ಉತ್ತಮವಾದದ್ದನ್ನು ಕೆಡಿಸಿ, ಹಾನಿಕಾರಕವಾದುದನ್ನು ಸಮಾಜಕ್ಕೆ ಕೊಡುವುದೇ ಕಲಿಯುಗದ ಲಕ್ಷಣ. ಪ್ಲಾಸ್ಟಿಕ್, ಕೃತಕ ವಸ್ತುಗಳು ಅತ್ಯಂತ ಹಾನಿಕಾರಕ ಎಂದು ವಿಜ್ಞಾನವೇ ಒಪ್ಪಿಕೊಂಡಿದ್ದರೂ ಅವುಗಳ ಉತ್ಪಾದನೆ ಮತ್ತು ಬಳಕೆ ನಿಲ್ಲುತ್ತಿಲ್ಲ.

ಗೋಕರ್ಣ: ಪ್ರವಾಹಕ್ಕೆ ವಿರುದ್ಧವಾಗಿ ಈಜುವ ಧೈರ್ಯ ನಮಗಿರಬೇಕು. ಪ್ಲಾಸ್ಟಿಕ್ ಹಾಳು ಎಂದು ಆಧುನಿಕ ವಿಜ್ಞಾನ ಹೇಳುತ್ತಿದೆಯಾದರೂ, ಪ್ಲಾಸ್ಟಿಕ್ ಇಂದು ಎಲ್ಲೆಡೆ ನಮ್ಮನ್ನು ಆವರಿಸಿದೆ. ಬದಲಾವಣೆಯು ಬೇರೆಯವರ ಮನೆಯಿಂದಲ್ಲ, ನಮ್ಮ ಮನೆಯಿಂದ ಮತ್ತು ನಮ್ಮಿಂದಲೇ ಆರಂಭವಾಗಬೇಕು ಎಂದು ರಾಘವೇಶ್ವರ ಭಾರತೀ ಸ್ವಾಮಿಗಳು ನುಡಿದರು.ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಮಂಗಳವಾರದ ಧರ್ಮಸಭೆಯಲ್ಲಿ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಉತ್ತಮವಾದದ್ದನ್ನು ಕೆಡಿಸಿ, ಹಾನಿಕಾರಕವಾದುದನ್ನು ಸಮಾಜಕ್ಕೆ ಕೊಡುವುದೇ ಕಲಿಯುಗದ ಲಕ್ಷಣ. ಪ್ಲಾಸ್ಟಿಕ್, ಕೃತಕ ವಸ್ತುಗಳು ಅತ್ಯಂತ ಹಾನಿಕಾರಕ ಎಂದು ವಿಜ್ಞಾನವೇ ಒಪ್ಪಿಕೊಂಡಿದ್ದರೂ ಅವುಗಳ ಉತ್ಪಾದನೆ ಮತ್ತು ಬಳಕೆ ನಿಲ್ಲುತ್ತಿಲ್ಲ ಎಂದರು.ಮನುಷ್ಯನ ಆಲೋಚನೆ ಆಹಾರವನ್ನು ಅವಲಂಬಿಸಿದೆ. ಆಹಾರದ ಮೇಲೆ ಪಾತ್ರೆಗಳು ಪರಿಣಾಮವನ್ನು ಬೀರುತ್ತದೆ. ಇಂದು ನಮ್ಮ ಮನೆಗಳಲ್ಲಿ ಪಾರಂಪರಿಕ ತಾಮ್ರ, ಹಿತ್ತಾಳೆ ಹಾಗೂ ಕಂಚಿನ ಪಾತ್ರೆಗಳು ಮನೆಯ ಮೆತ್ತನ್ನು ಸೇರಿದೆ. ಅವುಗಳನ್ನು ಬಳಸುತ್ತಲೇ ಇಲ್ಲ. ಒಂದೆರಡು ತಲೆಮಾರಿನ ಹಿಂದೆ ಬಡತನ ಇತ್ತಾದರೂ ಅವರು ಸೂಕ್ತವಾದ ಲೋಹದ ಪಾತ್ರೆಗಳನ್ನೇ ಬಳಸುತ್ತಿದ್ದರು ಎಂದರು.

ಧರ್ಮಶಾಸ್ತ್ರವು ಮಣ್ಣಿನ ಪಾತ್ರೆಯನ್ನು ಬಳಕೆಗೆ ಹೇಳಿಲ್ಲ. ಆದರೆ ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಎಂಜಲಾದ ಮಣ್ಣಿನ ಪಾತ್ರೆಯನ್ನು ಪುನಃ ಬಳಸಬಾರದು ಎಂಬುದು ಧರ್ಮಶಾಸ್ತ್ರದ ಸಾರವಾಗಿದ್ದು, ಎಂಜಲಾಗದ ಮಣ್ಣಿನ ಪಾತ್ರೆಯನ್ನು ಬಳಸಲು ವಿರೋಧವಿಲ್ಲ ಎಂದು ಅಭಿಪ್ರಾಯಪಟ್ಟರು.ಶ್ಯಾಮಸೂರ್ಯ ಭಟ್ಟ ಮುಳಿಗದ್ದೆ ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು. ಸುಬ್ರಹ್ಮಣ್ಯ ಸೇರಾಜೆ ದಂಪತಿಗಳು ದಿನಪ್ರಧಾನರಾಗಿ ಉಪಸ್ಥಿತರಿದ್ದರು.ಗಣೇಶನಿಗೆ ಪೂಜೆ: ಗಣೇಶ ಚತುರ್ಥಿಯ ಅಂಗವಾಗಿ ರಾಘವೇಶ್ವರ ಭಾರತೀ ಸ್ವಾಮಿಗಳು ಮಣ್ಣಿನಿಂದ ಮಾಡಿದ ನೈಸರ್ಗಿಕ ಬಣ್ಣದಿಂದ ವಿಶೇಷವಾಗಿ ತಯಾರಿಸಿದ ಗಣಪತಿಯನ್ನು ಪೂಜಿಸಿದರು. ಮಠೀಯ ಪದ್ಧತಿಯಂತೆ ಪೂಜೆಯನ್ನು ಸಲ್ಲಿಸಿದ ಶ್ರೀಗಳು ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.