ಕನ್ನಡವನ್ನು ಕೇವಲ ಅಭಿಮಾನದ ಭಾಷೆಯಾಗಿ ಉಳಿಸದೆ, ಓದು, ಬರಹ, ಮಾತುಕತೆ ಸೇರಿದಂತೆ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಬಳಸಬೇಕು.
ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ-೨೦೨೬ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಕುಮಟಾಕನ್ನಡವನ್ನು ಕೇವಲ ಅಭಿಮಾನದ ಭಾಷೆಯಾಗಿ ಉಳಿಸದೆ, ಓದು, ಬರಹ, ಮಾತುಕತೆ ಸೇರಿದಂತೆ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಬಳಸಬೇಕು. ಕನ್ನಡದ ಕಂಪನ್ನು ನಾಡಿನಾದ್ಯಂತ ಪಸರಿಸಲು ಪ್ರತಿಯೊಬ್ಬ ಕನ್ನಡಿಗನೂ ಶ್ರಮಿಸಬೇಕು. ಮುಂದಿನ ಪೀಳಿಗೆಗೆ ಕನ್ನಡದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪರಿಚಯಿಸುವುದು ಎಲ್ಲರ ಜವಾಬ್ದಾರಿ ಎಂದು ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಹೇಳಿದರು.ನಾದಶ್ರೀ ಕಲಾಕೇಂದ್ರದಲ್ಲಿ ದಿ. ಎನ್.ಆರ್.ನಾಯಕ ಸ್ಮರಣಾರ್ಥ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ೨೨ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ-೨೦೨೬ ಉದ್ಘಾಟಿಸಿ ಮಾತನಾಡಿದರು. ಕನ್ನಡಕ್ಕಾಗಿ ಪರಿಷತ್ತಿನಿಂದ ಕೈಗೊಂಡಿರುವ ವಿವಿಧ ಚಟುವಟಿಕೆಗಳನ್ನು ವಿವರಿಸಿದ ಅವರು, ಮುಂದೆಯೂ ಹಲವು ಕನ್ನಡಪರ ಕಾರ್ಯಯೋಜನೆ ಹಮ್ಮಿಕೊಳ್ಳಲಾಗುವುದು ಎಂದರು.
ಸಮ್ಮೇಳನಾಧ್ಯಕ್ಷ ಮೈಸೂರಿನ ಕವಿ ಡಾ. ಕಾ. ರಾಮೇಶ್ವರಪ್ಪ (ಸಿರಿಗಂಧ) ಮಾತನಾಡಿ, ಸಾಹಿತ್ಯ ಮತ್ತು ಸಂಸ್ಕೃತಿ ಜನಮನಗಳನ್ನು ಬೆಸೆಯುವ ಸೇತುವೆಗಳಾಗಿವೆ. ಕನ್ನಡ ಸಂಸ್ಕೃತಿ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಭಾಷೆ, ಕಲೆ, ಸಾಹಿತ್ಯ, ಜಾನಪದ, ಸಂಪ್ರದಾಯ ಹಾಗೂ ಮೌಲ್ಯಗಳ ವೈವಿಧ್ಯವನ್ನು ಒಳಗೊಂಡಿದೆ ಎಂದರು. ಕನ್ನಡ ಸಂಸ್ಕೃತಿಯ ಐತಿಹಾಸಿಕ ಹಿನ್ನೆಲೆ ಹಾಗೂ ಭಾರತದ ವೈವಿಧ್ಯಮಯ ಸಂಸ್ಕೃತಿಯಲ್ಲಿ ಕನ್ನಡದ ವಿಶಿಷ್ಟ ಸ್ಥಾನವನ್ನು ವಿವರಿಸಿದರು. ಉತ್ತರ ಕನ್ನಡದ ಪ್ರಕೃತಿ, ಜೀವವೈವಿಧ್ಯ, ಜನಪದ, ಕಲೆ ಮತ್ತು ಸಾಹಿತ್ಯದ ಶ್ರೀಮಂತಿಕೆಯನ್ನು ಪ್ರಸ್ತಾಪಿಸಿದರು.ರೋಟರಿ ಕ್ಲಬ್ ಅಧ್ಯಕ್ಷ ಸಿಎ. ವಿನಾಯಕ ಹೆಗಡೆ ಮಾತನಾಡಿದರು.
ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಹಿತಿ ಪುಟ್ಟು ಕುಲಕರ್ಣಿ, ಸಾಹಿತಿ ಶ್ರೀಧರ ಬಳಗಾರ, ಪ್ರಗತಿಪರ ಕೃಷಿಕ ನಾಗರಾಜ ನಾಯ್ಕ ಕಾಗಾಲ, ಶಿವಸ್ವಾಮಿ ಎನ್.ಆರ್., ಭಾಷಾ ಪಟೇಲ್ ಹಾಗೂ ವಿಕ್ರಮ ಆರ್. ನಾಯ್ಕ ಸನ್ಮಾನಿಸಲಾಯಿತು.ಸಾಹಿತಿ ಟಿ.ಜಿ. ಭಟ್ ಹಾಸಣಗಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಪಿ.ಆರ್. ನಾಯ್ಕ, ಎನ್.ಆರ್. ಗಜು, ರವೀಂದ್ರ ಭಟ್ ಸೂರಿ, ವೆಂಕಟೇಶ್ ಬೈಲೂರು, ಎಂ.ಕೆ. ಲಕ್ಷ್ಮಿ, ಸಂಧ್ಯಾ ಭಟ್, ಗಣಪತಿ ಕೊಂಡದಕುಳಿ, ನಾಗರಾಜ ನಾಯಕ ಹಾಗೂ ಮಮತಾ ನಾಯ್ಕ ಕವನ ವಾಚಿಸಿದರು. ಸಾಹಿತಿ ರೋಹಿದಾಸ ನಾಯಕರ ಸೌಗಂಧಿಕ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು. ಸಮ್ಮೇಳನಾಧ್ಯಕ್ಷ ಡಾ. ಕಾ. ರಾಮೇಶ್ವರಪ್ಪ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಗಣಪತಿ ಭಾಗ್ವತ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಂಬಾಶ್ರೀ ನೃತ್ಯ ಮತ್ತು ಸಂಗೀತ ಶಾಲೆಯಿಂದ ನೃತ್ಯ-ಗಾಯನ, ಹಾಸ್ಯ ಕಲಾವಿದ ಮಹದೇವ ಸತ್ತಿಗೇರಿ ಅವರ ನಗೆ ಹೊನಲು, ಕುಮಟಾದ ನೃತ್ಯಸ್ವರ ಕಲಾಟ್ರಸ್ಟ್ ವತಿಯಿಂದ ವಿದುಷಿ ವಿಜೇತಾ ಭಂಡಾರಿ ನಿರ್ದೇಶನದ ನೃತ್ಯರೂಪಕ, ಮೈಸೂರಿನ ಶ್ರೀ ಸರಸ್ವತಿ ವಾದ್ಯವೃಂದದಿಂದ ಲಯ-ನಾದ-ತರಂಗ ಸಂಗೀತ ಕಾರ್ಯಕ್ರಮ ಹಾಗೂ ಸಂತೆಬೆನ್ನೂರಿನ ಚೈತನ್ಯ ಗುರುಕುಲ ವಿದ್ಯಾಸಂಸ್ಥೆಯಿಂದ ಮಲ್ಲಕಂಬ ಪ್ರದರ್ಶನ ಪ್ರಶಂಸೆಗೆ ಪಾತ್ರವಾಯಿತು.ಗಾಯಕಿ ಸಂಧ್ಯಾ ಹೆಗಡೆ ಪ್ರಾರ್ಥಿಸಿದರು. ರಾಷ್ಟ್ರೀಯ ಕನ್ನಡ ಸಮ್ಮೇಳನ ಸಮಿತಿ ಅಧ್ಯಕ್ಷ ಮಂಜುನಾಥ ಸಾಗರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರವಿ ಎಂ. ಕುಲಶೇಖರ ನಿರೂಪಿಸಿದರು. ತಾಲೂಕು ಕಸಾಪ ಅಧ್ಯಕ್ಷ ಪ್ರಮೋದ ನಾಯ್ಕ ವಂದಿಸಿದರು.