ಹಾವೇರಿ: ಶಿಕ್ಷಕ ವೃತ್ತಿ ಶ್ರೇಷ್ಠವಾದುದು. ಶಿಕ್ಷಣದಲ್ಲಿ ಕಾಲಕಾಲಕ್ಕೆ ಪರಿವರ್ತನೆಗಳು ಆಗುತ್ತಿದ್ದು, ಶಿಕ್ಷಕರು ಆ ಬದಲಾವಣೆಗೆ ಹೊಂದಿಕೊಂಡು, ಹೊಸ ಹೊಸ ಸವಾಲು ಸ್ವೀಕರಿಸಿ, ಸಮರ್ಥವಾಗಿ ಎದುರಿಸುವ ಮೂಲಕ ಮುಂಬರುವ ಶೈಕ್ಷಣಿಕ ವರ್ಷದಲ್ಲೂ ಮಿಶನ್-100 ಮಾದರಿಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಎಲ್ಲರೂ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ನಗರದ ಜಿಲ್ಲಾ ಗುರುಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ -1 ಫಲಿತಾಂಶ ವಿಶ್ಲೇಷಣೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಹೀಗೆ 249 ಶಾಲೆಗಳಲ್ಲಿ ಶೇ. 100ರಷ್ಟು ಫಲಿತಾಂಶ ಬಂದಿದೆ. ಶೈಕ್ಷಣಿಕವಾಗಿ ಪ್ರತಿ ಬಾರಿ ಶಿವಮೊಗ್ಗ, ದಾವಣಗೆರೆ, ಬೆಳಗಾವಿ, ಧಾರವಾಡ ಜಿಲ್ಲೆಗಳು ಮುಂದೆ ಇರುತ್ತಿದ್ದವು. ಆದರೆ ಈ ಸಲ ಹಾವೇರಿ ಈ ಎಲ್ಲ ಜಿಲ್ಲೆಗಳನ್ನು ಹಿಂದಿಕ್ಕಿ ಏಳನೇ ಸ್ಥಾನದಲ್ಲಿ ಬಂದಿದ್ದು, ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಸರ್ಕಾರಿ ಶಾಲೆ ಶೇ. 97.49ರಷ್ಟು, ಅನುದಾನಿತ ಶಾಲೆಗಳು ಶೇ. 95.73 ಹಾಗೂ ಅನುದಾನ ರಹಿತ ಶಾಲೆ ಶೇ. 97.60ರಷ್ಟು ಫಲಿತಾಂಶ ಪಡೆದಿವೆ. ಉರ್ದು ಮಾಧ್ಯಮದಲ್ಲಿ ಶೇ. 92.79, ಕನ್ನಡ ಮಾಧ್ಯಮದಲ್ಲಿ ಶೇ. 96.92 ಹಾಗೂ ಇಂಗ್ಲಿಷ್ ಮಾಧ್ಯಮ ಶೇ. 98.04ರಷ್ಟು ಮಾಧ್ಯಮವಾರು ಉತ್ತಮ ಫಲಿತಾಂಶ ಬಂದಿದೆ. ಸಮಾಜ ಶಿಕ್ಷಕರ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು, ಶಿಕ್ಷಕರು ಕೂಡ ಒಳ್ಳೆಯ ಫಲಿತಾಂಶ ತಂದುಕೊಡುವಲ್ಲಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಬೇಕು ಎಂದರು.

ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಕೊಟ್ಟಂತೆ, ಶಿಕ್ಷಣ ಕ್ಷೇತ್ರದಲ್ಲೂ ಕೂಡ ಅಷ್ಟ (8) ಗ್ಯಾರಂಟಿ ಕೊಡುವುದಾಗಿ ತಿಳಿಸಿದೆ. ಶಿಕ್ಷಕರ ಹುದ್ದೆ ಭರ್ತಿ, ವಿಷಯವಾರು ಶಿಕ್ಷಕರ ನೇಮಕ, ಪೋಷಕರಿಗೆ ಮಾಧ್ಯಮ ಆಯ್ಕೆ, ಕೆಪಿಎಸ್ ಶಾಲೆ ಮಕ್ಕಳಿಗೆ ಉಚಿತ ವಾಹನ ಸೌಲಭ್ಯ, ಕಂಪ್ಯೂಟರ್ ಆಧಾರಿತ ಎಐ ಶಿಕ್ಷಣ, ಪೋಷಕರ ಕಡ್ಡಾಯ ಸಭೆ, ಶಿಕ್ಷಕರ ಮೇಲಿನ ಹೊರೆ ಕಡಿಮೆ ಮಾಡಿ ಬೋಧನೆಗೆ ಮಾತ್ರ ಸೀಮಿತ, ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆ ಮಾಡುವುದಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಮಾತನಾಡಿ, ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಿ, ಉತ್ತಮವಾಗಿ ಪರೀಕ್ಷೆ ಬರೆಯಲು ಪ್ರೇರೇಪಣೆ ನೀಡಬೇಕು. ಹಾಗಂತ ಅಂಕ ಗಳಿಸುವುದೇ ನಮ್ಮ ಧ್ಯೇಯವಾಗಬಾರದು. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ ಎಂದರು.

ಡಿಡಿಪಿಐ ಮೋಹನ್ ದಂಡಿನ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಉಪ ಕಾರ್ಯದರ್ಶಿ ಡಾ. ಪುನೀತ್ ಆರ್. ಮಾತನಾಡಿದರು. ಬಸವರಾಜ ಜವಾಯಿ ಪಾಲ್ಗೊಂಡಿದ್ದರು. ಶಿಕ್ಷಕ ನಾಗರಾಜ ನಡುವಿನಮಠ ನಿರ್ವಹಿಸಿದರು.


ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಪಡೆದ ಕನ್ನಡ, ಉರ್ದು ಹಾಗೂ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಜತೆಗೆ ಎಲ್ಲ ತಾಲೂಕು ಕ್ಷೇತ್ರ ಶಿಕ್ಷಣಾಕಾರಿಗಳನ್ನು, ಮುಖ್ಯೋಪಾಧ್ಯಾಯರು, ವಿಷಯವಾರು ನೂರು ಅಂಕ ಪಡೆಯಲು ಪಾತ್ರರಾದ ಶಿಕ್ಷಕರನ್ನು ಗೌರವಿಸಲಾಯಿತು.

ಬೆಳಗಾವಿ ವಿಭಾಗ ಮಟ್ಟದಲ್ಲಿ ಹಾವೇರಿ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಮೈಸೂರು, ಬೆಂಗಳೂರು ವಿಭಾಗಕ್ಕಿಂತ ಬೆಳಗಾವಿ ಡಿವಿಜನ್ ಈ ವರ್ಷದ ಫಲಿತಾಂಶದಲ್ಲಿ ಮೊದಲ ಸ್ಥಾನದಲ್ಲಿ ಇದೆ. ಗುಣಮಟ್ಟದ ಫಲಿತಾಂಶ ಬರಲು, ನಿಮ್ಮ ಸಕ್ರಿಯ ಪಾಲ್ಗೊಳ್ಳುವಿಕೆ ಬಹಳ ಮುಖ್ಯವಾಗಿದೆ. ಬರುವ ದಿನಗಳಲ್ಲಿ ಉತ್ತಮ ಫಲಿತಾಂಶ ಜಿಲ್ಲೆ ಪಡೆದುಕೊಳ್ಳುವಂತಾಗಲಿ ಎಂದು ಧಾರವಾಡ ಅಪರ ಆಯುಕ್ತರ ಕಚೇರಿ ನಿರ್ದೇಶಕ ಈಶ್ವರ ನಾಯಕ್ ಹೇಳಿದರು.

ಸಫಲತೆ ಮತ್ತು ಯಶಸ್ಸು ಕಠಿಣ ಪರಿಶ್ರಮ ಮಾಡಿದಾಗ ಮಾತ್ರ ಸಿಗುತ್ತದೆ. ಈ ವರ್ಷ ರಾಜ್ಯದಲ್ಲೇ 7ನೇ ಸ್ಥಾನ ಪಡೆದಿದ್ದು, ಐತಿಹಾಸಿಕ ಸಾಧನೆಯನ್ನು ಶಿಕ್ಷಣ ಇಲಾಖೆ ಮಾಡಿದೆ. ತಳಮಟ್ಟದ ಅಧಿಕಾರಿಗಳಿಂದ ಹಿಡಿದು, ಉನ್ನತ ಅಧಿಕಾರಿಗಳ ಪರಿಶ್ರಮ ಸಾಕಷ್ಟಿದೆ. ಬರುವ ವರ್ಷದಲ್ಲಿ ಮತ್ತೊಂದು ಸ್ಥಾನದಲ್ಲಿ ಜಿಗಿತಗೊಳ್ಳುವ ಹಾಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಡಯಟ್‌ ಪ್ರಾಚಾರ್ಯ ಝೆಡ್.ಎಂ. ಖಾಜಿ ಹೇಳಿದರು.