ಸಾರಾಂಶ
ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದರ ಜತೆಗೆ ವೃತ್ತಿ ಪಾವಿತ್ರ್ಯತೆಯನ್ನು ಉಳಿಸಿ ಬೆಳೆಸಿಕೊಳ್ಳುವ ಮಹತ್ತರ ಜವಾಬ್ದಾರಿಯು ವೈದ್ಯರ ಮೇಲಿದೆ.
ಹಳಿಯಾಳ: ಇತ್ತೀಚಿನ ವರ್ಷಗಳಲ್ಲಿ ವೈದ್ಯರಲ್ಲಿ ಸೇವಾ ಮನೋಭಾವ ಕಡಿಮೆಯಾಗುತ್ತಿದ್ದು, ಆರ್ಥಿಕ ವಿಚಾರಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಿದ್ದಾರೆ. ಇದರಿಂದ ವೈದ್ಯ ವೃತ್ತಿಯ ಪಾವಿತ್ರ್ಯತೆಯು ಕಡಿಮೆಯಾಗುತ್ತಿರುವುದು ಕಳವಳಕಾರಿ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.
ಸೋಮವಾರ ತಾಲೂಕು ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಿರುವ ಬಿಪಿಎಚ್‌ಯು ಪ್ರಯೋಗಶಾಲೆಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದರ ಜತೆಗೆ ವೃತ್ತಿ ಪಾವಿತ್ರ್ಯತೆಯನ್ನು ಉಳಿಸಿ ಬೆಳೆಸಿಕೊಳ್ಳುವ ಮಹತ್ತರ ಜವಾಬ್ದಾರಿಯು ವೈದ್ಯರ ಮೇಲಿದೆ ಎಂದರು.ಜನತೆ ವೈದ್ಯರನ್ನು ದೇವರಂತೆ ಕಾಣುತ್ತಾರೆ. ಆದರೆ, ವೈದ್ಯರಿಗೆ ರೋಗಿಗಳೇ ದೇವರಿದ್ದಂತೆ. ರೋಗಿಗಳೊಂದಿಗೆ ವೈದ್ಯರು ಹೆಚ್ಚು ಹೊತ್ತು ಮಾತನಾಡಿದಷ್ಟು ರೋಗಿಗಳಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ. ಜತೆಗೆ ಕಾಯಿಲೆಯ ಬಗ್ಗೆಯೂ ವೈದ್ಯರಿಗೆ ಸ್ಪಷ್ಟತೆ ಸಿಗುತ್ತದೆ. ಸಾಧ್ಯವಾದಷ್ಟು ರೋಗಿಗಳೊಂದಿಗೆ ಸಂಹವನ ನಡೆಸಿ, ಈ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಲು ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಶ್ರಮಿಸಿ ಎಂದರು.
ಸರ್ಕಾರಿ ಸೇವೆಗೆ ವೈದ್ಯರು ಬರುತ್ತಿಲ್ಲ: ಜೋಯಿಡಾದಲ್ಲಿ ಈ ವಾರದಲ್ಲಿ ಇಂತಹ ಪ್ರಯೋಗಶಾಲೆಯ ಕಟ್ಟಡ ಉದ್ಘಾಟನೆಗೊಳ್ಳಲಿದೆ. ದಾಂಡೇಲಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ತಿಳಿಸಿದ್ದೇನೆ ಎಂದರು. ಆರೋಗ್ಯ ಕ್ಷೇತ್ರಕ್ಕೆ ಮೊದಲ ಆದ್ಯತೆಯನ್ನು ನೀಡಿದ್ದೇನೆ ಎಂದ ದೇಶಪಾಂಡೆ, ಕ್ಷೇತ್ರಕ್ಕೆ ಎಷ್ಟೇ ಮೂಲ ಸೌಲಭ್ಯಗಳನ್ನು ನೀಡಿದರೂ ಕಡಿಮೆಯೇ. ಎಲ್ಲೆಡೆ ವೈದ್ಯರ ಕೊರೆತಯನ್ನು ಕಾಣುತ್ತಿದ್ದೇವೆ. ಸರ್ಕಾರಿ ಸೇವೆಗೆ ಭರ್ತಿಯಾಗುವ ವೈದ್ಯರು ಬಹುದಿನ ಉಳಿಯದೇ ರಾಜೀನಾಮೆ ನೀಡಿ ಹೋಗುತ್ತಿದ್ದಾರೆ. ಹೀಗೆ ಸರ್ಕಾರಿ ಸೇವೆಗೆ ವೈದ್ಯರು ಬರುವುದು ಹೋಗುವುದು ಯಾಕೆಂದು ನನಗೂ ಗೊತ್ತಾಗುತ್ತಿಲ್ಲ ಎಂದರು. ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಮೇಶ ಕದಂ ಮಾತನಾಡಿ, 15ನೇ ಹಣಕಾಸು ಯೋಜನೆಯಡಿ ಅಂದಾಜು ₹55 ಲಕ್ಷ ವೆಚ್ಚದಲ್ಲಿ ಪ್ರಯೋಗಾಲಯದ ಕಟ್ಟಡದ ನಿರ್ಮಾಣ ಮಾಡಲಾಗಿದೆ. ಜಿಲ್ಲೆಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ಮೊದಲ ಪ್ರಯೋಗಾಲಯದ ಕಟ್ಟಡ ಇದಾಗಿದೆ ಎಂದರು. ತಾಂ ಇಒ ಸತೀಶ ಆರ್., ತಹಸೀಲ್ದಾರ್ ಪ್ರವೀಣಕುಮಾರ ಹುಚ್ಚಣ್ಣನವರ, ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅನ್ನಪೂರ್ಣ ವಸ್ತ್ರದ, ತಾಲೂಕು ವೈದ್ಯಾಧಿಕಾರಿ ಡಾ. ಅನಿಲಕುಮಾರ ನಾಯ್ಕ, ಪುರಸಭಾ ಸದಸ್ಯೆ ಸುವರ್ಣ ಮಾದರ, ಶಮೀಮಬಾನು ಜಂಬೂವಾಲೆ ಸೇರಿದಂತೆ ಕಾಂಗ್ರೆಸ್ ಜನಪ್ರತಿನಿಧಿಗಳು ಇದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರೂಪಾ ತುರಮುರಿ ಕಾರ್ಯಕ್ರಮ ನಿರ್ವಹಿಸಿದರು.ನಂತರ ತಾಲೂಕು ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿಯ ಸಭೆಯನ್ನು ಶಾಸಕರು ನಡೆಸಿದರು. ತಾಲೂಕು ಆಸ್ಪತ್ರೆಯ ವೈದ್ಯರು ಹಾಗೂ ಸಮಿತಿಯ ಸದಸ್ಯರು ಸಭೆಯಲ್ಲಿದ್ದರು.