ಸಂಡೂರು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೫ನೇ ಜನ್ಮದಿನಾಚರಣೆ ಹಾಗೂ ಡಾ. ಬಾಬು ಜಗಜೀವನ್‌ರಾಂ ಅವರ ೧೧೯ನೇ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಸಂಡೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಂತೆಯೇ ದೇಶದ ಆಡಳಿತ ನಡೆಯುತ್ತಿದೆ. ಅವರ ವಿಚಾರಗಳಾದ ಶಿಕ್ಷಣ, ಸಂಘಟನೆ, ಹೋರಾಟ ಹಾಗೂ ಸಮಾನತೆ ನಮ್ಮ ಮಂತ್ರಗಳಾಗಬೇಕು ಎಂದು ಸಾಹಿತಿ ಡಾ. ಹೊನ್ನಪ್ಪ ಹೊನ್ನಪ್ಪನವರ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೫ನೇ ಜನ್ಮದಿನಾಚರಣೆ ಹಾಗೂ ಡಾ. ಬಾಬು ಜಗಜೀವನ್‌ರಾಂ ಅವರ ೧೧೯ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಅಸ್ಪೃಶ್ಯತೆ ನಿರ್ಮೂಲನೆಗೆ ಶ್ರಮಿಸಬೇಕಿದೆ. ಸಮುದಾಯದವರನ್ನು ಜಾಗ್ರತಗೊಳಿಸಬೇಕಿದೆ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಜಾಗ್ರತ ನಾಗರಿಕರನ್ನಾಗಿ ರೂಪಿಸಬೇಕು ಎಂದರು.

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಉಪಾಧ್ಯಕ್ಷ ಎಚ್. ಲಕ್ಷ್ಮಣ ಕಾರ್ಯಕ್ರಮ ಉದ್ಘಾಟಿಸಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಜ್ಞಾನವೇ ಶಕ್ತಿ ಎಂದು ನಂಬಿದ್ದರು. ದಲಿತ, ಮಹಿಳೆಯರು ಹಾಗೂ ಕಾರ್ಮಿಕರ ಪರವಾಗಿ ಹೋರಾಟ ನಡೆಸಿದ ಅಂಬೇಡ್ಕರ್ ಅವರು ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದರು. ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಿದರೆ, ಅದೇ ನಾವು ಅಂಬೇಡ್ಕರ್ ಅವರಿಗೆ ನೀಡುವ ದೊಡ್ಡ ಗೌರವ ಎಂದರು.

ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಷಯ ಲಾಡ್ ಮಾತನಾಡಿ, ಎಲ್ಲರೂ ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸಬೇಕು. ಸಂವಿಧಾನವನ್ನು ಓದಬೇಕು ಎಂದು ಹೇಳಿದರು.

ತಹಸೀಲ್ದಾರ್ ಜಿ. ಅನಿಲ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್‌ರಾಮ್ ಅವರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಲಾತಂಡಗಳೊಂದಿಗೆ ಭವ್ಯವಾಗಿ ಮೆರವಣಿಗೆ ಮಾಡಲಾಯಿತು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್.ಕೆ. ವೆಂಕಟೇಶ್ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಗೂಳೆಪ್ಪ ಕಾರ್ಯಕ್ರಮ ನಿರೂಪಿಸಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಮಡಗಿನ ಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಸರ್ಕಲ್ ಇನ್‌ಸ್ಪೆಕ್ಟರ್ ಬಿ. ಮಹೇಶ್‌ಗೌಡ, ಪುರಸಭೆ ಮುಖ್ಯಾಧಿಕಾರಿ ಬಿ. ವಿನಯ್‌ಕುಮಾರ್‌ಗೌಡ, ಸಿಡಿಪಿಒ ನಾಗರಾಜ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್. ನೂರುದ್ದೀನ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಣ್ಣ ಯಳವಾರ, ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ. ಶಿವಲಿಂಗಪ್ಪ, ಅಖಿಲ ಕರ್ನಾಟಕ ಆದಿ ಜಾಂಬವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಐಹೊಳೆ, ಮುಖಂಡರಾದ ಡಿ. ಕೃಷ್ಣಪ್ಪ, ಎಚ್.ಬಿ. ತಿಪ್ಪೇಸ್ವಾಮಿ, ಹೊಸಳ್ಳಿ ತಾಯಪ್ಪ, ಆರ್.ಕೆ. ಹೆಗಡೆ, ಎಚ್. ಮಲಿಯಪ್ಪ, ಕೆ. ದೇವದಾಸ್, ಎಲ್.ಎಚ್. ಶಿವಕುಮಾರ್, ಮಲ್ಲೇಶ್ ಕಮ್ಮತ್ತೂರು, ದಾದಾ ಖಲಂದರ್, ಎಂ.ಎಲ್.ಕೆ. ನಾಯ್ಡು, ಸತೀಶ್ ಹೆಗಡೆ, ರಾಜೇಶ್ ಹೆಗಡೆ, ಮರಿಸ್ವಾಮಿ, ಎಲ್. ಪಂಪಾಪತಿ, ಹನುಮಂತರೆಡ್ಡಿ, ಕುಮಾರಸ್ವಾಮಿ ಉಪಸ್ಥಿತರಿದ್ದರು.