ಪತ್ರಿಕಾ ದಿನಾಚರಣೆ, ವನಮಹೋತ್ಸವ ಉದ್ಘಾಟನೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಪತ್ರಿಕೆಗಳ ಟೀಕೆ ಸಾಮಾಜಿಕವಾಗಿ ಸ್ವೀಕಾರಾರ್ಹವಾಗಿರಬೇಕು. ಪತ್ರಿಕೆಯ ವರದಿ ಓದುಗರನ್ನು ಕ್ಷಣ ಮಾತ್ರದಲ್ಲಿ ಸೆಳೆಯುವ ಚುರುಕು, ಚುಟುಕಾಗಿ, ಸ್ಫುಟವಾಗಿದ್ದರೆ ಹೆಚ್ಚು ಜನರನ್ನು ತಲುಪಲು ಸಾಧ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಮಂಗಳವಾರ ಪಟ್ಟಣದ ಸವಣಗೇರಿ ಸಭಾಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ, ಹಿರಿಯ ಪ್ರಾಥಮಿಕ ಶಾಲೆ ಸವಣಗೇರಿ ಇವರ ಸಂಯುಕ್ತ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಸಾಧಕ ಪತ್ರಕರ್ತರನ್ನು ಸನ್ಮಾನಿಸಿ ಮಾತನಾಡಿದರು.

ಪತ್ರಕರ್ತರು ಅರ್ಹತೆ ಆಧಾರದ ಮೇಲೆ ಬರಬೇಕು. ಬಳುವಳಿಯಾಗಿ ಆಗಬಾರದು. ಪತ್ರಿಕಾರಂಗವೂ ಕೂಡ ಉಳಿದೆಲ್ಲ ಕ್ಷೇತ್ರದಂತೆ ಪಾವಿತ್ರ‍್ಯತೆ ಉಳಿಸಿಕೊಂಡಿಲ್ಲ. ಹಿಂದಿನ ರಾಜಕೀಯ ಮೌಲ್ಯವೂ ಈಗಿಲ್ಲ. ಹಿಂದಿನ ಬರವಣಿಗೆಯ ಪ್ರಭಾವ ಇಂದು ಇಲ್ಲವಾಗಿದೆ. ಹಿಂದಿನಂತೆ ಬರವಣಿಗೆಯಿಂದ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ಪ್ರವೃತ್ತರಾಗುವ ಪ್ರವೃತ್ತಿ ಇಲ್ಲವಾಗಿದೆ. ಟೀಕೆ ಸ್ವಾಗತಿಸುವ, ಸಹಿಸಿಕೊಳ್ಳುವ ವ್ಯಕ್ತಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಂದುವರಿಯುವ ಅರ್ಹತೆ ಹೊಂದುತ್ತಾನೆ. ಪತ್ರಿಕೆ ವ್ಯಕ್ತಿಯ ವೈಯಕ್ತಿಕ ತೇಜೋವಧೆಗೆ ಇಳಿದರೆ, ಪತ್ರಿಕೆ ಉಳಿಯಲಾರದು. ಉದ್ದಾರವೂ ಆಗಲಾರದು ಎಂದರು.


ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ನರಸಿಂಹ ಅಡಿ ಮಾತನಾಡಿ, ಪತ್ರಕರ್ತರು ಯಾವುದೇ ಹೆಚ್ಚುಗಾರಿಕೆ ಇಲ್ಲದೇ ನಿಸ್ವಾರ್ಥವಾಗಿ ಸಾಮಾಜಿಕ ಜಾಗೃತಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ರಿಕಾ ವೃತ್ತಿ ಕತ್ತಿಯ ಮೇಲಿನ ನಡಿಗೆಯಂತೆ ಸವಾಲಿನ ಕ್ಷೇತ್ರವಾಗಿದೆ. ಶೋಕಿಗಾಗಿ ಮಾಧ್ಯಮದ ಪಾವಿತ್ರ‍್ಯತೆ ಹಾಳು ಮಾಡುವವರ ಬಗ್ಗೆ ಜಾಗೃತಿ ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ತಾಲೂಕಾ ಅಧ್ಯಕ್ಷ ಸುಬ್ರಾಯ ಗಾಂವ್ಕರ ಮಾತನಾಡಿದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ನರಸಿಂಹ ಸಾತೋಡ್ಡಿ, ಕೆ.ಎಸ್. ಭಟ್ಟ ಆನಗೋಡ, ನಾಗೇಂದ್ರ ಯಲ್ಲಾಪುರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ ಅಭಿನಂದನಾ ನುಡಿಗಳನ್ನಾಡಿದರು.

ಶಮಾ ಭಾರತ ಗ್ಯಾಸ್ ಏಜೆನ್ಸಿಯ ಮಾಲಕ ಅಬ್ದುಲ್ ಖಾದರ್ ಎ. ಶೇಖ್, ಲಯನ್ಸ್ ಕ್ಲಬ್ ಅಧ್ಯಕ್ಷ ಶೇಷಗಿರಿ ಪ್ರಭು, ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ, ನೌಕರ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ, ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ, ಉಪಾಧ್ಯಕ್ಷೆ ಶಿಲ್ಪಾ ನಾಯ್ಕ, ಸದಸ್ಯ ರವಿ ನಾಯ್ಕ, ಸಂಘದ ಜಿಲ್ಲಾ ಸದಸ್ಯ ಜಯರಾಜ ಗೋವಿ, ಕೃಷಿಕ ಆರ್.ಜಿ. ಭಟ್ಟ ಬೆಳ್ಸೂರು ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ಬೀರಣ್ಣ ನಾಯಕ ಮೊಗಟಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವೈಷ್ಣವಿ ಹಾಗೂ ಪವಿತ್ರಾ ಮರಾಠಿ ಪ್ರಾರ್ಥಸಿದರು. ಸಂಘದ ಉಪಾಧ್ಯಕ್ಷ ಶ್ರೀಧರ ಅಣಲಗಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಖಜಾಂಚಿ ದತ್ತಾತ್ರಯ ಕಣ್ಣಿಪಾಲ ನಿರೂಪಿಸಿದರು. ಕಾನಿಪ ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರಭಾವತಿ ಗೋವಿ, ಶಿಕ್ಷಕರಾದ ಪವಿತ್ರಾ ಆಚಾರಿ, ಪೂರ್ಣಿಮಾ ನಾಯ್ಕ ಸನ್ಮಾನಪತ್ರ ವಾಚಿಸಿದರು. ಕಾರ್ಯದರ್ಶಿ ವಿಜಯಕುಮಾರ ನಾಯ್ಕ ವಂದಿಸಿದರು.