ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಎಲ್ಲ ಸಮುದಾಯಗಳು ಭ್ರಮೆ ಮತ್ತು ಹಿಂಜರಿಕೆಯಿಂದ ಹೊರಬಂದು ಸಮಾನತೆ ದಿಕ್ಕಿಗೆ ಸಾಗಬೇಕು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಆಶಿಸಿದರು.ನಗರದ ಕರ್ನಾಟಕ ಸಂಘದಲ್ಲಿ ಜಿಲ್ಲಾಡಳಿತ ನಗರಸಭೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಅಗ್ನಿ ಬನ್ನಿರಾಯರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿ, ನಾಡು ಮತ್ತು ದೇಶ ಕಟ್ಟುವಲ್ಲಿ ಎಲ್ಲ ಜಾತಿ- ವರ್ಗದವರು ಶ್ರಮಿಸಿದ್ದಾರೆ. ಅದೇ ರೀತಿ ಸಮಾಜ ಸುಧಾರಣೆಯಲ್ಲಿ ಅಗ್ನಿಬನ್ನಿರಾಯರು ಸೇರಿದಂತೆ ಎಲ್ಲ ಬಗೆಯ ದಾರ್ಶನಿಕರು ಶ್ರಮಿಸಿದ್ದಾರೆ ಎಂದರು.
ಈ ಸಮಾಜ ಸಾಮರಸ್ಯದಿಂದ ಮುನ್ನಡೆಯಬೇಕಾದರೆ ಒಗ್ಗಟ್ಟಿನಿಂದ ದುಡಿಯಬೇಕು, ನಮ್ಮನ್ನು ಒಡೆದು ಆಳುವ ಮೇಲು- ಕೀಳು ಸಂಸ್ಕೃತಿಯಿಂದ ದೂರ ಇರಬೇಕು ಎಂದರು.ಅಗ್ನಿಬನ್ನಿರಾಯರ ವಂಶಸ್ಥರಾದ ತಿಗಳ ಮತ್ತಿತರೆ ಉಪಜಾತಿಗಳು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಜನಸಂಖ್ಯೆಗೆ ಅನುಗುಣವಾಗಿ ಅಧಿಕಾರ ಮತ್ತು ಸಂಪತ್ತು ಪಡೆಯಲು ಹೋರಾಡಬೇಕು. ಜಿಲ್ಲೆಯಲ್ಲಿನ ತಿಗಳ ಸಮುದಾಯದ ಮುಖಂಡರು ಸಂಘಟಿತರಾಗಿ ನೆಲೆ ಕಂಡುಕೊಳ್ಳಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿದ ಎಂ.ಆರ್.ಉಮೇಶ್, ಭೂಮಂಡಲದಲ್ಲಿ ಆಡಳಿತ ವ್ಯವಸ್ಥೆ ಅಸ್ತವ್ಯಸ್ತವಾಗಿದ್ದಾಗ ಶಂಭು ಮಹರ್ಷಿಗಳು ಸಪ್ತಮಹರ್ಷಿಗಳ ಜೊತೆಗೂಡಿ ನಡೆಸಿದ ಯಜ್ಞಕುಂಡದಲ್ಲಿ ಲೋಕ ಕಲ್ಯಾಣಕ್ಕಾಗಿ ಅವತರಿಸಿದವರು ಅಗ್ನಿಬನ್ನಿರಾಯರು ಎಂದು ಹಿನ್ನೆಲೆಯನ್ನು ವಿವರಿಸಿದರು.ನಗರಸಭಾ ಸದಸ್ಯ ಶ್ರೀಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಜಿಲ್ಲಾ ತಿಗಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಗುರುಮೂರ್ತಿ, ಕಾರ್ಯದರ್ಶಿ ಅಕ್ಕಿಹೆಬ್ಬಾಳು ವಾಸು, ಭಗೀರಥ ಉಪ್ಪಾರ ಸಂಘದ ಅಧ್ಯಕ್ಷೆ ನಾಗರತ್ನ, ವಿಶ್ವಕರ್ಮ ಸಮಾಜದ ಮುಖಂಡ ರಮೇಶ್, ತಿಗಳ ಸಮುದಾಯದ ಮುಖಂಡರು ಹಾಜರಿದ್ದರು.