ಯಲಬುರ್ಗಾ ತಾಲೂಕಿನ ತೊಂಡಿಹಾಳ ಗ್ರಾಮದಲ್ಲಿ ನ. ೧೫ರಂದು ನಡೆಯಲಿರುವ ೧೪ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ವೀರಣ್ಣ ವಾಲಿ ಅವರಿಗೆ ಸೋಮವಾರ ಅಧಿಕೃತವಾಗಿ ಆಹ್ವಾನ ನೀಡಿ, ಸನ್ಮಾನಿಸಲಾಯಿತು.
ಯಲಬುರ್ಗಾ: ತಾಲೂಕಿನ ತೊಂಡಿಹಾಳ ಗ್ರಾಮದಲ್ಲಿ ನ. ೧೫ರಂದು ನಡೆಯಲಿರುವ ೧೪ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ವೀರಣ್ಣ ವಾಲಿ ಅವರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಪದಾಧಿಕಾರಿಗಳು ಸೋಮವಾರ ಕರಮುಡಿ ಗ್ರಾಮದಲ್ಲಿರುವ ಅವರ ನಿವಾಸಕ್ಕೆ ತೆರಳಿ ಅಧಿಕೃತವಾಗಿ ಆಹ್ವಾನ ನೀಡಿ ಸನ್ಮಾನಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಬಾಲದಂಡಪ್ಪ ತಳವಾರ್ ಮಾತನಾಡಿ, ತೊಂಡಿಹಾಳದಲ್ಲಿ ನಡೆಯಲಿರುವ ೧೪ನೇ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ವೀರಣ್ಣ ವಾಲಿ ಅವರನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ. ವಾಲಿ ಅವರು ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ್ದಾರೆ. ಸಾಹಿತಿಯಾಗಿ ಅನೇಕ ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ.ತಾಲೂಕಿನ ತೊಂಡಿಹಾಳ ಗ್ರಾಮದಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುತ್ತಿದ್ದು, ಕಾರ್ಯಕ್ರಮದ ಯಶಸ್ಸಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಕನ್ನಡದ ನುಡಿ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ನ. ೧೫ರಂದು ನಡೆಯುವ ಸಮ್ಮೇಳನದಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರು, ಅಧಿಕಾರಿಗಳು, ಸಾಹಿತಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸಮ್ಮೇಳನಾಧ್ಯಕ್ಷ ವೀರಣ್ಣ ವಾಲಿ ಅವರು ಆಹ್ವಾನ ಸ್ವೀಕರಿಸಿ ಮಾತನಾಡಿ, ತೊಂಡಿಹಾಳದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ತಮ್ಮನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ. ಕಸಾಪ ಹಮ್ಮಿಕೊಂಡಿರುವ ಈ ಕನ್ನಡದ ಹಬ್ಬದಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಹೇಳಿದರು.ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಬಸವರಾಜ ಬಿನ್ನಾಳ, ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ. ಧರಣಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ, ಘಟಕದ ಪದಾಧಿಕಾರಿಗಳಾದ ರೇವಣಪ್ಪ ಹಿರೇಕುರುಬರ, ಹಂಚ್ಯಾಳಪ್ಪ ತಳವಾರ, ಈಶಪ್ಪ ಮಳಗಿ, ಶೇಖರ ಗುರಾಣಿ, ಶರೀಫ ಕೊತ್ವಲ್, ಶರಣಯ್ಯ ಸರಗಣಾಚಾರ್, ಬಸವರಾಜ ಉಳ್ಳಾಗಡ್ಡಿ, ಗಾಳೇಪ್ಪ ಬಂಡಿಹಾಳ, ಪೀರಾಸಾಬ ದಫೇದಾರ್, ಹೋಬಳಿ ಘಟಕದ ಅಧ್ಯಕ್ಷ ಮಹಾಂತೇಶ ಛಲವಾದಿ, ಮೆಹಬೂಬ್ ಉಮಚಗಿ, ಮುಖಂಡರಾದ ಯಲ್ಲಪ್ಪ ಹಡಗಲಿ, ಶರಣಪ್ಪ ತಳವಾರ, ನಾಗಪ್ಪ ಬೇಟಗೇರ, ಶಿವು ರಾಜೂರು, ದೇವಪ್ಪ ಮುಗಳಿ, ಪರಮೇಶ ಚಿಂತಾಮಣಿ, ಇಂದ್ರಕುಮಾರ್ ತಳವಾರ, ಬಸವರಾಜ ಕರಮುಡಿ, ಗೌಡಪ್ಪ ಬಲಕುಂದಿ, ಈಶ್ವರಯ್ಯ ಇದ್ದರು.