ರಕ್ಷಾ ಬಂಧನವು ಸಹೋದರ ಸಹೋದರಿಯರ ಪ್ರೀತಿ, ಮಮತೆ, ವಿಶ್ವಾಸ ಮತ್ತು ಬಾಂಧವ್ಯವನ್ನು ಪ್ರತಿಬಿಂಬಿಸುವ ಪವಿತ್ರ ಹಬ್ಬವಾಗಿದೆ.
ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಬಿಕೆಎಸ್ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಎ.ಅಪ್ಪಾಜಿಗೌಡ
ಕನ್ನಡಪ್ರಭ ವಾರ್ತೆ ಮುಳಬಾಗಿಲುಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ರಕ್ಷಾ ಬಂಧನಕ್ಕೆ ವೈಜ್ಞಾನಿಕ, ಪೌರಾಣಿಕ, ಐತಿಹಾಸಿಕ ಹಾಗೂ ಆಧ್ಯಾತ್ಮಿಕ ಮಹತ್ವವಿದೆ. ಹಬ್ಬದ ಆಶಯವನ್ನು ಅರಿತು ಪ್ರತಿಯೊಬ್ಬರೂ ಪರಸ್ಪರ ಸಹೋದರತ್ವದ ಮನೋಭಾವದಿಂದ ಸಹಬಾಳ್ವೆ ನಡೆಸಿದರೆ ಸಮಾಜದಲ್ಲಿ ಮನಸ್ತಾಪಗಳು ಕಡಿಮೆಯಾಗಿ ಶಾಂತಿ, ನೆಮ್ಮದಿ ಹಾಗೂ ಸುಖಮಯ ಜೀವನ ಸಾಧ್ಯ ಎಂದು ಬಿಕೆಎಸ್ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಎ.ಅಪ್ಪಾಜಿಗೌಡ ಹೇಳಿದರು.
ನಗರದ ಭಾರತೀಯ ಕಿಸಾನ್ ಸಂಘದ ಕಾರ್ಯಾಲಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.ರಕ್ಷಾ ಬಂಧನವು ಸಹೋದರ ಸಹೋದರಿಯರ ಪ್ರೀತಿ, ಮಮತೆ, ವಿಶ್ವಾಸ ಮತ್ತು ಬಾಂಧವ್ಯವನ್ನು ಪ್ರತಿಬಿಂಬಿಸುವ ಪವಿತ್ರ ಹಬ್ಬವಾಗಿದೆ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸಹೋದರತ್ವದ ಭಾವನೆ ಬೆಳೆಸುವ ಮೂಲಕ ಸಮಾಜದಲ್ಲಿ ಸೌಹಾರ್ದತೆ ಮೂಡಿಸಲು ಈ ಆಚರಣೆ ಸಹಕಾರಿಯಾಗಿದೆ ಎಂದರು.
ಆರ್‌ಎಸ್‌ಎಸ್‌ನ ಗ್ರಾಮ ವಿಕಾಸ ಪ್ರಮುಖ್ ಹಾಗೂ ನಿವೃತ್ತ ಶಿಕ್ಷಕ ಕದ್ರಿಪುರ ನಾರಾಯಣಪ್ಪ ಮಾತನಾಡಿ, ರಾಖಿ ಕೇವಲ ದಾರವಲ್ಲ, ಅದು ಪ್ರೀತಿ, ವಿಶ್ವಾಸ, ಕಾಳಜಿ ಮತ್ತು ಕುಟುಂಬದ ಬಾಂಧವ್ಯದ ಸಂಕೇತವಾಗಿದೆ. ಪರಿಸರ ಸಂರಕ್ಷಣೆ ಸೇರಿದಂತೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಆಶಯವೂ ಇದರಲ್ಲಿದೆ, ಜಾತಿ, ಧರ್ಮ ಹಾಗೂ ಭೇದಭಾವಗಳನ್ನು ಮೀರಿ ಪರಸ್ಪರ ಪ್ರೀತಿ ಮತ್ತು ಸಹೋದರತ್ವ ಬೆಳೆಸುವ ಸಂದೇಶವನ್ನು ರಕ್ಷಾ ಬಂಧನ ಸಾರುತ್ತದೆ ಎಂದರು.ಬಿಕೆಎಸ್ ಜಿಲ್ಲಾ ಮಹಿಳಾ ಪ್ರಮುಖ ಬೀಮಾಪುರ ಬಿ.ಎಸ್.ಶಶಿಕಲಾ ಮಾತನಾಡಿ, ಪ್ರತಿಯೊಬ್ಬರನ್ನೂ ಅಣ್ಣ-ತಮ್ಮ, ಅಕ್ಕ?ತಂಗಿಯರಂತೆ ಕಾಣುವ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು, ರಾಖಿ ಕಟ್ಟುವ ಮೂಲಕ ಸಹೋದರಿಯರು ಸಹೋದರನ ಆರೋಗ್ಯ, ಸಂತೋಷ ಮತ್ತು ದೀರ್ಘಾಯುಷ್ಯಕ್ಕಾಗಿ ಹಾರೈಸುತ್ತಾರೆ. ಸಹೋದರರು ಸಹೋದರಿಯರ ಗೌರವ, ಸುರಕ್ಷತೆ ಮತ್ತು ಬೆಂಬಲಕ್ಕೆ ನಿಲ್ಲುವ ಸಂಕಲ್ಪ ಮಾಡುವುದು ಭಾರತೀಯ ಸಂಸ್ಕೃತಿಯ ವಿಶೇಷತೆ ಎಂದರು.
ಬಿಕೆಎಸ್ ಜಿಲ್ಲಾ ಖಜಾಂಚಿ ವಕೀಲ ವಿ. ಜಯಪ್ಪ, ನಗರ ಘಟಕದ ಅಧ್ಯಕ್ಷ ಎಂ.ಎನ್. ಧನಂಜಯ, ತಾಲೂಕು ಖಜಾಂಚಿ ಕೆ.ಆರ್. ಕೃಷ್ಣಪ್ಪ, ಕಾರ್ಯದರ್ಶಿ ಹೆಚ್. ಗೊಲ್ಲಹಳ್ಳಿ ರಮೇಶ್, ರಾಜ್ಯ ಮಾವು ಮಂಡಳಿ ಮಾಜಿ ಅಧ್ಯಕ್ಷ ಎಂ.ಕೆ. ವಾಸುದೇವ್, ನಿವೃತ್ತ ಪ್ರಾಂಶುಪಾಲ ಶ್ರೀನಿವಾಸಯ್ಯ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎಂ.ಎಸ್. ಗೋವಿಂದರಾಂ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಮಂಡಿಕಲ್ಲು ಎಂ.ಎಸ್. ಮಂಜುನಾಥ್, ಉದ್ಯಮಿಗಳಾದ ಶ್ಯಾಮಲಾ ಬಾಲನ್, ದಿನೇಶ್, ವಕೀಲರಾದ ವೈ. ಗೊಲ್ಲಹಳ್ಳಿ ವೆಂಕಟೇಶ್, ಹೊನ್ನೇಗೌಡ, ಜಯರಾಮ್, ಮುನಿರತ್ನಂ, ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಮುಖ್ಯಸ್ಥೆ ಗೀತಾ, ನಿವೃತ್ತ ಶಿಕ್ಷಕರಾದ ಕೆಂಬೋಡಿ ನಾಗರಾಜ್, ನಲ್ಲೂರು ಸೋಮಪ್ಪ, ಮುಖಂಡರಾದ ಕೆ.ಎಚ್. ನಾಗರಾಜ್, ಪ್ರಕಾಶ್, ಭಾಸ್ಕರ್, ಪ್ರೇಮಾವತಿ, ಡಿವಿಜಿ ಕನ್ನಡ ಸಂಘದ ಅಧ್ಯಕ್ಷ ಕೆ. ಮಧುಸೂದನ್, ಮುಳಬಾಗಿಲು ಫುಡ್ ಬ್ಯಾಂಕ್ ಮುಖ್ಯಸ್ಥ ಕೃಷ್ಣಮೂರ್ತಿ ಇದ್ದರು.