ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುವೈಚಾರಿಕ ನಾಟಕಗಳು ಹಾಗೂ ಪ್ರಯೋಗಾತ್ಮಕ ನಾಟಕಗಳ ಪ್ರದರ್ಶನದ ಅಗತ್ಯವಿದೆ ಎಂದು ಕೈಗಾರಿಕೋದ್ಯಮಿ ಡಾ. ಚಂದ್ರಶೇಖರ್ ಹೇಳಿದರು.
ನಗರದ ಝೆನ್ ಟೀಮ್ ಆಯೋಜಿಸಿದ್ದ ನೀನಾಸಂ ನಾಟಕಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಹೆಚ್ಚು ವೈಚಾರಿಕ ಹಾಗೂ ಪ್ರಯೋಗಾತ್ಮಕ ನಾಟಕಗಳನ್ನು ಸಜ್ಜುಗೊಳಿಸಿದವರಲ್ಲಿ ಕೆ. ವಿ. ಸುಬ್ಬಣ್ಣನವರು ಪ್ರಮುಖರು. ಮಲೆನಾಡಿನ ಒಂದು ಪುಟ್ಟ ಹಳ್ಳಿಯನ್ನು ಕೇಂದ್ರವಾಗಿಟ್ಟುಕೊಂಡು ಪ್ರಯೋಗಾತ್ಮಕ ನಾಟಕಗಳನ್ನು ಕರುನಾಡಿಗೆ ಪರಿಚಯಿಸಿದ ಕೀರ್ತಿ ಸುಬ್ಬಣ್ಣನವರದ್ದು ಎಂದರು.
ನೀನಾಸಂ ತಿರುಗಾಟಕ್ಕೆ ಈಗ ಸಾರ್ಥಕ 75 ವರ್ಷ. ಪ್ರಸಿದ್ಧ ರಂಗನಿರ್ದೇಶಕ ಬಿ.ವಿ. ಕಾರಂತ್ ಸೇರಿದಂತೆ ಹಲವಾರು ಪ್ರಮುಖ ನಿರ್ದೇಶಕರನ್ನು ಕರೆಸಿ ಅವರ ಕೈಯಲ್ಲಿ ನಾಟಕವನ್ನು ಕಟ್ಟಿಸಿದ ಕೀರ್ತಿ ಸುಬ್ಬಣ್ಣನವರದ್ದು ಎಂದರು.ಕೆ.ವಿ. ಸುಬ್ಬಣ್ಣನವರನ್ನು ನೆನಪಿಸಿಕೊಳ್ಳುವ ಹಾಗೆ ನಮ್ಮ ತುಮಕೂರು ಗುಬ್ಬಿ ವೀರಣ್ಣನವರನ್ನು ನೆನಪಿಸಿಕೊಳ್ಳಬೇಕು. ಇವರಿಬ್ಬರೂ ರಂಗ ದಿಗ್ಗಜರು. ಗುಬ್ಬಿ ವೀರಣ್ಣ ಗರಡಿಯಲ್ಲಿ ಪಳಗಿದ ಬಹಳಷ್ಟು ನಟರು ಇಂದು ಚಿತ್ರರಂಗದಲ್ಲಿ ಪ್ರಸಿದ್ಧಿ ಹೊಂದಿದ್ದಾರೆ ಎಂದರು.ನಟ ಹನುಮಂತೇಗೌಡ ಮಾತನಾಡಿ, ರಂಗಭೂಮಿಗೆ ಜನರ ಆಲೋಚನಾ ಕ್ರಮವನ್ನು ಬದಲಾಯಿಸುವ ಶಕ್ತಿ ಇದೆ. ಎಲ್ಲ ಕಲೆಗಳನ್ನು ಒಳಗೊಂಡಿರುವ ರಂಗಭೂಮಿ ಮೂಲಕ ಹೊಸ ಹೊಸ ಸಾಧ್ಯತೆಗಳು ತೆರೆದುಕೊಳ್ಳಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು. ತುಮಕೂರಿನ ಜನತೆಗೆ ವಿಶಿಷ್ಟವಾದ ನಾಟಕಗಳ ಪ್ರದರ್ಶನವನ್ನು ಝೆನ್ ಟೀಮ್ ನೀಡುತ್ತಾ ಬಂದಿದೆ. ಮತ್ತಷ್ಟು ವರ್ಷಗಳು ಝೆನ್ ಟೀಮ್ ರಂಗ ಭೂಮಿಯ ಕೆಲಸವನ್ನು ಮಾಡಲಿ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನಕುಮಾರ್ ಮಾತನಾಡಿ, ಟಿ.ವಿ. ಸೀರಿಯಲ್, ಮೊಬೈಲ್ ಅಬ್ಬರಗಳ ನಡುವೆಯೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದಿರುವುದು ಖುಷಿಯ ಸಂಗತಿ ಎಂದರು.ನಾಟಕ ಕಲೆ ಎಂಬುದು ಅತ್ಯುನ್ನತವಾದದ್ದು. ಅಭಿನಯದ ಮೂಲಕ ಸಮಸ್ತ ಲೋಕವನ್ನು ಕಾಣಿಸುವ ಶಕ್ತಿ ರಂಗಭೂಮಿಗೆ ಇದೆ ಎಂದರು. ತುಮಕೂರಿನಲ್ಲಿ ಹೊಸ ಅಲೆಯ ನಾಟಕಗಳು ಹೆಚ್ಚು ಹೆಚ್ಚು ಪ್ರದರ್ಶನಗೊಳ್ಳಲಿ ಆ ಮೂಲಕ ರಂಗಭೂಮಿಯಲ್ಲಿ ತುಮಕೂರಿಗೆ ವಿಶ್ವ ಮಾನ್ಯತೆ ಸಿಗುವಂತಾಗಲಿ ಎಂದರು.