ಸಾರಾಂಶ
ಶಿರಸಿ: ಬ್ರಾಹ್ಮೀ ಮುಹೂರ್ತ ಮತ್ತು ಕರ್ಮಯೋಗ ಇವೆರಡನ್ನು ಬದುಕಿನ ಸೂತ್ರವಾಗಿಸಿಕೊಳ್ಳಬೇಕು ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ತಾಲೂಕಿನ ಸ್ವರ್ಣವಲ್ಲೀ ಮಠದಲ್ಲಿ ಸಂಕಲ್ಪಿತ ತಮ್ಮ ೩೪ನೇ ಹಾಗೂ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯ ಪ್ರಥಮ ಚಾತುರ್ಮಾಸ್ಯ ಅವಧಿಯಲ್ಲಿ ಶಿರಸಿ ಸೀಮೆಯ ನಗರಭಾಗಿ ಹಾಗೂ ಸ್ವರ್ಣವಲ್ಲೀ ಸೇವಾ ಪ್ರತಿಷ್ಠಾನ ಬೆಂಗಳೂರು, ಮೈಸೂರು, ಕಾರವಾರ ಸಮಸ್ತ ಭಕ್ತರು ಉಭಯ ಶ್ರೀಗಳ ದರ್ಶನ ಪಡೆದು ಸೇವೆಯನ್ನು ಸಲ್ಲಿಸಿದ ಬಳಿಕ ಶ್ರೀಗಳು ಆಶೀರ್ವಚನ ನೀಡಿದರು.ಬ್ರಾಹ್ಮೀ ವೇಳೆಯನ್ನು ಸರಿಯಾಗಿ ಬಳಸಿಕೊಳ್ಳುವುದು ಹಾಗೂ ಕರ್ಮಯೋಗದ ಭಾವನೆ ಇವೆರಡೂ ನಮ್ಮ ಬದುಕಿಗೆ ಬೇಕಾದ ಸೂತ್ರಗಳು. ಬ್ರಾಹ್ಮೀ ವೇಳೆಯನ್ನು ಸರಿಯಾಗಿ ಆಚರಣೆ ಮಾಡಿದರೆ ಮನಸ್ಸು ಹೆಚ್ಚು ಏಕಾಗ್ರತೆಗೊಳ್ಳುತ್ತದೆ. ಹೆಚ್ಚು ಆನಂದದ ಅನುಭವವಾಗುತ್ತದೆ. ಒತ್ತಡಗಳು ಕಡಿಮೆಯಾಗುತ್ತದೆ. ಆದ್ದರಿಂದ ಎಲ್ಲರೂ ಕೂಡ ಅವಶ್ಯವಾಗಿ ಬ್ರಾಹ್ಮೀ ಮುಹೂರ್ತದ ಸರಿಯಾಗಿ ಉಪಯೋಗ ಪಡೆದುಕೊಳ್ಳಬೇಕು. ದೇವರ ನಾಮಜಪ ಮತ್ತು ಪೂಜೆ, ಸಹಸ್ರನಾಮ ಪಾರಾಯಣ ಮತ್ತು ಸ್ತೋತ್ರ ಪಠಣ, ಯೋಗಾಸನ ಮತ್ತು ಪ್ರಾಣಾಯಾಮ ಇವು ಆರನ್ನು ಒಂದು ದಿನವೂ ತಪ್ಪದೇ ಮಾಡಿದರೆ ಅನೇಕ ಪ್ರಯೋಜನಗಳನ್ನು ಕಾಣಬಹುದು. ಜೀವನದಲ್ಲಿ ಆರೋಗ್ಯವಂತರಾಗಲೂ ಸಾಧ್ಯ ಎಂದರು.ಹಾಗೆ ಕರ್ಮಯೋಗ. ರಾಮಾಯಣದ ರಾಮನ ತಮ್ಮ ಭರತನು ಕರ್ಮಯೋಗಿ. ತಂದೆಯ ಮಾತನ್ನು ನಡೆಸುವುದಕ್ಕೋಸ್ಕರ ರಾಮ ಕಾಡಿಗೆ ಹೋಗುತ್ತಾನೆ. ಭರತನು ರಾಮನನ್ನು ಭೇಟಿಯಾಗಿ ಮುಂದೆ ರಾಜ್ಯಭಾರವನ್ನು ಮಾಡಲು ಬೇಡಿಕೊಳ್ಳುತ್ತಾನೆ. ಆದರೆ ರಾಮನು ಒಪ್ಪಲಿಲ್ಲ. ಆದರೆ ಭರತನು ಪಾದುಕೆಯನ್ನು ಸಿಂಹಾಸನದ ಮೇಲೆ ಇಟ್ಟು ರಾಜ್ಯವನ್ನು ನೋಡಿಕೊಳ್ಳುತ್ತಾನೆ. ತಾನು ರಾಜ್ಯವನ್ನು ನಡೆಸುತ್ತಿದ್ದರೂ ರಾಮನಿಗೆ ಸಮರ್ಪಿಸುತ್ತಿದ್ದ. ರಾಮಚಂದ್ರ ಮಹಾಪ್ರಭುವು ಮುಂದೆ ಯವಾಗಾದರೂ ಬಂದೇ ಬರುತ್ತಾನೆ ಎಂಬ ಭಾವನೆಯಿಂದ ಅತ್ಯಂತ ಜವಾಬ್ದಾರಿಯಿಂದ ನೋಡಿಕೊಳ್ಳುತ್ತಿದ್ದ ಎಂದರು.
ಬೆಳಗ್ಗೆಯಿಂದ ಮಾತೆಯರು ಶಂಕರ ಸ್ತೋತ್ರ ಪಠಣ, ಭಗವದ್ಗೀತಾ ಪಠಣ ಹಾಗೂ ಲಲಿತಾ ಸಹಸ್ರನಾಮದಿಂದ ಅರ್ಚನೆಯನ್ನು ಮಾಡಿದರು. ಮಹನೀಯರು ಗಾಯತ್ರೀ ಅನುಷ್ಠಾನವನ್ನು ಕೈಗೊಂಡರು. ಈ ಸಂದರ್ಭದಲ್ಲಿ ದಾಮೋದರ ಭಟ್ ಶಿರಸಿ, ಮಂಜುನಾಥ ಹೆಗಡೆ ಸಹಸ್ರಳ್ಳಿ, ಸುಬ್ರಾಯ ಉಪಾಧ್ಯ, ಶಿವರಾಮ ಹೆಗಡೆ ಕಾಗೇರಿ, ಸತೀಶ್ ಭಟ್, ಸುಭಾಸ ಹೆಗಡೆ ಮತ್ತಿತರರು ಇದ್ದರು.