ಸಾರಾಂಶ
ಹೊಸಪೇಟೆ: ನಾಗರಿಕ ಸಮಾಜದ ಸ್ವಾತಂತ್ರ‍್ಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಮಾನವ ಹಕ್ಕುಗಳನ್ನು ಜಾರಿಗೆ ತಂದು, ದಿನಾಚರಣೆಯ ಮೂಲಕ ಅರಿವು ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ಸ್ಥಳೀಯ ನ್ಯಾಯಾಧೀಶೆ ಜೆ.ಚೈತ್ರಾ ಹೇಳಿದರು.ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಿದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬದುಕುವ ಹಕ್ಕು ಎಲ್ಲರಿಗೂ ಇದೆ. ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ವಸತಿ, ಆಹಾರ ಹಾಗೂ ಬಟ್ಟೆ. ಇವುಗಳಿಲ್ಲದೆ ಮನುಷ್ಯನ ಜೀವನವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಈ ಮೂಲ ಸವಲತ್ತುಗಳನ್ನು ಪಡೆಯುವುದು ಪ್ರತಿಯೊಬ್ಬ ಪ್ರಜೆಯ ಜನ್ಮಸಿದ್ಧ ಹಕ್ಕಾಗಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಮನುಷ್ಯನ ಈ ಮೂಲಭೂತ ಹಕ್ಕುಗಳನ್ನು ದಮನಿಸುವ ಪ್ರಯತ್ನಗಳೇ ನಡೆಯುತ್ತಿವೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇತರರ ಬದುಕಿನ ಹಕ್ಕನ್ನು ಕಸಿಯುವುದು, ಅವರಿಗೆ ಹಿಂಸೆ ನೀಡುವುದು ಇತ್ಯಾದಿ ಇದರ ವ್ಯಾಪ್ತಿಯೊಳಗೆ ಬರುತ್ತವೆ. ಯಾವುದೇ ಧರ್ಮ, ಜಾತಿ, ಲಿಂಗ, ಜನಾಂಗ, ಬಣ್ಣ, ಭಾಷೆ, ರಾಜಕೀಯ ಅಥವಾ ಇತರೆ ಅಭಿಪ್ರಾಯಗಳು, ಸ್ಥಾನಮಾನವನ್ನು ಲೆಕ್ಕಿಸದೆ ಎಲ್ಲ ಮಾನವರು ಸಮಾನರು. ಎಲ್ಲರೂ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ ಎಂಬುದನ್ನು ಸೂಚಿಸುವುದು ಮಾನವ ಹಕ್ಕುಗಳ ಮೂಲ ಉದ್ದೇಶವಾಗಿದೆ ಎಂದರು.ವ್ಯಕ್ತಿಯ ಜೀವನ, ಸ್ವಾತಂತ್ರ‍್ಯ, ಸಮಾನತೆ ಮತ್ತು ಘನತೆಗೆ ಸಂಬಂಧಿಸಿದ ಹಕ್ಕುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಜೀವಿಸುವ ಹಕ್ಕು ಸೇರಿ ವಾಕ್ ಸ್ವಾತಂತ್ರ‍್ಯ, ಆಹಾರ, ಶಿಕ್ಷಣ, ಸಾಮಾಜಿಕ ಭದ್ರತೆ, ಸಂಘಟನೆ, ರಾಷ್ಟ್ರೀಯತೆ, ರಕ್ಷಣೆ, ಆರೋಗ್ಯ, ಧಾರ್ಮಿಕ ಸ್ವಾತಂತ್ರ‍್ಯದ ಜತೆಗೆ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಜ್ಞಾನ ಮಾನವ ಹಕ್ಕುಗಳಿಂದ ಮಾತ್ರ ತಿಳಿಯಬಹುದಾಗಿದೆ ಎಂದರು.
ಈ ವೇಳೆ ಸಿವಿಲ್ ನ್ಯಾಯಾಧೀಶ ಪ್ರಶಾಂತ್ ನಾಗಲಾಪುರ, ಜಿಲ್ಲಾ ಕಾರ್ಮಿಕಾಧಿಕಾರಿ ಸೂರಪ್ಪ ಡೊಂಬರಮತ್ತೂರು, ತಹಸೀಲ್ದಾರ ಶೃತಿ ಎಂ.ಮಳ್ಳಪ್ಪಗೌಡ್ರ, ವಕೀಲರ ಸಂಘದ ಪ್ರ.ಕಾರ್ಯದರ್ಶಿ ಪಿ.ಶ್ರೀನಿವಾಸ ಮೂರ್ತಿ, ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಸಿಂಧು ಅಂಗಡಿ, ಆಹಾರ ಶಿರಸ್ತೇದಾರ ಜಿ.ಎಚ್. ರುದ್ರಪ್ಪ, ಕಾರ್ಮಿಕ ನಿರೀಕ್ಷಕರಾದ ಶಿವಶಂಕರ ಬಿ.ತಳವಾರ, ಗೋಪಾಲ್.ಬಿ.ಧೂಪದ, ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಮುಗದ ನಾಗರಾಜ ಇತರರಿದ್ದರು. ವಕೀಲ ಕಲೀಸಾಹೇಬ್ ನಿರ್ವಹಿಸಿದರು.ಹೊಸಪೇಟೆಯ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.