ಸಾರಾಂಶ
ಹೊಳೆಹೊನ್ನೂರು: ತುಳಿತಕ್ಕೆ ಒಳಗಾದ ಸಮುದಾಯಗಳು ಸಾಮಾಜಿಕ ಮತ್ತು ಆರ್ಥಿಕವಾಗಿ ಬದಲಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಡಾ.ಬಸವಮೂರ್ತಿ ಮಾದಾರ ಚೆನ್ನಯ್ಯ ಶ್ರೀಗಳು ಹೇಳಿದರು.
ಇಲ್ಲಿನ ಅಂಬೇಡ್ಕರ್ ನಗರದಲ್ಲಿ ದುರ್ಗಮ್ಮ ದೇವಿಯ ನೂತನ ಶಿಲಾವಿಗ್ರಹದ ಪ್ರಾಣಾಪ್ರತಿಷ್ಠಾಪನೆ, ಗರುಡಗಂಭ ಸ್ಥಾಪನೆ ಮತ್ತು ಮಾತಂಗೆಮ್ಮ ದೇವಸ್ಥಾನದ ಕಳಸಾರೋಹಣ ಹಾಗೂ ಕುಂಬಾಭಿಷೇಕ ಕಾರ್ಯಕ್ರಮದ ದಿವ್ಯ ಸಾನ್ನಿದ್ಯ ವಹಿಸಿ ಆಶಿರ್ವಚನ ನೀಡಿದರು.ಸಮುದಾಯದ ಏಳಿಗೆಯ ದೃಷ್ಟಿಯಿಂದ ಮತ್ತಷ್ಟು ಮುಖಂಡರು ಸಮಾಜದ ಮುನ್ನಲೆಗೆ ಬರಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಹುತೇಕ ದೇವಸ್ಥಾನಗಳು ಇನ್ನೂ ತಗಡಿನ ಶೆಡ್‍ಗಳಲಿವೆ. ನಾವುಗಳು ಬದಲಾಗಬೇಕು ಎನ್ನುವುದನ್ನು ಬಿಟ್ಟು ಬದಲಾಗುವುದರತ್ತ ಚಿತ್ತ ಹರಿಸಬೇಕು. ಕಾಯಕ ನಿಷ್ಠೆ ಗಟ್ಟಿಯಾಗಿರುವ ಸಮುದಾಯಕ್ಕೆ ಜಾತಿ ತೊಡಕಾಗಬಾರದು ಎಂದರು.
ಜಾತಿ ವ್ಯವಸ್ಥೆ ಧರ್ಮ ಆಚರಣೆಗೆ ಅಡ್ಡಿ ನೀಡುವುದಿಲ್ಲ. ಸಮುದಾಯದ ಮಾತೆಯರಲ್ಲಿ ಜಾಗೃತಿ ಹೆಚ್ಚಾಗಬೇಕು. ಸಾವಿರಾರೂ ಜಾತಿಗಳ ಮಧ್ಯೆ ಬಾಳಿ ಬದಕಲು ಹಲವಾರು ಸವಾಲುಗಳಿವೆ. ಹಿಂದುಳಿದ ಸಮುದಾಯಗಳು ಮುಖ್ಯವಾಹಿನಿಗೆ ಬರಲು ಸಂವಿಧಾನಹಕ್ಕು ಮುಕ್ತವಾಗಿವೆ. ಸಮಾನತೆ ಸೂತ್ರದ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು.ಸಮಾಜದ ಪ್ರತಿಯೊಂದು ಮನೆಯಗಳಲ್ಲೂ ಒಂದಿಬ್ಬರು ಸರ್ಕಾರಿ ನೌಕರಿ ಗಿಟ್ಟಿಸುವತ್ತ ಚಿತ್ತ ಹರಿಸಬೇಕಿದೆ. ಪ್ರತಿಯೊಬ್ಬರು ಜಾತಿ ವ್ಯವಸ್ಥೆ ಮೀರಿ ಮುನ್ನಡೆಯಬೇಕು. ನಮ್ಮ ಬದುಕನ್ನು ನಾವೇ ಬದಲಾಯಿಸಿಕೊಳ್ಳಬೇಕು. ನಮ್ಮಿಂದ ಮಾತ್ರ ನಮ್ಮ ಜೀವನ ಪಥ ಬದಲಿಸಲು ಸಾಧ್ಯ ಎಂದು ಹೇಳಿದರು.ಕೂಲಿನಾಲಿಗಳಿಂದ ಗಳಿಸುವುದು ಉಳಿಸಿ ಕಾಪಾಡಿಕೊಳ್ಳುವುದನ್ನು ಕಲಿತುಕೊಳ್ಳಬೇಕು. ದುಶ್ಚಟಗಳಿಗೆ ದಾಸರಾಗಿ ಜೀವನ ಹಾಳುಗೆಡವಿಕೊಳ್ಳುವುದು ತಪ್ಪಬೇಕು. ಆದಾಯ ಸದ್ಬಳಕೆಯಾಗಬೇಕು. ಐಶಾರಾಮಿ ಮಾರಿ ಜಾತ್ರಾ ಮಹೋತ್ಸವಗಳನ್ನು ಸರಳವಾಗಿ ಸಾಂಕೇತಿಕವಾಗಿ ಆಚರಿಸಿದರೆ ಸಾಲಸೋಲ ಮಾಡುವುದು ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಆರ್ಶಿವಚನ ನೀಡಿ, ಧಾರ್ಮಿಕ ಕಾರ್ಯಗಳಿಗೆ ಕೈ ಜೋಡಿಸುವುದು ಭಕ್ತಿ ಎನ್ನಿಸುತ್ತದೆ. ಇಲ್ಲಿಯವರೆಗೆ ಹಿಂದೂಳಿದ ಸಮಾಜವನ್ನು ಬಳಸಿಕೊಂಡು ಬೆಳೆ ಬೆಯಿಸಿಕೊಂಡವರು ಸಮುದಾಯಗಳನ್ನು ಬೆಳೆಸಲು ಆಸಕ್ತಿ ತೋರಲಿಲ್ಲ. ಯುವ ಶಕ್ತಿ ಸುಶಿಕ್ಷಿತರಾದರೆ ಸಮಾಜ ಮುನ್ನಲೆಗೆ ಬರುತ್ತದೆ. ನಾವೇ ಮಾಡಿಕೊಂಡ ಯಡುವಟ್ಟುಗಳಂದಾಗಿ ನಾವಿನ್ನು ಹಿಂದೂಳಿಯುತ್ತಿದೆವೆ ಎಂದ ಅವರು, ಬೆವರಳಿಸಿ ಗಳಿಸಿದ ದುಡಿಮೆಯ ಹಣ ಸದ್ಬಳಕೆಯಾಗಬೇಕು. ಬಹುಮುಖ್ಯವಾಗಿ ಯುವಕರು ದುರಾಭ್ಯಾಸಗಳಿಂದ ದೂರಾಗಬೇಕು ಎಂದು ಹೇಳಿದರು.ಮುಖಂಡ ತಿಮ್ಮಲ್ಲಾಪುರ ಲೊಕೇಶ್ ಮಾತನಾಡಿ, ಒಗ್ಗಟಿನಿಂದ ಗುರಿ ಸಾಧನೆ ಮಾಡುವುದರಲ್ಲಿ ನಮ್ಮ ಸಮಾಜದವರು ಎತ್ತಿದ ಕೈ. ಆಚಾರ ವಿಚಾರಗಳಿಗೆ ಮನ್ನಣೆ ನೀಡುವ ಸಮಾಜ ಏಳಿಗೆಯಾಗುವುದರಲ್ಲಿ ಎರಡು ಮಾತಿಲ್ಲ. ಭಕ್ತಿ ಮೂಢ ನಂಬಿಕೆಯಾಗಿ ಬದಲಾಗುವುದು ತಪ್ಪಬೇಕು. ದೇವೈರಾಧನೆಗೆ ಪ್ರಶಾಸ್ತ್ಯ ನೀಡಬೇಕು. ಪದ್ಧತಿಗಳ ಆಚರಣೆಗಳು ಮುನ್ನಲೆಗೆ ಬರಬೇಕು ಎಂದ ಅವರು, ದೇವಸ್ಥಾನಗಳು ಅಭಿವೃದ್ಧಿಯಾದರೆ ಗ್ರಾಮಗಳು ಅಭಿವೃದ್ಧಿಯಾಗುವುದರಲ್ಲಿ ಎರಡು ಮಾತಿಲ್ಲ. ನಿಯಮಿತವಾಗಿ ಧಾರ್ಮಿಕ ಚಟುವಟಿಕೆಗಳು ನಡೆಯಬೇಕು ಎಂದರು.
ಸಮೀತಿಯ ಅಧ್ಯಕ್ಷ ಹೊನ್ನೂರಪ್ಪ, ಬ್ಲಾಕ್ ಕಾಂಗ್ರೆಸ್ ಸಿ.ಹನುಮಂತು, ಮಂಡಲ ಬಿಜೆಪಿ ಅಧ್ಯಕ್ಷ ಮಲೇಶಪ್ಪ, ಮುಖಂಡರಾದ ಈ.ರಮೇಶ್, ಸಿದ್ದಪ್ಪ, ಚಂದ್ರಪ್ಪ, ಶ್ರೀನಿವಾಸ್, ರಾಜಪ್ಪ, ವೆಂಕಟೇಶ್, ವೀರಭದ್ರಪ್ಪ, ಕೃಷ್ಣಪ್ಪ, ಮನೋಜ್‍ಕುಮಾರ್ ಇತರರಿದ್ದರು.