ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಡಾ.ಮಾನಸ ಅಭಿಮತ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭಕ್ತಿಯ ಭಾವನೆಗಳಿಗಿಂತ ಜ್ಞಾನದ ಬಲಕ್ಕೆ ಮಹತ್ವ ನೀಡಿದ ವಚನಕಾರರ ಸಂದೇಶ ಅತ್ಯಂತ ಪ್ರಸ್ತುತವಾಗಿದೆ. ದೇವರ ಮನೆಯ ಪ್ರಾಮುಖ್ಯತೆ ಎಷ್ಟು ಮುಖ್ಯವೋ ಅಷ್ಟೇ ಮಹತ್ವ ಮನೆಯ ಗ್ರಂಥಾಲಯಕ್ಕಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ ಅಭಿಪ್ರಾಯಪಟ್ಟರು.

ನಗರದ ಡಾ.ನಟರಾಜ್ ಅವರ ನಿವಾಸದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಚಿತ್ರದುರ್ಗ ಜಿಲ್ಲಾ ಜಾಗೃತಿ ಸಮಿತಿಯಿಂದ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಪುಸ್ತಕ ಸಂಸ್ಕೃತಿ ನಮ್ಮ ಜ್ಞಾನ ಹಾಗೂ ಬದುಕಿನ ಪ್ರಭೆಯಾಗಿದೆ. ಈ ಸಂಸ್ಕೃತಿ ಸಾರ್ವಕಾಲಿಕವಾದದ್ದು ಇಂಥ ಸಂಸ್ಕೃತಿ ಸಂಕೇತವಾದ ಪುಸ್ತಕಗಳ ಸಂಗ್ರಹಿಸುವ ಮನಸ್ಥಿತಿ ಬದಲಾಗಿದೆ. ಮನುಷ್ಯನ ಮೌಡ್ಯಾಧಾರಿತ ಉದ್ದಿಮೆಗಳು ಬೆಳೆಯುವ ಮೂಲಕ ಲಾಭದಾಯಕ ಮೂಲಗಳಾಗಿವೆ. ಲೇಖಕರು ಮತ್ತು ಪ್ರಕಾಶಕರ ಬದುಕು ದುಸ್ತರವಾಗುತ್ತಿದೆ. ಇಂಥ ಸಂದಿಗ್ಧ ಸಂದರ್ಭಗಳಲ್ಲಿ ಓದುವ ಸಂಸ್ಕೃತಿ ಹೆಚ್ಚಾಗಲಿ. ಈ ದಿಸೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಕಟಗೊಂಡಿರುವ ಸಾಹಿತ್ಯ-ಸಂಶೋಧನ ಕೃತಿಗಳು, ಜಾನಪದ, ನಾಟಕ, ಹಾಗೂ ಕಥೆ-ಕವನ ಸಂಕಲನಗಳು ಹೆಚ್ಚು ಓದುಗರನ್ನು ತಲುಪುವಂತಾಗಲಿ ಎಂದು ಹೇಳಿದರು.

ಇತಿಹಾಸ ಹಾಗೂ ಶಾಸನ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ, ಭಾರತದಲ್ಲಿ ಗ್ರಂಥಾಲಯಗಳ ಪರಂಪರೆ ಇದೆ. ದೇಶ ಸುತ್ತು ಕೋಶ ಓದು ಎನ್ನುವು ನಾಣ್ಣುಡಿಯಂತೆ ಗ್ರಂಥಗಳು ಜ್ಞಾನ ಬಂಡಾರಗಳಾಗಿವೆ. ಇತಿಹಾಸದಲ್ಲಿ ನಳಂದ, ತಕ್ಷಶಿಲಾ, ಮುಂತಾದ ಗ್ರಂಥ ಬಂಡಾರಗಳು ಇತರೆ ದೇಶಗಳಿಗೆ ಮಾದರಿಯಾಗಿದ್ದವು. ವಿದೇಶಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಜ್ಞಾನ ಸಂಪಾದನೆ ಮಾಡುತ್ತಿದ್ದರು. ಅನೇಕ ಮಠ-ಮಾನ್ಯಗಳು ಮತ್ತು ಇತರೆ ರಾಜಮನೆತನಗಳು ಗ್ರಂಥಾಲಯದ ಮಹತ್ವ ಮನಗಂಡು ಅತ್ಯಂತ ವಿದ್ವತ್‌ಪೂರ್ಣ ಗ್ರಂಥಗಳನ್ನು ಸಂಗ್ರಹಿಸಿ, ಓಲೆಗರಿಗಳು, ಹಸ್ತಪ್ರತಿಗಳು ಹಾಗೂ ಇತರೆ ಲೋಹದ ಪಟಗಳಲ್ಲಿ ಸಂಗ್ರಹಿಸುತ್ತಿದ್ದರು.

ಈ ನಿಟ್ಟಿನಲ್ಲಿ ಗ್ರಂಥಾಲಯಗಳ ಸ್ಥಾಪನೆ ಅತ್ಯಂತ ಮಹತ್ವಪೂರ್ಣವಾಗಿದ್ದು, ಬೌದ್ಧಿಕ ವಿಕಾಸ, ಸಮಯದ ಸದುಪಯೋಗ ಹಾಗೂ ನಮ್ಮ ಇತಿಹಾಸ ಪರಂಪರೆ, ಸಾಹಿತ್ಯ ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ಹಸ್ತಾಂತರಿಸಲು ತುಂಬಾ ಸಹಕಾರಿಯಾಗಿವೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ.ನಟರಾಜ್ ಅವರು ಮನೆಯಲ್ಲಿರುವ ಗ್ರಂಥಾಲಯಗಳು ಜ್ಞಾನ ಸಂಪಾದನೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಕೆಗೆ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ತುಂಬಾ ಸಹಕಾರಿಯಾಗಿವೆ. ಗ್ರಂಥಾಲಯಗಳ ಸಂಸ್ಕೃತಿ ನಿರಂತರ ಪ್ರಕ್ರಿಯೆಯಾಗಿದ್ದು, ಮನೆಯಲ್ಲಿರುವ ಭೌತಿಕ ಸರಕುಗಳನ್ನು ಪರಿಚಯಸದೇ ಬೌದ್ಧಿಕ ಸಂಪತ್ತಿನ ಪ್ರತೀಕ ಪುಸ್ತಕಗಳನ್ನು ಪರಿಚಯಿಸುವುದು ಬಹು ಸೂಕ್ತವಾಗಿದೆ. ಇಂಥ ಸಂಸ್ಕೃತಿ ನಮಗೆ ವಿದೇಶಗಳಲ್ಲಿ ಉಪನ್ಯಾಸ, ವಿಚಾರ ಮಂಡಿಸಲು ಅತ್ಯಂತ ಪರಿಣಾಮಕಾರಿಯಾಗಿ, ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುವ ಘನತೆ ತಂದುಕೊಟ್ಟಿದೆ ಎಂದು ಹೇಳಿದರು.

ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಸಂಚಾಲಕ ನಿರಂಜನ ದೇವರಮನೆ, ಡಾ.ಮಂಗಳಗೌರಿ, ಸಿ.ಬಿ.ಶೈಲಾ ಜಯಕುಮಾರ್, ಡಾ.ಯಶೋಧ, ಡಾ.ಚಾಂದಿನಿ ಖಾಲೀದ್, ಶೋಭಾ ಮಲ್ಲಿಕಾರ್ಜುನ, ಕರ‍್ಲಕುಂಟೆ ತಿಪ್ಪೇಸ್ವಾಮಿ, ಡಾ.ಯಶೋಧರ, ಸಿ.ಕೆ.ಗೀತಾ, ನಿರ್ಮಲಾ ಮರಡಿಹಳ್ಳಿ, ಪರಮೇಶ್ವರಪ್ಪ ಕುದುರಿ, ವಕೀಲರಾದ ರವಿನಾರಾಯಣ, ಜೆ.ಸಿ.ದಯಾನಂದ, ಕನ್ನಡ ಪ್ರಾಧ್ಯಾಪಕ ಬಿ.ಟಿ.ಚಂದ್ರಶೇಖರ್, ಶಾಂತ ಅಹೋಬಲಪತಿ, ಕುಮಾರಿ ಪ್ರಮಥ ಮಲ್ಲಿಕಾರ್ಜುನ ಮುಂತಾದವರು ಭಾಗವಹಿಸಿದ್ದರು.