ಸಾರಾಂಶ
ಸುಂಟಿಕೊಪ್ಪ ವಾಹನ ಚಾಲಕರ ಸಂಘದ ಸಾರ್ವಜನಿಕ ವೇದಿಕೆಯಲ್ಲಿ ಶುಕ್ರವಾರ ಆಯೋಜಿತವಾಗಿದ್ದ ಸುಂಟಿಕೊಪ್ಪ ವಾಹನ ಚಾಲಕರ 54ನೇ ಆಯುಧಪೂಜಾ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬ ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೆ ನಮ್ಮ ಜೀವನದಲ್ಲಿ ಕೆಟ್ಟದನ್ನು ದೂರ ಮಾಡಿ ಒಳಿತನ್ನು ಅಳವಡಿಸಿಕೊಳ್ಳಲು ಪ್ರೇರಣೆಯಾಗಬೇಕೆಂದು ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಹೇಳಿದರು.ಅವರು ಸುಂಟಿಕೊಪ್ಪ ವಾಹನ ಚಾಲಕರ ಸಂಘದ ಸಾರ್ವಜನಿಕ ವೇದಿಕೆಯಲ್ಲಿ ಶುಕ್ರವಾರ ಆಯೋಜಿತವಾಗಿದ್ದ ಸುಂಟಿಕೊಪ್ಪ ವಾಹನ ಚಾಲಕರ 54ನೇ ಆಯುಧಪೂಜಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯಅತಿಥಿ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಸುಂಟಿಕೊಪ್ಪ ವಾಹನ ಚಾಲಕರ ಸಂಘವು ಜಾತ್ಯತೀತ ಮತ್ತು ಪಕ್ಷಾತೀತ ನೆಲೆಗಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು, ಜನಮೆಚ್ಚುಗೆಗೆ ಪಾತ್ರವಾಗಿದೆ. ಈ ಬಾರಿ ಸ್ಥಳೀಯ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ನೀಡಿದ್ದು ಶ್ಲಾಘನೀಯ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್, ಸಮಾರಂಭದ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ವಾಹನ ಚಾಲಕರ ಸಂಘ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವುದು ಅತ್ಯಂತ ಹರ್ಷದಾಯಕ ವಿಚಾರ ಎಂದು ಹೇಳಿದ ಅವರು, ನವರಾತ್ರಿ ಆಚರಣೆಯ ಇತಿಹಾಸ, ಆಯುಧಪೂಜಾ ಮಹತ್ವವನ್ನು ವಿವರಿಸಿದರು.ಜಿ.ಪಂ. ಮಾಜಿ ಸದಸ್ಯ ಪಿ.ಎಂ.ಲತೀಫ್, ಜಿ.ಪಂ. ಮಾಜಿ ಸದಸ್ಯ ಬಿ.ಬಿ.ಭಾರತೀಶ್, ಗ್ರಾ.ಪಂ.ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಮಾತನಾಡಿದರು.ಇದೇ ಸಂದರ್ಭ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಶ್ರೂಶಷಕಿ ಚಿತ್ರಕುಮಾರಿ, ಆಶಾ ಕಾರ್ಯಕರ್ತೆ ಪಾರ್ವತಿ, ಹಿರಿಯ ಚಾಲಕ ಉಸ್ಮಾನ್ ಎಚ್., ನಿವೃತ್ತ ಯೋಧರಾದ ವಿಲಿಯಂ ಮೇನೆಜಸ್ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದ ವೇದಿಕೆಯಲ್ಲಿ ಸುಂಟಿಕೊಪ್ಪ ಯುವ ಮುಖಂಡ ಪಿ.ಎಲ್.ಹರ್ಷಾದ್, ಸುಂಟಿಕೊಪ್ಪ ಕಾಂಗ್ರೆಸ್ ಮುಖಂಡ ಅನೂಪ್ ಕುಮಾರ್, ಗ್ರಾ.ಪಂ. ಸದಸ್ಯ ಪಿ.ಎಫ್. ಸಬಾಸ್ಟೀನ್, ಸಿದ್ಧಲಿಂಗಪುರ ಕೃಷಿಕ ರಾಮಣ್ಣ ಎ.ಎಸ್., ವಾಹನ ಚಾಲಕರ ಸಂಘದ ಅಧ್ಯಕ್ಷ ಕೆ.ವಿ.ಕಿಟ್ಟಣ್ಣ ರೈ ಮತ್ತಿತರರು ಉಪಸ್ಥಿತರಿದ್ದರು.ವಿದ್ಯುತ್ ದೀಪಾಂಲಕೃತ ಭವ್ಯ ವೇದಿಕೆಯಲ್ಲಿ ಮಕ್ಕಳಿಂದ ನಡೆದ ಡ್ಯಾನ್ಸ್ ಮೇಳ ನೆರೆದಿದ್ದ ಸಾವಿರಾರು ಪ್ರೇಕ್ಷಕರ ಜನ ಮನ ಸೂರೆಗೊಂಡಿತು.ದೊಡ್ಡ ವಾಹನಗಳ ಮತ್ತು ಚಿಕ್ಕ ವಾಹನಗಳ ಅಲಂಕಾರ, ಅಂಗಡಿ ಮಳಿಗೆ, ವರ್ಕ್‌ಶಾಫ್, ಸರ್ಕಾರಿ ಕಚೇರಿಗಳಾದ ಚೆಸ್ಕಾಂ, ಪೊಲೀಸ್ ಠಾಣೆ, ಗ್ರಾಮ ಪಂಚಾಯಿತಿ, ಆಟೋ ರಿಕ್ಷಾ ಅಲಂಕಾರ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.