ಅಂಬೇಡ್ಕರ್ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ.
ಗದಗ: ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮಂತ್ರವು ಕೇವಲ ಒಂದು ವರ್ಗಕ್ಕಷ್ಟೇ ಸೀಮಿತವಲ್ಲ. ಅದು ಶೋಷಿತರ, ಮಹಿಳೆಯರ ಮತ್ತು ಇಡೀ ರಾಷ್ಟ್ರದ ಪ್ರಗತಿಯ ಮೂಲಾಧಾರ ಎಂದು ಡಿಸಿ ಪಾವಟೆ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ದೀಪಾ ಹನುಮಂತಗೌಡ್ರು ತಿಳಿಸಿದರು.ನಗರದ ಸದ್ಗುರು ಸಚ್ಚಿದಾನಂದ ಮಠದಲ್ಲಿ ದಾರಿದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆ ವತಿಯಿಂದ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್ ಅವರು ಶೂನ್ಯದಿಂದ ವಿಶ್ವದ ಜ್ಞಾನದ ಶಿಖರಕ್ಕೇರಿದವರು. ಇಂದಿನ ಪೀಳಿಗೆ ಕೇವಲ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಾಲ ಕಳೆಯುವ ಬದಲು, ಬಾಬಾಸಾಹೇಬರ ಸಂಘರ್ಷದ ಹಾದಿಯನ್ನು ಅರಿಯಬೇಕು. ಅವರು ಅಕ್ಷರವನ್ನೇ ಆಯುಧವನ್ನಾಗಿ ಮಾಡಿಕೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ ತಂದುಕೊಟ್ಟರು. ಅವರ ಬದುಕು ನಮಗೆ ನಿರಂತರ ಪ್ರೇರಣೆ ಎಂದರು.ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಮಾತನಾಡಿ, ಅಂಬೇಡ್ಕರ್ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.ಸದ್ಗುರು ಸಚ್ಚಿದಾನಂದ ಮಠದ ಸದಸ್ಯ ಸಿಕಂದರ್ ಬಡೆಖಾನವರ ಮಾತನಾಡಿ, ಅಂಬೇಡ್ಕರ್ ಅವರ ವಿಚಾರಗಳು ಧರ್ಮಾತೀತ ಮತ್ತು ಜಾತ್ಯತೀತವಾಗಿದ್ದು, ದೇಶದ ಐಕ್ಯತೆಗೆ ಅನಿವಾರ್ಯ ಎಂದರು.
ಸಂಸ್ಥೆಯ ಅಧ್ಯಕ್ಷೆ ಶಕುಂತಲಾ ಮುಳುಗುಂದ ಮಾತನಾಡಿ, ಅಂಬೇಡ್ಕರ್ ಅವರು ಹಿಂದೂ ಕೋಡ್ ಬಿಲ್ ಮೂಲಕ ಮಹಿಳೆಯರಿಗೆ ನೀಡಿದ ಹಕ್ಕುಗಳು ಸ್ತ್ರೀ ಸಬಲೀಕರಣಕ್ಕೆ ಅಡಿಪಾಯ. ದಾರಿದೀಪ ಮಹಿಳಾ ಸಂಸ್ಥೆಯು ಪ್ರತಿ ಮಹಿಳೆಯನ್ನು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಸ್ವಾತಂತ್ರ್ಯಗೊಳಿಸಲು ಅವರ ತತ್ವಗಳನ್ನೇ ಅನುಸರಿಸುತ್ತಿದೆ ಎಂದರು.ಈ ವೇಳೆ ಸುನಿಲ ಸಾತಪುತೆ, ರಾಜಶೇಖರ ಮುಳಗುಂದ, ಪ್ರೀತಿ ಶಿವಪ್ಪನಮಠ, ದೀಪಾ ಉಗಲಾಟ, ಸುಪ್ರಿಯಾ ಅಯ್ಯನಗೌಡ್ರು, ರಾಜೇಶ್ವರಿ ಕುಲಕರ್ಣಿ, ಶ್ರೀದೇವಿ ಚಪ್ಪನಮಠ, ಶೋಭಾ ಹಿರೇಮಠ, ಗೀತಾ ಹೂಗಾರ ಸೇರಿದಂತೆ ಇತರರು ಇದ್ದರು. ಸಂಸ್ಥೆಯ ಕಾರ್ಯದರ್ಶಿ ವಿಜಯಲಕ್ಷ್ಮಿ ಅಸೂಟಿ ಸ್ವಾಗತಿಸಿದರು. ಜ್ಯೋತಿ ದೇಸಾಯಿಗೌಡ್ರು ವಂದಿಸಿದರು.