ಸಾರಾಂಶ
ಧಾರವಾಡ:
ಮಗುವನ್ನು ಮನುಷ್ಯನನ್ನಾಗಿ ಬೆಳೆಸುವುದು ಸುಲಭದ ಕೆಲಸವಲ್ಲ. ಹಾಗೆಯೇ, ಪ್ರಾಯಕ್ಕೆ ಬಂದ ಮಕ್ಕಳನ್ನು ಸರಿಯಾದ ದಾರಿಗೆ ತರುವುದು ಕಷ್ಟದ ಕೆಲಸ ಎಂದು ಪ್ರಾಧ್ಯಾಪಕಿ ಡಾ. ವಿನಯಾ ಒಕ್ಕುಂದ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು ರಶ್ಮಿ ಮಂಜುನಾಥ ನಾಯಕ ದತ್ತಿ ಅಂಗವಾಗಿ ಏರ್ಪಡಿಸಿದ್ದ ‘ಅಕ್ಷರರಶ್ಮಿ ಪ್ರಶಸ್ತಿ’ ಪ್ರದಾನ ಹಾಗೂ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಣೆಯಲ್ಲಿ ಇಂದು ಮಕ್ಕಳ ಪೋಷಣೆಯಲ್ಲಿ ಪಾಲಕರ ಜವಾಬ್ದಾರಿಗಳು’ ಕುರಿತು ಉಪನ್ಯಾಸ ನೀಡಿದರು.
ಮಕ್ಕಳು ನಮ್ಮ ಕಲ್ಪನೆಯಲ್ಲಿ ಇರುವಂತೆ ಇರುವುದಿಲ್ಲ. ಮಗುವಿಗೆ ಅದರದೇ ಆದ ಭಾವನೆಗಳಿದ್ದು ಅವುಗಳನ್ನು ಬೆಳೆಯಲು ಬಿಡಬೇಕು. ಮಕ್ಕಳು ಹಾದಿ ತಪ್ಪುವುದಕ್ಕೆ ಹೆತ್ತವರೆ ಕಾರಣ. ಅದರ ಜವಾಬ್ದಾರಿ ಹೆತ್ತವರೇ ಹೊರಬೇಕು. ಹದ ಮಾಡಿ ಕುಟ್ಟಿದರೆ ಅಕ್ಕಿ, ಹದ ತಪ್ಪಿದರೆ ನುಚ್ಚು ಎನ್ನುವಂತೆ ಮಕ್ಕಳ ಮನಸ್ಸು ಇರುತ್ತದೆ. ಪ್ರಶ್ನಿಸುವ ಅಧಿಕಾರವನ್ನು ಮಕ್ಕಳಿಗೆ ಕೊಡುತ್ತಿಲ್ಲ. ಸತ್ಯವನ್ನು ಹೇಳುವ ತಾಕತ್ತಿರುವುದು ಮಗುವಿಗೆ ಮಾತ್ರ ಎಂದರು.ಪ್ರಸ್ತುತ ಮಕ್ಕಳ ಮೇಲೆ ನಾವು ಯುದ್ಧ ಸಾರಿದ್ದೇವೆ. ಮನೆಯ ಜೀವಂತ ಶಕ್ತಿಯಾಗಿರುವ ಮಕ್ಕಳಿಗೆ ಮನೆಯಲ್ಲಿ ಓದಲು ಅವರದೇ ಆದ ಒಂದು ಕೋಣೆ ಇಟ್ಟಿಲ್ಲ. 18ರೊಳಗಿನ ಹುಡುಗನಿಗೆ ರಾಕ್ಷಸ ಪ್ರವೃತ್ತಿ ಏಕೆ, ಹೇಗೆ ಬೆಳೆಯುತ್ತಿದೆ? ಎಂಬುದನ್ನು ಗಮನಿಸಬೇಕು. ಹಣ ಗಳಿಸುವುದು ಹೇಗೆ ಎಂಬ ಪಾಲಕರ ಆಶಾಭಾವನೆಗೆ ಮಕ್ಕಳು ಬಲಿಯಾಗುತ್ತಿದ್ದಾರೆ. ಜತೆಗೆ ರಿಯಾಲಿಟಿ ಶೋಗಳು ಮಕ್ಕಳ ಮನಸ್ಸನ್ನು ಕೆಡಿಸುತ್ತಿವೆ ಎಂದು ಹೇಳಿದರು.
ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ, ಬೀಜ ಭೂಮಿಗೆ ಬಿದ್ದಾಗ, ಅದು ಗಾಳಿ, ಬಿಸಿಲು, ಮಣ್ಣು, ನೀರಿನ ಸಂಸ್ಕಾರ ಪಡೆದುಕೊಂಡು ಬೆಳೆಯುತ್ತದೆ. ಅದೇ ರೀತಿ ಮಕ್ಕಳಿಗೆ ಮನಸ್ಸಿನಲ್ಲಿ ಒಳ್ಳೆಯ ಆಚಾರ-ವಿಚಾರದ ಬೀಜ ಬಿತ್ತಿ ಬೆಳೆಸಬೇಕು ಎಂದರು.ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ, ವಿನಮ್ರತೆಯಿಂದ ಮಕ್ಕಳನ್ನು ಬೆಳೆಸಬೇಕು. ತಂದೆ-ತಾಯಿ ಮಕ್ಕಳನ್ನು ಹಣ ಗಳಿಸುವ ಸಾಧನವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳಿಗಿಂತ ಹಣವೇ ಮುಖ್ಯವಾಗಿಬಿಟ್ಟಿದೆ. ಅದನ್ನು ಬಿಟ್ಟು ಮಕ್ಕಳಲ್ಲಿ ಸ್ವಾವಲಂಬಿ ಗುಣ ಕಲಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ರಾಜ್ಯಕ್ಕೆ 4ನೇ ಸ್ಥಾನ ಪಡೆದ ಧಾರವಾಡ ಶಹರದ ವಿದ್ಯಾರ್ಥಿನಿ ಸ್ಫೂರ್ತಿ ಮಂಜಣ್ಣ ತುರಾಯಿ ಅವರಿಗೆ ‘ಅಕ್ಷರರಶ್ಮಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು. ಗಗನ ಜಕ್ಕಣ್ಣವರ ಪ್ರಾರ್ಥಿಸಿದರು. ವೀರಣ್ಣ ಒಡ್ಡೀನ, ಶಶಿಧರ ತೋಡಕರ್, ಎಂ.ಎಂ. ಚಿಕ್ಕಮಠ ಇದ್ದರು.19ಡಿಡಬ್ಲೂಡಿ7
ಕರ್ನಾಟಕ ವಿದ್ಯಾವರ್ಧಕ ಸಂಘವು ರಶ್ಮಿ ಮಂಜುನಾಥ ನಾಯಕ ದತ್ತಿ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ರಾಜ್ಯಕ್ಕೆ 4ನೇ ಸ್ಥಾನ ಪಡೆದ ವಿದ್ಯಾರ್ಥಿನಿ ಸ್ಫೂರ್ತಿ ಮಂಜಣ್ಣ ತುರಾಯಿ ಅವರಿಗೆ ‘ಅಕ್ಷರರಶ್ಮಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.