ಬಿಎಸ್‌ವೈ, ಬಿವೈಆರ್ ಕೂಡ ಪ್ರಮಾಣ ಮಾಡಲಿ: ಕೆ.ಎಸ್.ಈಶ್ವರಪ್ಪ ಪ್ರತಿ ಸವಾಲು

| Published : Apr 02 2024, 01:06 AM IST

ಬಿಎಸ್‌ವೈ, ಬಿವೈಆರ್ ಕೂಡ ಪ್ರಮಾಣ ಮಾಡಲಿ: ಕೆ.ಎಸ್.ಈಶ್ವರಪ್ಪ ಪ್ರತಿ ಸವಾಲು
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸಭಾ ಚುನಾವಣೆಯಲ್ಲಿ ಕೆ.ಇ.ಕಾಂತೇಶ್ ಗೆ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡುವ ಜೊತೆಗೆ ಪ್ರಚಾರಕ್ಕೂ ಬರುವುದಾಗಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದರು. ಆದರೆ, ನಂತರದ ದಿನಗಳಲ್ಲಿ ನುಡಿದಂತೆ ನಡೆಯದೇ ಮಾತು ತಪ್ಪಿದ್ದಾರೆ. ಯಡಿಯೂರಪ್ಪ ಕುಟುಂಬ ತಮಗೆ ಮಾಡಿದ ಮೋಸ ಜನತೆಗೆ ತಿಳಿಯಬೇಕಿದೆ. ಈ ನಿಟ್ಟಿನಲ್ಲಿ ಚಂದ್ರಗುತ್ತಿ ರೇಣುಕಾಂಬಾ ದೇವಿ ಅಲ್ಲದೇ ಅಯೋಧ್ಯೆಗೂ ಹೋಗಿ ಪ್ರಮಾಣ ಮಾಡುತ್ತೇನೆ. ರಾಘವೇಂದ್ರ ಅಲ್ಲದೇ ಬಿ.ಎಸ್.ಯಡಿಯೂರಪ್ಪ ಕೂಡ ಪ್ರಮಾಣ ಮಾಡಬೇಕು.

ಕನ್ನಡಪ್ರಭ ವಾರ್ತೆ ಸೊರಬ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೆ.ಇ.ಕಾಂತೇಶ್ ಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿದ ಭರವಸೆ ಸುಳ್ಳು ಅಥವಾ ನಿಜ ಎನ್ನುವುದು ಜನತೆಗೆ ತಿಳಿಸಬೇಕು. ಆದ್ದರಿಂದ ಬಿ.ವೈ.ರಾಘವೇಂದ್ರ ಚಂದ್ರಗುತ್ತಿ ಶ್ರೀರೇಣುಕಾಂಬಾ ದೇವಿ ಸನ್ನಿಧಿಯಲ್ಲಿ ಗಂಟೆ ಹೊಡೆದು ಪ್ರಮಾಣ ಮಾಡುವ ಸವಾಲನ್ನು ತಾವು ಸ್ವೀಕರಿಸಿದ್ದೇನೆ. ಅವರೂ ಪ್ರಮಾಣ ಮಾಡಲಿ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಪ್ರತಿ ಸವಾಲು ಎಸೆದರು.

ಸೋಮವಾರ ಪಟ್ಟಣದ ಚಾಮರಾಜ ಪೇಟೆಯ ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ಕೆ. ಪ್ರಭಾಕರ ರಾಯ್ಕರ್ ನಿವಾಸಕ್ಕೆ ಭೇಟಿ ನೀಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆ.ಇ.ಕಾಂತೇಶ್ ಗೆ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡುವ ಜೊತೆಗೆ ಪ್ರಚಾರಕ್ಕೂ ಬರುವುದಾಗಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದರು. ಆದರೆ, ನಂತರದ ದಿನಗಳಲ್ಲಿ ನುಡಿದಂತೆ ನಡೆಯದೇ ಮಾತು ತಪ್ಪಿದ್ದಾರೆ. ಯಡಿಯೂರಪ್ಪ ಕುಟುಂಬ ತಮಗೆ ಮಾಡಿದ ಮೋಸ ಜನತೆಗೆ ತಿಳಿಯಬೇಕಿದೆ. ಈ ನಿಟ್ಟಿನಲ್ಲಿ ಚಂದ್ರಗುತ್ತಿ ರೇಣುಕಾಂಬಾ ದೇವಿ ಅಲ್ಲದೇ ಅಯೋಧ್ಯೆಗೂ ಹೋಗಿ ಪ್ರಮಾಣ ಮಾಡುತ್ತೇನೆ. ರಾಘವೇಂದ್ರ ಅಲ್ಲದೇ ಬಿ.ಎಸ್.ಯಡಿಯೂರಪ್ಪ ಕೂಡ ಪ್ರಮಾಣ ಮಾಡಬೇಕು ಎಂದು ಆಹ್ವಾನಿಸಿದರು.

ಹಿಂದುತ್ವ ಪರ ಧ್ವನಿ ಎತ್ತುವವರ ಹತ್ತಿಕ್ಕುವ ಯತ್ನ:

ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗಿದೆ. ಪ್ರತಾಪ್ ಸಿಂಹ, ಬಸವನಗೌಡ ಪಾಟೀಲ್ ಯತ್ನಾಳ್, ಸಿ.ಟಿ.ರವಿ ಸೇರಿ ಅನೇಕ ಮುಖಂಡರ ಪಕ್ಷದಲ್ಲಿ ಕಡೆಗಣಿಸಲಾಗಿದೆ. ಹಿಂದುತ್ವದ ಪರವಾಗಿ ಧ್ವನಿ ಎತ್ತುವ ಹೋರಾಟಗಾರರಿಗೆ ಬಿ.ಎಸ್.ಯಡಿಯೂರಪ್ಪ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ತಾವು ಚುನಾವಣೆಗೆ ಸ್ಪರ್ಧಿಸುವುದು ಶತಸಿದ್ಧ. ಹಿಂದುತ್ವದ ಪರವಾಗಿ ಮತ್ತು ಹಿಂದೂ ಪರ ಹೋರಾಟಗಾರರಿಗೆ ನ್ಯಾಯ ದೊರಕಿಸಲು ಹಾಗೂ ರಾಜ್ಯ ಬಿಜೆಪಿಯ ಕುಟುಂಬ ರಾಜಕಾರಣ ಕೊನೆಗಾಣಿಸುವ ನಿಟ್ಟಿನಲ್ಲಿ ತಮ್ಮ ಸ್ಪರ್ಧೆ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆ:

ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ಕೆ. ಪ್ರಭಾಕರ ರಾಯ್ಕರ್ ಮಾತನಾಡಿ, ಜನಸಂಘ ಕಾಲದಿಂದಲೂ ಪಕ್ಷಕ್ಕೆ ನಿಷ್ಠರಾಗಿ ದುಡಿದ ಸಾವಿರಾರು ಕಾರ್ಯಕರ್ತರು ಇಂದಿಗೂ ಇದ್ದಾರೆ. ಅನೇಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತು ಪಕ್ಷದ ಸಂಘಟನೆಗಾಗಿ ಶ್ರಮಿಸಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುವ ಕೆಲಸ ನಡೆಯುತ್ತಿದೆ. ಇದರಿಂದ ಬೇಸತ್ತು ಪಕ್ಷದ ಹಿರಿಯರು ಮತ್ತು ಕಾರ್ಯಕರ್ತರು ಚರ್ಚಿಸಿ ಕೆ.ಎಸ್. ಈಶ್ವರಪ್ಪ ಅವರಿಗೆ ಬೆಂಬಲ ನೀಡುವ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದರು.

ಜಿಪಂ ಮಾಜಿ ಸದಸ್ಯ ಕೆ.ಇ. ಕಾಂತೇಶ್, ಗೋ ಸಂರಕ್ಷಣಾ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಜೆ.ಎಸ್. ಚಿದಾನಂದ ಗೌಡ, ಬಜರಂಗದಳ ಮಾಜಿ ತಾಲೂಕು ಸಂಚಾಲಕ ಅಣ್ಣಪ್ಪ, ಉದ್ರಿ ಗ್ರಾಪಂ ಮಾಜಿ ಉಪಾಧ್ಯಕ್ಷ ಪರಮೇಶ್ವರಪ್ಪ ಯಡಗೊಪ್ಪ, ಪಪಂ ಮಾಜಿ ಸದಸ್ಯ ಮಹೇಶ್ ಗೌಳಿ, ಬಂಗಾರಪ್ಪ ಕಾತುವಳ್ಳಿ, ಎಂ.ಪಿ. ರಾಘವೇಂದ್ರ, ಗಣಪತಿ ಬಂಕಸಾಣ, ಲೋಕೇಶ್ ಸೇರಿ ಮೊದಲಾದವರಿದ್ದರು.

ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ

ಚುನಾವಣೆಗೆ ಸ್ಪರ್ಧಿಸದಂತೆ ಈ ಹಿಂದೆ ಕೇಂದ್ರದ ಮುಖಂಡರು ಹಾಗೂ ಜಿಲ್ಲಾ ಮುಖಂಡರು ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸುವ ದೃಢ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕ್ಷೇತ್ರದಲ್ಲಿ ತಾವು ಪ್ರವಾಸ ಕೈಗೊಂಡ ವೇಳೆಯಲ್ಲಿ ಪಕ್ಷದ ಹಿರಿಯರು ಮತ್ತು ಮುಖಂಡರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಏ.೧೨ರಂದು ತಮ್ಮ ಬೆಂಬಲಿಗರೊಂದಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂದು ಕನಿಷ್ಠ ೨೫ ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

ಕೆ.ಎಸ್.ಈಶ್ವರಪ್ಪ, ಬಿಜೆಪಿ ಬಂಡಾಯ ಅಭ್ಯರ್ಥಿ