ಸ್ವಚ್ಛತೆಯೇ ನಮ್ಮ ಉಸಿರಾಗಲಿ: ಜಿಪಂ ಸಿಇಒ ರಾಹುಲ್ ಪಾಂಡೆಯ

| Published : Sep 22 2024, 01:48 AM IST

ಸಾರಾಂಶ

ಸ್ವಚ್ಛತೆ ಪ್ರಜ್ಞೆಯು ಪ್ರತಿಯೊಬ್ಬರಿಂದ ಹೊರಹೊಮ್ಮಬೇಕು. ಪ್ರತಿಯೊಂದು ಕುಟುಂಬ ತನ್ನ ಸುತ್ತಲೂ ಇರುವ ವಾತಾವರಣ ಶುಚಿಯಾಗಿಟ್ಟುಕೊಳ್ಳಬೇಕು.

ಸ್ವಚ್ಛತಾ ಹೀ ಸೇವಾ: ನಾಲಾ ಸ್ಚಚ್ಛಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಪ್ರತಿಯೊಬ್ಬರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಬೇಕು. ಸ್ವಚ್ಛತೆಯೇ ನಮ್ಮ ಉಸಿರಾಗಬೇಕೆಂದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಹೇಳಿದ್ದಾರೆ.

ತಾಲೂಕಿನ ಹಾಲವರ್ತಿ ಗ್ರಾಪಂಯಲ್ಲಿ ಸ್ವಚ್ಛತಾ ಹೀ ಸೇವಾದಡಿ ನಡೆದ ಬಸಾಪುರ ಗ್ರಾಮದ ನಾಲಾ ಸ್ಚಚ್ಛಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ವಚ್ಛತೆ ಪ್ರಜ್ಞೆಯು ಪ್ರತಿಯೊಬ್ಬರಿಂದ ಹೊರಹೊಮ್ಮಬೇಕು. ಪ್ರತಿಯೊಂದು ಕುಟುಂಬ ತನ್ನ ಸುತ್ತಲೂ ಇರುವ ವಾತಾವರಣ ಶುಚಿಯಾಗಿಟ್ಟುಕೊಳ್ಳಬೇಕು. ಗ್ರಾಪಂಯಿಂದ ಈಗಾಗಲೇ ಸ್ವಚ್ಛ ವಾಹಿನಿಗಳನ್ನು ನೀಡಲಾಗಿದ್ದು ಕಸವನ್ನು ಎಲ್ಲೆಂದರಲ್ಲಿ ಬಿಸಾಡದೇ ಅವುಗಳಿಗೆ ಹಸಿ, ಒಣ ಕಸ ಪ್ರತ್ಯೇಕಿಸಿ ನೀಡಬೇಕು. ಪ್ರತಿವಾರದಲ್ಲಿ ನಾವುಗಳು ಸ್ವಚ್ಛತೆಗೆ 2 ಗಂಟೆಗಳ ಕಾಲ ಮೀಸಲಿಡಬೇಕು. ಇದರಿಂದ ನಮಗೆ ವ್ಯಾಯಾಮ ಆಗುವುದರ ಜೊತೆಗೆ ಸ್ವಚ್ಛ ಸುಂದರ ವಾತಾವರಣ ನಿರ್ಮಿಸಿದಂತಾಗುತ್ತದೆ ಎಂದರು.

ಗ್ರಾಮದಲ್ಲಿರುವ ಐತಿಹಾಸಿಕ ಸ್ಥಳಗಳು, ಸಾರ್ವಜನಿಕ ಸ್ಥಳದಲ್ಲಿ ಜನರನ್ನು ಒಗ್ಗೂಡಿಸಿ ಇಂತಹ ಶ್ರಮದಾನ ಕಾರ್ಯಕ್ರಮ ಜರುಗಿಸುವುದರಿಂದ ಅವರಲ್ಲಿ ಸ್ವಚ್ಛತೆಯ ಪ್ರಜ್ಞೆ ಮೂಡಲು ಸಹಕಾರವಾಗುತ್ತದೆ. ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ ಮರಗಳನ್ನು ನೆಟ್ಟು ಪೋಷಿಸಿದಲ್ಲಿ ಅರಣ್ಯೀಕರಣ ಪ್ರಮಾಣ ಹೆಚ್ಚಳವಾಗುವುದರ ಜೊತೆಗೆ ಕಾಲಕಾಲಕ್ಕೆ ಮಳೆಯಾಗಿ ರೈತರು ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯಲು ಅನುಕೂಲವಾಗುತ್ತದೆ ಎಂದರು.

ಸ್ವಚ್ಛತೆ ಕಾಪಾಡುವಲ್ಲಿ ಕೇವಲ ಸರ್ಕಾರಿ ನೌಕರರು, ಜನಪ್ರತಿನಿಧಿ ಅಷ್ಟೇ ಅಲ್ಲ, ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಿ ಗ್ರಾಮದ ಅಭಿವೃದ್ದಿಗೆ ಪಣತೋಡಬೇಕು. ಜಗತ್ತಿನಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ದೊಡ್ಡ ಸವಾಲಾಗಿದೆ. ಹೀಗಾಗಿ ಪ್ರತಿಯೊಬ್ಬರು ನಾನು ಪ್ಲಾಸ್ಟಿಕ್ ಬಳಸುವುದಿಲ್ಲ ಎನ್ನುವ ತಿಳಿವಳಿಕೆ ಹೊಂದಬೇಕು ಎಂದು ಸಲಹೆ ಮಾಡಿದರು.

ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಮಾತನಾಡಿ, ಸ್ವಚ್ಛತೆಯ ಸೇವೆ ಕಾರ್ಯಕ್ರಮಗಳು ಅಕ್ಟೋಬರ್-2 ರವರೆಗೆ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯಲಿವೆ. ಆದ್ದರಿಂದ ಶಾಲಾ ಅಂಗನವಾಡಿ, ದೇವಸ್ಥಾನ, ಮಸೀದಿ, ಮಂದಿರಗಳು, ಕಲ್ಯಾಣಿ, ಬಾವಿ, ಗೊಕಟ್ಟೆ ನಾಲಾಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸ್ವಚ್ಛತೆಯ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ತಾಪಂ ಇಒ ದುಂಡಪ್ಪ ತುರಾದಿ ಪ್ರಾಸ್ತಾವಿಕ ಮಾತನಾಡಿದರು.

ಹಾಲವರ್ತಿ, ಗಿಣಿಗೇರಾ, ಗುಳದಳ್ಳಿ, ಲೇಬಗೇರಿ, ಓಜನಹಳ್ಳಿ, ಕುಣಿಕೇರಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿಯನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಈ ಸಂದರ್ಭ ಸಾಮಾಜಿಕ ವಲಯ ಅರಣ್ಯಧಿಕಾರಿ ಗುರುನಗೌಡ ಪಾಟೀಲ್, ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ತಾಲೂಕ ಯೋಜನಾಧಿಕಾರಿ ರಾಜೇಸಾಬ ನದಾಫ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ಜಯಪ್ರದಾ ಭರಮಪ್ಪ ಗೊರವರ, ಮಹೇಂದ್ರ ಹಾಲವರ್ತಿ, ಯಲ್ಲಪ್ಪ ತಳವಾರ, ಮಂಜುನಾಥ ಪಾಟೀಲ್, ಗ್ಯಾನಪ್ಪ ತಳಕಲ್ಲ, ಅಮರೇಶ ಕಂಬಳಿ, ಆನಂದ ಕಿನ್ನಾಳ, ಮುದಿಯಪ್ಪ ಆದೋನಿ, ಬಿ. ನಾಗರಾಜ ಸೇರಿದಂತೆ ಹಲವರು ಇದ್ದರು.