ಬಿಎಸ್‌ವೈ ರಾಜಕೀಯ ನಿವೃತ್ತಿ ಪಡೆಯಲಿ: ಶಾಸಕ ಜೆ.ಟಿ.ಪಾಟೀಲ

| Published : Nov 27 2024, 01:02 AM IST

ಸಾರಾಂಶ

ರಾಜ್ಯದಲ್ಲಿ ನಡೆದಿರುವ ಮೂರು ಉಪ ಚುನಾವಣೆಯಲ್ಲಿ ಅಭೂತ ಪೂರ್ವ ಗೆಲವು ಸಾಧಿಸಿ ಶಾಸಕರಿಗೆ, ಜನರಿಗೆ ಬೂಸ್ಟರ್ ಡೋಸ್ ನೀಡಿದ ಫಲಿತಾಂಶ ಇದಾಗಿದೆ.

ಕನ್ನಡಪ್ರಭ ವಾರ್ತೆ ಬೀಳಗಿ

ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಕೂಡಲೇ ತಮ್ಮೆಲ್ಲ ಸ್ಥಾನಗಳಿಗೆ ರಾಜೀನಾಮೆ ನೀಡಿ, ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ.ಪಾಟೀಲ ಒತ್ತಾಯಿಸಿದ್ದಾರೆ.

ಇಲ್ಲಿನ ಸಿದ್ದೇಶ್ವರ ಸೌಹಾರ್ದ ಸಹಕಾರಿ ಸಂಘದ ಸಭಾಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದಿರುವ ಮೂರು ಉಪ ಚುನಾವಣೆಯಲ್ಲಿ ಅಭೂತ ಪೂರ್ವ ಗೆಲವು ಸಾಧಿಸಿ ಶಾಸಕರಿಗೆ, ಜನರಿಗೆ ಬೂಸ್ಟರ್ ಡೋಸ್ ನೀಡಿದ ಫಲಿತಾಂಶ ಇದಾಗಿದೆ. ಕಾಂಗ್ರೆಸ್‌ ಮೂರು ಗೆಲವು ಎಂದಿಗೂ ಮರೆಯುವಂತಿಲ್ಲ. ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಬಿಜೆಪಿ ಮೂರು ಕ್ಷೇತ್ರ ಗೆಲ್ಲುತ್ತೆ, ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಬಹಿರಂಗವಾಗಿ ಹೇಳಿದ್ದರು ಆದರೆ ಗೆದ್ದಿರುವುದು ಕಾಂಗ್ರೆಸ ಪಕ್ಷ ಅದಕ್ಕಾಗಿ ಅವರು ತಮ್ಮೆಲ್ಲ ಸ್ಥಾನಗಳಿಗೆ ರಾಜೀನಾಮೆ ನೀಡಿ, ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಚುನಾವಣೆ ಮುನ್ನಾ ಸಿಎಂ ಸಿದ್ದರಾಮಯ್ಯ ಮುಡಾ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸುಳ್ಳು ಆರೋಪಗಳೊಂದಿಗೆ ಸುಖಾಸುಮ್ಮನೆ ಆರೋಪ ಮಾಡಿದ್ದಾರೆ. ವಕ್ಫ್‌ ಆಸ್ತಿ ವಿಚಾರದಲ್ಲಿ ಬಿಜೆಪಿ ಮಾಡಿದ ತಪ್ಪನ್ನು ಕಾಂಗ್ರೆಸ್‌ ಮೇಲೆ ಹಾಕುವ ಹುನ್ನಾರ ನೆಡೆದಿದೆ ಎಂಬುವುದು ಜಗಜಾಹಿರಾಗಿದೆ. ಉಪಚುನಾವಣೆ ಫಲಿತಾಂಶ ನಾಡಿನ ಜನರು ಕಾಂಗ್ರೆಸ್‌ ಸರ್ಕಾರ ಒಪ್ಪಿಕೊಂಡು ಸರ್ಕಾರದ ಪರವಾಗಿ ನಾವಿದ್ದೇವೆ ಎಂದು ತೋರಿಸಿದೆ. ಸುಳ್ಳೆ ಮನೆದೇವರು ಎಂದು ನಂಬಿರುವ ಬಿಜೆಪಿಯವರು ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ನಿಟ್ಟಿನಲ್ಲಿ ಸಾಕಷ್ಟು ವಿಷಯಗಳ ವಿಷಾಂತರ ಮಾಡಿದ್ದಾರೆ ಎಂದು ಆರೋಪಿಸಿದರು.

ಅಲ್ಲದೆ ರಾಜ್ಯದಲ್ಲಿ ಗ್ಯಾರಂಟಿ ಜತೆಗೆ ಅಭಿವೃದ್ಧಿ ಕಾರ್ಯ ಗಮನಿಸಿ ಸಹಿಸಿಕೊಳುವ ಶಕ್ತಿ ಅವರಿಗಿಲ್ಲ. ಬಿಜೆಪಿಗರು ಅವರ ಕೈಯಿಂದ ಏನು ಮಾಡಬೇಕು, ಅವೆಲ್ಲವನ್ನು ಸುಳ್ಳು ಅಪ್ರಾಮಾಣಿಕರಾಗಿ ಆರೋಪ ಮಾಡುತ್ತಾ ಬಂದಿದ್ದಾರೆ. ಜತೆಗೆ ಕೇಂದ್ರ ಸರ್ಕಾರವು ಸುಳ್ಳು ಆರೋಪಗಳಿಗೆ ಪುಷ್ಠಿ ನೀಡಿ ದೇಶದ ಅಭಿವೃದ್ಧಿ ಕಡೆಗಣಿಸುತ್ತಿದೆ. ವಕ್ಫ್‌ ವಿಚಾರದಲ್ಲಿ ಕಳೆದ ಬಿಜೆಪಿ ಸರ್ಕಾರದ ಅವಯಲ್ಲಿ 2900 ಎಕರೆ ಜಮೀನುಗಳಿಗೆ ನೋಟಿಸ್‌ ನೀಡಲಾಗಿದೆ ಮತ್ತು ಕಾಂಗ್ರೆಸ್‌ ಅವಧಿಯಲ್ಲಿ ಕೇವಲ 300 ಎಕರೆ ಆಸ್ತಿಗಳಿಗೆ ನೋಟಿಸ್ ನೀಡಲಾಗಿದೆ. ವಕ್ಫ್‌ ಆಸ್ತಿ ವಿಚಾರದಲ್ಲಿ ಅತಿ ಹೆಚ್ಚು ಆಸ್ತಿಗಳಿಗೆ ನೋಟಿಸ್ ನೀಡಿದ್ದ ಬಿಜೆಪಿ ಸರ್ಕಾರ ಇದೀಗ ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿರುವುದು ಜನರಿಗೆ ಅರ್ಥವಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಬೀಳಗಿ ಪಪಂ ಒಂದು ಸ್ಥಾನ ಕಾಂಗ್ರೆಸ್‌ ತೆಕ್ಕೆಗೆ:

ಬೀಳಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿ ವಾರ್ಡ್‌ ನಂ.3ರ ಉಪಚುನಾವಣೆ ಫಲಿತಾಂಶ ನ.26 ರಂದು ಬಂದಿದೆ. ಕಳೆದ 40 ವರ್ಷಗಳಿಂದ ದಳ, ಬಿಜೆಪಿ ತೆಕ್ಕೆಯಲ್ಲಿದ್ದ ಈ ವಾರ್ಡ್‌ನಲ್ಲಿ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ರಾಜು ಬೋರ್ಜಿ ಅಭೂತಪೂರ್ವ ಗೆಲವು ಸಾಧಿಸಿದ್ದಾರೆ. ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ವರ್ಚಸ್ಸು ಜತೆಗೆ ಅಭಿವೃದ್ಧಿ ಕಾರ್ಯಗಳು ಹೆಚ್ಚುವಂತೆ ಮಾಡಿದ್ದಾರೆ. ಪಕ್ಷದ ಮೂರು ಉಪಚುನಾವಣೆ ಮತ್ತು ಬೀಳಗಿ ಪಪಂ ಉಪಚುನಾವಣೆಯಲ್ಲಿ ಗೆದ್ದು ಜನಪರವಾಗಿದ್ದೇವೆ ಎಂದು ಸಾಬೀತಾಗಿದೆ. ಇವೆಲ್ಲಕ್ಕೂ ಕಾರಣರಾದ ಸಿಎಂ, ಡಿಸಿಎಂ ಮತ್ತು ಸಚಿವ ಸತೀಶ ಜಾರಕಿಹೊಳಿ ಸೇರಿದಂತೆ ಎಲ್ಲ ಮುಖಂಡರಿಗೆ ನ.27ರಂದು ಬೆಂಗಳೂರಿನಲ್ಲಿ ಗೌರವ ಸನ್ಮಾನ ನೆರವೇರಿಸಿ ಇನ್ನೂ ಪಕ್ಷ ಬಲವರ್ಧನೆ ಕೆಲಸವನ್ನು ಮಾಡುವ ಶಕ್ತಿ ನೀಡಲೆಂದು ಕೇಳಿಕೊಳ್ಳುತ್ತೇವೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಣಮಂತ ಕಾಖಂಡಕಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಅನವೀರಯ್ಯ ಪ್ಯಾಟಿಮಠ, ನಗರ ಘಟಕ ಅಧ್ಯಕ್ಷ ಸಿದ್ದ ಸಾರಾವರಿ, ಬಸವರಾಜ ಹಳ್ಳದಮನಿ ಸೇರಿದಂತೆ ಇತರರಿದ್ದರು.