ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂತಾಮಣಿ
ಸಚಿವರು, ಜಿಲ್ಲಾ ಆಡಳಿತವು ಅಂಬೇಡ್ಕರ್ ಪ್ರತಿಮೆಗೆ ಸುತ್ತಿರುವ ಕೊಳಕು ಬಟ್ಟೆಯನ್ನು ತೆಗೆಸಲು ಮುಂದಾಗಬೇಕೆಂದು ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಆಗ್ರಹಿಸಿದರು.ಅಂಬೇಡ್ಕರ್‌ರ ಪುತ್ಥಳಿಗೆ ಸುತ್ತಿರುವ ಕೊಳಕು ಬಟ್ಟೆಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ದಲಿತರ ಪರ ಸಂಘಟನೆಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಧರಣಿ ಬೆಂಬಲಿಸಿ ಮಾತನಾಡಿ. ಸಚಿವ ಡಾ.ಎಂ.ಸಿ.ಸುಧಾಕರ್ ಅಂಬೇಡ್ಕರ್ ಪುತ್ಥಳಿಯ ವಿವಾದವನ್ನು ಕೇವಲ ೫ ನಿಮಿಷಗಳಲ್ಲಿ ಬಗೆಹರಿಸಬಹುದಾಗಿದೆ. ದಲಿತ ಸಂಘಟನೆಯ ಎಲ್ಲಾ ಪದಾಧಿಕಾರಿಗಳನ್ನು ಕರೆದು ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇರಿಸಿರುವ ಅಂಬೇಡ್ಕರ್ ಪುತ್ಥಳಿಗೆ ಹಾಕಿರುವ ಕೊಳಕು ಬಟ್ಟೆಯನ್ನು ತೆರವುಗೊಳಿಸಿ ಪ್ರತಿಮೆಯನ್ನು ಶುದ್ಧೀಕರಣಗೊಳಿಸಿ ಮಾರ್ಲಾಪಣೆ ಮಾಡಬೇಕು ಎಂದು ಒತ್ತಾಯ ಮಾಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಚಿವ ಡಾ.ಎಂ.ಸಿ.ಸುಧಾಕರ್‌ರ ಕಿವಿಹಿಂಡಿ ಅವರಿಗೆ ಅಂಬೇಡ್ಕರ್ ಪುತ್ಥಳಿಯನ್ನು ಲೋಕಾರ್ಪಣೆಗೊಳಿಸುವಂತೆ ತಿಳಿಹೇಳಿ, ಕೇವಲ ಡೋಂಗಿ ನಾಟಕ ಬಿಟ್ಟು ಅಂಬೇಡ್ಕರ್‌ರನ್ನು ಗೌರವಿಸುವಂತೆ ಹೇಳಿ ಎಂದು ತಿಳಿಸಿದರು.ಕೆಲವು ತಾಲೂಕು ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆಯು ಸಚಿವರ ಕೈ ಗೊಂಬೆಗಳಾಗಿ ಕೆಲಸ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ಸರ್ಕಾರಿ ಶಾಲಾ ಆವರಣದಲ್ಲಿ ಅಧಿಕೃತ ಅಂಬೇಡ್ಕರ್ ಪ್ರತಿಮೆ ಇಡಲು ತೊಂದರೆ ಮಾಡಿದ ಕಾರಣ ಯಾರೋ ಅನಧಿಕೃತವಾಗಿ ಅಂಬೇಡ್ಕರ್ ಪ್ರತಿಮೆ ಇಟ್ಟಿದ್ದಾರೆ, ಅಧಿಕೃತವಾಗಿ ಶಿಕ್ಷಣ ಇಲಾಖೆಯಿಂದ ಅಂಬೇಡ್ಕರ್ ಪ್ರತಿಮೆ ಇಡಲು ಅಪ್ಪಣೆ ನೀಡಲು ಅವಕಾಶ ಕಲ್ಪಿಸಿಲ್ಲವೆಂದು ಗೊತ್ತಾದಾಗ ಅನಧಿಕೃತವಾಗಿ ಇಟ್ಟಿದ್ದಾರೆಂದು ನುಡಿದರು.
ಸಂಸದ ಮಲ್ಲೇಶ್ ಬಾಬು ಮಾತನಾಡಿ, ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯನ್ನು ೧ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದು, ಹಿಂದಿನ ಬಿಇಒರಿಂದ ಸಹಿ ಪಡೆದು ಅಂಬೇಡ್ಕರ್ ಪುತ್ಥಳಿಯನ್ನಿಡಲು ಅನುಮತಿಯನ್ನು ಪಡೆಯಲಾಗಿತ್ತು. ಡಾ.ಎಂ.ಸಿ.ಸುಧಾಕರ್ ಅವರು ಕೇವಲ ೫ ನಿಮಿಷಗಳ ಸಮಯ ನಿಗದಿಪಡಿಸಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಈ ವಿವಾದವನ್ನು ಶಮನಗೊಳಿಸಬಹುದು ಎಂದು ಹೇಳಿದರು.ದಲಿತ ಮುಖಂಡರಾದ ವಿಜಯ ನರಸಿಂಹ, ಜನಾರ್ಧನ್ ಬಾಬು, ವಕೀಲ ಗೋಪಿ, ಕವಾಲಿ ವೆಂಕಟರಮಣಪ್ಪ, ನಗರಸಭಾ ಸದಸ್ಯರಾದ ಮುರಳಿ, ಜೆಸಿಬಿ ನಾಗರಾಜ್, ದೇವಳಂ ಶಂಕರ್, ಮುಖಂಡರಾದ ವೆಂಕಟರಮಣಪ್ಪ, ವೆಂಕಟೇಶ್, ವಕೀಲ ಶ್ರೀನಾಥ್, ಗುಡೇ ಶ್ರೀನಿವಾಸರೆಡ್ಡಿ, ಅಬ್ದುಲ್ ಸಮದ್, ಎಂ.ವಿ.ರಾಮಪ್ಪ, ತಳಗವಾರ ರಮೇಶ್, ಜೈಪಾಲ್, ಸಿ.ಎಚ್. ಶಂಕರ್, ಮದೇನಹಳ್ಳಿ ರಮೇಶ್, ಜಂಗಮ ಶಿಗೇಹಳ್ಳಿ ದೇವರಾಜ್, ವೆಂಕಟರಾಯಪ್ಪ, ಶ್ರೀನಿವಾಸ್, ನಾರಾಯಣಸ್ವಾಮಿ, ಎಂ.ಬೈರಪ್ಪ, ಆರ್.ನಾರಾಯಣಸ್ವಾಮಿ, ಜನಾ, ರಾಜೇಂದ್ರ ಬಾಬು ಮತ್ತಿತರರು ಭಾಗವಹಿಸಿದ್ದರು.