ಪ್ರತಿಯೊಬ್ಬರೂ ಒಳ್ಳೆಯ ಕಾರ್ಯಗಳತ್ತ ಗಮನಹರಿಸಿ: ಮಲ್ಲಿಕಾರ್ಜುನ ತೊದಲಬಾಗಿ

| Published : Oct 08 2024, 01:10 AM IST

ಪ್ರತಿಯೊಬ್ಬರೂ ಒಳ್ಳೆಯ ಕಾರ್ಯಗಳತ್ತ ಗಮನಹರಿಸಿ: ಮಲ್ಲಿಕಾರ್ಜುನ ತೊದಲಬಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲೆಯಲ್ಲಿ ಅಂದ ಚೆಂದದ ವಾತಾವರಣ ನಿರ್ಮಾಣಗೊಳಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕೈ ಜೋಡಿಸಲಾಗುವುದು.

ಪರಿಸರ ಪ್ರೇಮ ತಂಡದಿಂದ ಶಾಲೆಗೆ ಬಣ್ಣ ಹಚ್ಚುವ ಕಾರ್ಯಕ್ರಮಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ವಿದ್ಯಾರ್ಥಿಗಳು ಜೀವನದಲ್ಲಿ ಸಕಾರಾತ್ಮಕ ಚಿಂತನೆ ಅಳವಡಿಸಿಕೊಂಡು ಒಳ್ಳೆಯ ಕಾರ್ಯ ಮಾಡಿದಾಗ ಯಶಸ್ವಿ ಕಾಣಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹಾಗೂ ಪರಿಸರ ಪ್ರೇಮ ತಂಡದ ಸಂಸ್ಥಾಪಕ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು.

ತಾಲೂಕಿನ ಬೋದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಪ್ರೇಮ ತಂಡದಿಂದ ಹಮ್ಮಿಕೊಂಡಿದ್ದ ಶಾಲೆಗೆ ಬಣ್ಣ ಹಚ್ಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಸಿ ಬೆಳೆಸುವ ಮೂಲಕ ಸಾಲು ಮರದ ತಿಮ್ಮಕ್ಕ ನಾಡಿಗೆ ಹೆಸರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಅದೆಷ್ಟೋ ಶಾಲೆಗಳು ಸುಣ್ಣ ಬಣ್ಣ ಕಾಣದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸರ ಪ್ರೇಮ ತಂಡ ಪ್ರತಿ ವಾರಕ್ಕೊಮ್ಮೆ ಶಾಲೆಗೆ ಭೇಟಿ ನೀಡುವ ಮೂಲಕ ಮಕ್ಕಳಿಗೆ ಉತ್ತಮ ಪರಿಸರ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಜಿಲ್ಲೆ ಸೇರಿದಂತೆ ನೆರೆಯ ಶಿವಮೊಗ್ಗ, ಧಾರವಾಡ, ಬಾಗಲಕೋಟೆ ಹಾಗೂ ಇತರೆಡೆ ಸುಮಾರು ೨೨೨ ಶಾಲೆಯಲ್ಲಿ ಈಗಾಗಲೇ ಇಂತಹ ಕಾರ್ಯ ಮಾಡಲಾಗಿದೆ. ಶಾಲೆಯಲ್ಲಿ ಅಂದ ಚೆಂದದ ವಾತಾವರಣ ನಿರ್ಮಾಣಗೊಳಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕೈ ಜೋಡಿಸಲಾಗುವುದು ಎಂದು ಹೇಳಿದರು.

ಕೊಪ್ಪಳ ತಾಲೂಕಿನ ಕಲ್ ತಾವರಗೇರಾ ಗ್ರಾಪಂ ಪಿಡಿಒ ಯಮನೂರಪ್ಪ ಕಬ್ಬಣ್ಣನವರ್ ಮಾತನಾಡಿ, ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಪರಿಸರ ಪ್ರೇಮ ತಂಡವು ಶಾಲೆಗಳ ಅಂದ ಹೆಚ್ಚಿಸಿ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.

ಮುಖ್ಯ ಶಿಕ್ಷಕ ಧರ್ಮಪ್ಪ ಎಸ್. ಬಿಂಗಿ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶಿವಶರಣಪ್ಪ ಕುರ್ನಾಳ, ಶಿಕ್ಷಕ ಪ್ರಭಾಕರ ನಿಡಶೇಸಿ, ಪರಿಸರ ಪ್ರೇಮ ತಂಡದ ಜಿಲ್ಲಾಧ್ಯಕ್ಷ ರಾಮಣ್ಣ ಬಂಡಿಹಾಳ, ಗ್ರಾಪಂ ಕರವಸೂಲಿಗಾರ ರಾಮಣ್ಣ ಹೊಟ್ಟಿ, ಮುಖಂಡ ಅಜರುದ್ದೀನ್ ಕುಷ್ಟಗಿ ಹಾಗೂ ಶಾಲೆಯ ವಿದ್ಯಾರ್ಥಿಗಳು, ತಂಡದ ಬಳಗದವರು, ಗ್ರಾಮಸ್ಥರು ಇದ್ದರು.