಯವನ್ನಾಗಿಸಿದರೆ ಎಲ್ಲರನ್ನೂ ಸೆಳೆಯುತ್ತದೆ. ಹೀಗಾಗಿ ಕೃಷಿ ಸಂಶೋಧನೆಗಳು ರೈತರಿಗೆ ತಲುಪಿ, ಕೃಷಿ ಕ್ಷೇತ್ರ ಲಾಭದಾಯಕವನ್ನಾಗಿಸಿದರೆ ಯುವಕರು ಅದರತ್ತ ಬರುತ್ತಾರೆ. ಎಫ್‌ಕೆಸಿಸಿಐ ಸೇರಿ ಇನ್ನಿತರ ಸಂಸ್ಥೆಗಳು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಅದಕ್ಕೆ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದರು.ದೇಶಕ್ಕೇ ಮೊದಲ ಸ್ಥಾನದಲ್ಲಿದೆ:
ಬೆಂಗಳೂರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರಿದಿದ್ದು, ದೇಶಕ್ಕೇ ಮೊದಲ ಸ್ಥಾನದಲ್ಲಿದೆ. ಅದೇ ರೀತಿ ಕೃಷಿ ತಂತ್ರಜ್ಞಾನ ಕ್ಷೇತ್ರದಲ್ಲೂ ಬೆಂಗಳೂರು ರಾಜಧಾನಿಯಾಗಬೇಕು. ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕೃತಕ ಬುದ್ಧಿಮತ್ತೆ ಸೇರಿ ಎಲ್ಲ ಕ್ಷೇತ್ರಗಳ ತಂತ್ರಜ್ಞಾನ ಬಳಸಿಕೊಳ್ಳಬೇಕು. ಹೊಸ ಸಂಶೋಧನೆಗಳು ರೈತರಿಗೆ ತಲುಪುವ ಮೂಲಕ ಕೃಷಿ ಕ್ಷೇತ್ರ ಅಭಿವೃದ್ಧಿಯತ್ತ ಸಾಗಬೇಕು ಎಂದು ಹೇಳಿದರು.
ಒಣಭೂಮಿಯಲ್ಲಿ ಕರ್ನಾಟಕ 2ನೇ ಸ್ಥಾನ:
ದೇಶದಲ್ಲಿ ಒಣಭೂಮಿ ಹೊಂದಿದ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಒಣಭೂಮಿ ಪ್ರಮಾಣ ಕಡಿಮೆ ಮಾಡಲು, ಸಣ್ಣ ಹಿಡುವಳಿದಾರರಿಗೆ ಕೃಷಿಯಲ್ಲಿ ಲಾಭ ಪಡೆಯುವಂತಾಗಲು ಕೃಷಿ ಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಆದರೆ, ಬಿಜೆಪಿ ಸರ್ಕಾರ ಕೃಷಿ ಭಾಗ್ಯ ಯೋಜನೆಯನ್ನೇ ಸ್ಥಗಿತಗೊಳಿಸಿತ್ತು. ಈಗ ನಮ್ಮ ಸರ್ಕಾರ ಅದನ್ನು ಮರು ಜಾರಿ ಮಾಡಿದೆ. ಜತೆಗೆ 83 ಲಕ್ಷ ರೈತರಿಗೆ ₹70 ಸಾವಿರ ಕೋಟಿ ಕೃಷಿ ಸಾಲ ನೀಡಿ ಆರ್ಥಿಕ ನೆರವು ಒದಗಿಸಲಾಗಿದೆ. ಕಳೆದ ವರ್ಷ ₹8 ಸಾವಿರ ಕೋಟಿಗಳನ್ನು ಮೂಲಸೌಕರ್ಯ ಅಭಿವೃದ್ಧಿಗೆ ನೀಡಲಾಗಿದೆ. ಕೈಗಾರಿಕೆ, ಗ್ರಾಮೀಣಾಭಿವೃದ್ಧಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಕೃಷಿ ಕ್ಷೇತ್ರದಲ್ಲೂ ಹೂಡಿಕೆ ಹೆಚ್ಚಾಗಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ರಾಜ್ಯದ ಆರ್ಥಿಕತೆಯಲ್ಲಿ ಕೃಷಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ರಾಜ್ಯದ ಆದಾಯದಲ್ಲಿ ಶೇ.17ರಷ್ಟು ಕೃಷಿ ಕ್ಷೇತ್ರ ನೀಡುತ್ತಿದ್ದು, ಶೇ.58 ಜನರಿಗೆ ಉದ್ಯೋಗ ಒದಗಿಸುತ್ತಿದೆ. 2025-26ನೇ ಸಾಲಿನಲ್ಲಿ ದೇಶದ ಆಹಾರ ಉತ್ಪಾದನೆ 355 ದಶ ಲಕ್ಷ ಟನ್‌ಗೆ ತಲುಪುವ ನಿರೀಕ್ಷೆಯಿದ್ದು, ಕರ್ನಾಟಕದಲ್ಲಿ ಆಹಾರ ಉತ್ಪಾದನೆ 155-160 ದಶಲಕ್ಷ ಟನ್ ಮಟ್ಟದಲ್ಲಿ ಸಾಧನೆಯಾಗಿದೆ ಎಂದರು.
2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ ಮೂಲಕ ಮುಂದಿನ ಮೂರು ವರ್ಷಗಳಿಗೆ ₹100 ಕೋಟಿ ಅನುದಾನ ಘೋಷಿಸಲಾಗಿದೆ. ಇದರಿಂದ ರೈತರ ಆದಾಯ ಹೆಚ್ಚಳ ಉದ್ದೇಶ ಹೊಂದಲಾಗಿದೆ. ರಾಜ್ಯದ 49 ಕೃಷಿ ಉತ್ಪನ್ನಗಳಿಗೆ ಜಿಐ ಟ್ಯಾಗ್ ದೊರೆತಿದೆ. ಅದರಿಂದ ಜಾಗತಿಕ ಮಟ್ಟದಲ್ಲಿ ರಫ್ತು ಅವಕಾಶ ವೃದ್ಧಿಯಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರವೇಶ ಮತ್ತಷ್ಟು ಬಲಗೊಂಡಿದೆ. ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದು, 2020-25ರ ಅವಧಿಯಲ್ಲಿ 6500 ಘಟಕ ಸ್ಥಾಪಿಸಿ 90 ಸಾವಿರ ಜನರಿಗೆ ಉದ್ಯೋಗ ನೀಡಲಾಗಿದೆ ಎಂದು ಹೇಳಿದರು.ಇಸ್ರೇಲ್‌ನ ಡೆಪ್ಯುಟಿ ಕಾನ್ಸುಲ್ ಜನರಲ್ ಇನ್ಬಾಲ್ ಸ್ಟೋನ್, ಉದ್ಯಮಿ ವಿಜಯ್ ನಿರಾಣಿ, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿ. ಸುರೇಶ, ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ, ಹಿರಿಯ ಉಪಾಧ್ಯಕ್ಷ ಟಿ. ಸಾಯಿರಾಮ್ ಪ್ರಸಾದ್, ಉಪಾಧ್ಯಕ್ಷ ಬಿ.ಪಿ. ಶಶಿಧರ್, ಗ್ಲೋಬಲ್ ಅಗ್ರಿಟೆಕ್ ಸಮ್ಮಿಟ್ ಅಧ್ಯಕ್ಷೆ ರೂಪಾ ರಾಣಿ ಇದ್ದರು.