ಸಾರಾಂಶ
ತಾಲೂಕು ವ್ಯಾಪ್ತಿಯಲ್ಲಿ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸುಮಾರು 43 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಾಣಕ್ಕೆ ಎಲ್ಲರ ಸಹಕಾರ ಇರಬೇಕು ಎಂದು ಸಚಿವ ಡಿ. ಸುಧಾಕರ್ ಹೇಳಿದರು.
ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕು ವ್ಯಾಪ್ತಿಯಲ್ಲಿ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸುಮಾರು 43 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಾಣಕ್ಕೆ ಎಲ್ಲರ ಸಹಕಾರ ಇರಬೇಕು ಎಂದು ಸಚಿವ ಡಿ. ಸುಧಾಕರ್ ಹೇಳಿದರು.ನಗರದ ನಗರಸಭೆ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸೋಮವಾರ ಕರೆದಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ನಿರ್ದೇಶನದಂತೆ ಬೀದರ್ ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ, ಹಿರಿಯೂರು ಭಾಗದಲ್ಲಿ ಮಾನವ ಸರಪಳಿಯು ಹಾದು ಹೋಗಲಿದ್ದು ತಾಲೂಕು ವ್ಯಾಪ್ತಿಯ ಗಡಿಭಾಗ ಹೆಗ್ಗೆರೆಯಿಂದ ಆರಂಭವಾಗಿ ಮತ್ತೊಂದು ಗಡಿಭಾಗ ಜೆಜೆ ಹಳ್ಳಿ ಉಜ್ಜಿನಕುಂಟೆಯವರೆಗೆ ದಿನಾಂಕ ಸೆ.15 ರಂದು ಬೆಳಿಗ್ಗೆ 8:30 ಗಂಟೆಗೆ ಮಾನವ ಸರಪಳಿಯನ್ನು ನಿರ್ಮಿಸಲು ಸೂಚಿಸಲಾಗಿದೆ ಎಂದರು.ಎಲ್ಲಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು, ಜನಪ್ರತಿನಿದಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಪರಿಶಿಷ್ಟ ಜಾತಿ, ವರ್ಗದ ಹಾಗೂ ಇತರೆ ವರ್ಗದ ಮುಖಂಡರುಗಳು, ಮಾಧ್ಯಮದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮಾತನಾಡಿ, ಐದು ಕಿ.ಮೀಗೆ ಒಬ್ಬರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪ್ರತಿ ನೂರು ಮೀಟರ್ ಗೆ ಒಬ್ಬರಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಬೇಕೆಂದು ಸೂಚಿಸಿದರು.ಈ ಸಂದರ್ಭದಲ್ಲಿ ಆದಿಜಾಂಭವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್ ಮಂಜುನಾಥ್, ಜಿಲ್ಲಾ ಪಂಚಾಯ್ತಿ ಸಿಇಓ ಜೆ. ಸೋಮಶೇಖರ್, ಉಪ ವಿಭಾಗಾಧಿಕಾರಿ ಕಾರ್ತಿಕ್, ಸಮಾಜ ಕಲ್ಯಾಣ ಇಲಾಖೆ ಜೆಡಿ. ಜಗದೀಶ್ ಹೆಬ್ಬಾಳಿ, ತಹಸೀಲ್ದಾರ್ ರಾಜೇಶ್ ಕುಮಾರ್ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.