ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
12ನೇ ಶತಮಾನದಲ್ಲಿ ಸಮಾನತೆಗಾಗಿ ಹೋರಾಡಿದ ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯನ್ನು ಎಲ್ಲೆಡೆ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಈ ಜಯಂತಿ ಉತ್ಸವ ಕನ್ನಡ ನಾಡಿಗೆ ಸೀಮಿತವಾಗದೇ ರಾಷ್ಟ್ರಮಟ್ಟದಲ್ಲಿಯೂ ಆಚರಣೆಯಾಗಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಯುವಕ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ವಿಶ್ವಗುರು ಬಸವಣ್ಣನವರ 850ನೇ ಜಯಂತಿ ಉತ್ಸವದಲ್ಲಿ ಮಾತನಾಡಿದ ಅವರು, ಜಗತ್ತಿಗೆ ಪ್ರಪ್ರಥಮವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಕಲ್ಪನೆಯನ್ನು ತಮ್ಮ ಅನುಭವ ಮಂಟಪದ ಮೂಲಕ ನೀಡಿದವರು ಬಸವಣ್ಣನವರು. ಇಂದು ನಮ್ಮ ದೇಶದ ಸಂವಿಧಾನದ ಆಶಯಗಳು ಕೂಡ ಬಸವ ತತ್ವವನ್ನೇ ರೂಢಿಸಿಕೊಂಡಿದೆ. ಬಸವಣ್ಣನವರ ವಚನ ಸಾಹಿತ್ಯ ಎಲ್ಲ ಕಾಲದಲ್ಲಿಯೂ ಸಮಾಜ ಸುಧಾರಣೆಗೆ ಸಂಜೀವಿನಿಯಾಗಿದೆ. ಅವರ ವಚನ ಸಾಹಿತ್ಯ ಕೇವಲ ಭಾಷಣಗಳಿಗೆ ಸೀಮಿತವಾಗದೇ ಪ್ರತಿಯೊಬ್ಬರ ಬಾಳಿನಲ್ಲಿ ಬೆಳಕಾಗಿ, ಸಮಾಜದ ವಿಕಾಸಕ್ಕೆ ದಾರಿದೀಪವಾಗಿವೆ ಎಂದು ತಿಳಿಸಿದರು.
ಸುಕ್ಷೇತ್ರ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ, ಮೋಟಿಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಶೆಟ್ಟರ ಮಠದ ಮರುಳುಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಶಹಜಹಾನ ಡೊಂಗರಗಾಂವ, ತಹಸೀಲ್ದಾರ್ ವಾಣಿ.ಯು, ಮುಖಂಡರಾದ ಸದಾಶಿವ ಬುಟಾಳಿ, ಎಸ್.ಆರ್.ಘುಳಪ್ಪನವರ, ರಾಮನಗೌಡ ಪಾಟೀಲ, ರಮೇಶ ಕಾಗಲೆ, ಶಿವಾನಂದ ದಿವಾನಮಳ, ಅರುಣ ಬಾಸಿಂಗೆ, ಮಹದೇವ ಸೋಂದಕರ, ಗಿರೀಶ ಬೂಟಾಳಿ, ಮಹದೇವ ಬಡಕಂಬಿ, ರವಿ ಬಡಕಂಬಿ, ಸತೀಶ ಪಾಟೀಲ, ಈರಣ್ಣಗೌಡ ಪಾಟೀಲ ಸೇರಿದಂತೆ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
----------ಪಲ್ಲಕ್ಕಿ ಉತ್ಸವ ಭವ್ಯ ಮೆರವಣಿಗೆಮಹತಪಸ್ವಿ ಮುರುಗೇಂದ್ರ ಶಿವಯೋಗಿಗಳ ಸುಕ್ಷೇತ್ರ ಗಚ್ಚಿನಮಠದಿಂದ ಬೆಳ್ಳಿ ಪಲ್ಲಕ್ಕಿಯಲ್ಲಿ ಬಸವಣ್ಣನವರ ಭಾವಚಿತ್ರ ಮೆರವಣಿಗೆ ಹಾಗೂ ರೈತರು ತಮ್ಮ ಎತ್ತುಗಳನ್ನು ಸಿಂಗರಿಸಿಕೊಂಡು ಸಾಲಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಆಕರ್ಷಣಿಯವಾಗಿತ್ತು. ಬಸವಣ್ಣನವರ ಮೆರವಣಿಗೆ ವಿವಿಧ ವಾದ್ಯ ಮೇಳಗಳೊಂದಿಗೆ ಆರಂಭಗೊಂಡು ಬಸವೇಶ್ವರ ವೃತ್ತಕ್ಕೆ ಆಗಮಿಸಿ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಪುಷ್ಪ ನಮನ ಸಲ್ಲಿಸಿ ವೇದಿಕೆ ಕಾರ್ಯಕ್ರಮದ ನಂತರ ಮೆರವಣಿಗೆ ಆರಂಭಗೊಂಡು ಶಿವಯೋಗಿಗಳ ವೃತ, ರಾಣಿ ಚನ್ನಮ್ಮ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ಮುಖ್ಯಬೀದಿಯಲ್ಲಿ ಹಾಯ್ದು ಸುಕ್ಷೇತ್ರ ಗಚ್ಚಿನ ಮಠದಲ್ಲಿ ಸಮಾವೇಶಗೊಂಡಿತು.